ಶೇಖ್ ಕರ್ನಿರೆಗೆ ಬಿಸಿಸಿಐ ಎನ್‌ಆರ್‌ಐ ಬಿಸಿನೆಸ್ ಎಕ್ಸಲೆನ್ಸ್ ಅವಾರ್ಡ್
ಮಂಗಳೂರು, ಫೆ. 10: ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ (ಬಿಸಿಸಿಐ) ವತಿಯಿಂದ ನಗರದ ಪುರಭವನದಲ್ಲಿ ನಡೆದ ‘ಬ್ಯಾರಿ ಮೇಳ’ದಲ್ಲಿ ಸೌದಿಯಲ್ಲಿ ಬೃಹತ್ ಉದ್ಯಮ ಸಮೂಹ ಸ್ಥಾಪಿಸಿದ ಯಶಸ್ವಿ ಉದ್ಯಮಿ, ಸಮಾಜ ಸೇವಕರಾದ ಶೇಖ್ ಕರ್ನಿರೆ ಅವರಿಗೆ ಬಿಸಿಸಿಐ ಎನ್‌ಆರ್‌ಐ ಬಿಸಿನೆಸ್ ಎಕ್ಸಲೆನ್ಸ್ ಅವಾರ್ಡ್ ಪ್ರದಾನಿಸಲಾಗಿದೆ.
ಕೆ.ಎಸ್. ಶೇಖ್ ಕರ್ನಿರೆ ಅವರ ಕಿರು ಪರಿಚಯ
ಶೇಖ್ ಕರ್ನಿರೆ 1966ರ ಡಿ.17ರಂದು ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ಸಮೀಪದ ಕರ್ನಿರೆಯಲ್ಲಿ ಕೆ.ಎಸ್. ಸಯೀದ್ ಕರ್ನಿರೆ ಹಾಗೂ ಆಮಿನಾ ದಂಪತಿಯ 11 ಮಕ್ಕಳಲ್ಲಿ ಹಿರಿಯವರು.
ಪ್ರಾಥಮಿಕ ಶಿಕ್ಷಣವನ್ನು ಕರ್ನಿರೆಯ ಶ್ರೀ ಶಾರದಾ ಖಾಸಗಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪಡೆದು, ಪ್ರೌಢ ಶಿಕ್ಷಣವನ್ನು ಪಲಿಮಾರಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪಡೆದ ಅವರು 1986ರಲ್ಲಿ ಕರ್ನಾಟಕ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಆಟೋ ಮೊಬೈಲ್ ಇಂಜಿನಿಯರಿಂಗ್ ನಲ್ಲಿ ಡಿಪ್ಲೊಮೊ ಪದವಿ ಪಡೆದರು. ಅವರು ಬಾಲ್ಯದಲ್ಲೇ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದರು.
ಮಂಗಳೂರಿನ ಪ್ರತಿಷ್ಠಿತ ಅರವಿಂದ್ ಮೋಟರ್ಸ್ ನಲ್ಲಿ ಅಪ್ರೆಂಟಿಸ್ ಆಗಿ ತಮ್ಮ ವೃತ್ತಿ ಜೀವನ ಆರಂಭಿಸಿದ ಶೇಕಬ್ಬ ಅವರಿಗೆ ವಿದೇಶ ಸಂದರ್ಶಿಸಬೇಕೆನ್ನುವ ಹಂಬಲವಿತ್ತು. ಆರ್ಥಿಕ ಅಡಚಣೆಗಳಿದ್ದರೂ ಹಲವರಿಂದ ಸಾಲವಾಗಿ ಹಣ ಪಡೆದು ತಮ್ಮ ಕನಸಿನ ಸೌದಿ ಅರೇಬಿಯಾದ ಮರಳುಗಾಡಿಗೆ ಪಯಣ ಬೆಳೆಸಿ ಅಲ್ ಮರ್ಹೂನ್ ಎಂಬ ಕಂಪೆನಿಯಲ್ಲಿ ಆಟೋಮೊಬೈಲ್ ಟೆಕ್ನಿಶಿಯನ್ ಆಗಿ 1987 ರಿಂದ 1989ರ ತನಕ ಹಗಲುರಾತ್ರಿ ದುಡಿದಿದ್ದರು.
ತನ್ನ ಕಾಲಲ್ಲಿ ತಾನು ನಿಲ್ಲಬೇಕು, ಸ್ವಂತ ಕಂಪೆನಿಯೊಂದನ್ನು ಮಾಡಬೇಕೆನ್ನುವ ಛಲ ಅವರಲ್ಲಿತ್ತು. ಪರಿಣಾಮವಾಗಿ 1990ರಲ್ಲಿ ಊರಿನಲ್ಲೆ ಬೀಡಿ ಉದ್ಯಮದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಊರಿನಲ್ಲಿ ಬೀಡಿ ಉದ್ಯಮ ಕುಂಠಿತಗೊಂಡಾಗ ಮತೊಮ್ಮೆ ಸೌದಿಗೆ ಮರುಪ್ರಯಾಣ ಬೆಳೆಸಿದರು. 1993 ರಿಂದ 2006ರವರೆಗೆ ಅನಬೀಬ್ ಅನ್ನುವ ಕಂಪೆನಿಯಲ್ಲಿ ವಿವಿಧ ಹುದ್ದೆಯನ್ನು ನಿಭಾಯಿಸಿದರು.
ಮೆಕ್ಯಾನಿಕಲ್ ಟೆಕ್ನಿಶಿಯನ್, ಹೆವಿ ಇಕ್ವಿಪ್ಮೆಂಟ್ ಆಪರೇಟರ್, ಸೂಪರ್ವೈಸರ್ ನಂತಹ ಕಠಿಣ ಕೆಲಸಗಳನ್ನು ರಾತ್ರಿ ಹಗಲೆನ್ನದೆ ದುಡಿದಿದ್ದು, ತನ್ನ ಕರ್ತವ್ಯನಿಷ್ಠೆಗಾಗಿ ಪ್ರಶಂಶೆಯನ್ನು ಗಿಟ್ಟಿಸಿಕೊಂಡಿದ್ದರು.
ತನ್ನ ದುಡಿಮೆಯ ಕಾಲದಲ್ಲಿ ಬಹಳಷ್ಟು ಕಷ್ಟ ಅನುಭವಿಸಿದ್ದ ಅವರು ನಂತರ ತನ್ನ ಮೂವರು ಸಹೋದರರನ್ನು ಸೌದಿಗೆ ಉದ್ಯೋಗಕ್ಕಾಗಿ ಕರೆಸಿದರು ಮತ್ತು ತನ್ನ ಸಹೋದರರಿಗೆ ಉತ್ತಮ ಕಂಪೆನಿಗಳಲ್ಲಿ ಉದ್ಯೋಗ ದೊರಕಿಸುವಲ್ಲಿ ಯಶಸ್ವಿಯಾದರು.
2005ರಲ್ಲಿ ಅವರು ತನ್ನ ಸಹೋದರರೊಂದಿಗೆ ಸೇರಿ ಎಕ್ಸ್ಪರ್ಟೈಸ್ ಎನ್ನುವ ಸಂಸ್ಥೆಯೊಂದನ್ನು ಸ್ಥಾಪಿಸಿದರು. ಘನ ಉಪಕರಣ ಹಾಗೂ ಮಾನವ ಸಂಪನ್ಮೂಲಗಳನ್ನು ವಿವಿಧ ಕಂಪನಿಗಳಿಗೆ ಒದಗಿಸುವ ಹೆವಿ ಇಕ್ವಿಪ್ಮೆಂಟ್ ಆ್ಯಂಡ್ ಮ್ಯಾನ್ ಪವರ್ ಸಪ್ಲೈ ಕಂಪನಿಯಾಗಿ ಎಕ್ಸ್ಪರ್ಟೈಸ್ ಸೌದಿಯ ಜುಬೈಲ್ ನಲ್ಲಿ ಕಾರ್ಯಾರಂಭಿಸಿತು. 2005ರಲ್ಲಿ ಕೇವಲ ಸಹೋದರರು ಮಾತ್ರ ಕಂಪನಿಯ ಉದ್ಯೋಗಿಗಳಾಗಿದ್ದರು. ನಂತರ ಕಳೆದ 15 ವರ್ಷಗಳಲ್ಲಿ ಸುಮಾರು 25,000ಕ್ಕೂ ಹೆಚ್ಚು ಕುಟುಂಬಗಳಿಗೆ ಆಧಾರ ನೀಡಿ, ಪ್ರಸಕ್ತ 7000ಕ್ಕೂ ಹೆಚ್ಚು ನೌಕರರ ನಂಬಿಕಸ್ಥ ಸಂಸ್ಥೆಯಾಗಿ ನೆಲೆ ನಿಂತಿದೆ.
ಶೇಖ್ ಕರ್ನಿರೆ ಅವರು ಸಾಮಾಜಿಕ ಕಳಕಳಿ ಹೊಂದಿದ್ದು, ತಮ್ಮ ಊರಿನ ಎಲ್ಲ ಕುಟುಂಬದ ಓರ್ವ ಸದಸ್ಯನಿಗೆ ಉದ್ಯೋಗ ನೀಡಲಾರಂಭಿಸಿದರು. ತಮ್ಮ ಕುಟುಂಬ ನೆರೆಕರೆಯ ಎಲ್ಲ ಜನರಿಗೆ ವಿದ್ಯಾಭ್ಯಾಸದ ಅವಶ್ಯಕತೆಯನ್ನು ಮನವರಿಕೆ ಮಾಡಿ ನೂರಾರು ಮಕ್ಕಳಿಗೆ ವಿದ್ಯಾಭ್ಯಾಸ ಮಾಡಲು ಸಹಕಾರ ನೀಡುತ್ತಿದ್ದಾರೆ. ಅವರು ಇಂದಿಗೂ ದಿನದ 16 ಗಂಟೆ ತಮ್ಮ ವೃತ್ತಿಯಲ್ಲಿ ತೊಂಡಗಿಸಿಕೊಂಡಿರುತ್ತಾರೆ.
ಶೇಖ್ ಕರ್ನಿರೆ ತಮ್ಮ ಸಹೋದರರೊಂದಿಗೆ ಸೇರಿ ಫಾದರ್ ಮುಲ್ಲರ್ ಆಸ್ಪತ್ರೆಗೆ ಡಯಾಲಿಸಿಸ್ ಯಂತ್ರವನ್ನು ದೇಣಿಗೆಯಾಗಿ ನೀಡಿ, ಜಂಇಯ್ಯತುಲ್ ಫಲಾಹ್ ಇದರ ಸಹಯೋಗದೊಂದಿಗೆ ನೂರಾರು ಕಿಡ್ನಿ ರೋಗಿಗಳಿಗೆ ತಿಂಗಳಿಗೆ ಸುಮಾರು ಒಂದೂವರೆ ಲಕ್ಷದವರೆಗೆ ಸಹಾಯ ಧನವನ್ನು ನೀಡುತಿದ್ದಾರೆ. ಹಲವಾರು ಬಡ ಕುಟುಂಬಗಳಿಗೆ ಹಜ್, ಉಮ್ರಾಕ್ಕೆ ಸಹಾಯ ನೀಡುತ್ತಿದ್ದಾರೆ. ಜೀವನ ನಿರ್ವಹಣೆ ಕಷ್ಟಕರವಾಗಿದ್ದ ನೂರಾರು ಬಡ ಕುಟುಂಬಗಳಿಗೆ ಉಚಿತವಾಗಿ ಸೌದಿ ವೀಸಾ ನೀಡಿ ಅವರ ಕುಟುಂಬಕ್ಕೆ ಆಸರೆ ನೀಡಿದ್ದಾರೆ.
ಶೇಖ್ ಕರ್ನಿರೆ ಸಹೋದರರು ಸುಮಾರು 100ಕ್ಕಿಂತಲೂ ಅಧಿಕ ಬಡ ಹೆಣ್ಣು ಮಕ್ಕಳ ಮದುವೆಗೆ ಸಹಕಾರ ನೀಡಿರುತ್ತಾರೆ. ಹಲವಾರು ಮಸೀದಿಗಳ ನಿರ್ಮಾಣ ಕಾರ್ಯಗಳಿಗೆ ನೆರವನ್ನು ನೀಡಿ, ಪ್ರಸಕ್ತ ಹೆಜಮಾಡಿಯಲ್ಲಿ ಸಾರ್ವಜನಿಕರಿಗೆ ಅನುಕೂಲಕ್ಕಾಗಿ ಮಸೀದಿ ನಿರ್ಮಿಸುತ್ತಿದ್ದಾರೆ. ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಕ್ರೀಡೆಗಾಗಿ ನೆರವನ್ನು ನೀಡುತ್ತಿರುವ ಅವರ ಸರಳತೆ, ಸ್ನೇಹಶೀಲತೆ, ಮಾನವೀಯತೆ, ಸಾಮಾಜಿಕ ಕಳಕಳಿ, ಕಠಿಣ ಶ್ರಮ ಇಂದಿನ ಯುವ ಪೀಳಿಗೆಗೆ ಮಾದರಿಯಾಗಿದೆ.