ಅರ್ನಬ್ ಗೋಸ್ವಾಮಿ ವಿರುದ್ಧ ಎಫ್ ಐಆರ್ ದಾಖಲಿಸಲು ಕೋರ್ಟ್ ಆದೇಶ

Update: 2019-02-10 17:36 GMT

ಹೊಸದಿಲ್ಲಿ,ಫೆ.10: ಕಾಂಗ್ರೆಸ್ ನಾಯಕ ಶಶಿ ತರೂರ್ ಅವರು ಸಲ್ಲಿಸಿರುವ ದೂರಿನ ಹಿನ್ನೆಲೆಯಲ್ಲಿ ರಿಪಬ್ಲಿಕ್ ಟಿವಿಯ ಮುಖ್ಯ ಸಂಪಾದಕ ಅರ್ನಾಬ್ ಗೋಸ್ವಾಮಿ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಇಲ್ಲಿಯ ಮಹಾನಗರ ನ್ಯಾಯಾಲಯವು ದಿಲ್ಲಿ ಪೊಲೀಸರಿಗೆ ಆದೇಶಿಸಿದೆ.

ತನ್ನ ಪತ್ನಿ ಸುನಂದಾ ಪುಷ್ಕರ್ ಸಾವಿಗೆ ಸಂಬಂಧಿಸಿದ ತನಿಖಾ ವರದಿಯ ಭಾಗವಾಗಿದ್ದ ರಹಸ್ಯ ದಾಖಲೆಗಳನ್ನು ಮತ್ತು ಪೊಲೀಸ್ ದಾಖಲೆಗಳ ಆಂತರಿಕ ಟಿಪ್ಪಣಿಗಳನ್ನು ಗೋಸ್ವಾಮಿ ಪಡೆದುಕೊಂಡಿದ್ದಾರೆ ಎಂದು ತನ್ನ ದೂರಿನಲ್ಲಿ ಆರೋಪಿಸಿರುವ ತರೂರ್,ತನಿಖೆಯು ಪ್ರಗತಿಯಲ್ಲಿರುವಾಗ ಅದರ ವಿವರಗಳನ್ನು ಸಾರ್ವಜನಿಕರೊಂದಿಗೆ ಅಥವಾ ಮಾಧ್ಯಮಗಳೊಂದಿಗೆ ಹಂಚಿಕೊಳ್ಳಲು ಅವಕಾಶವಿಲ್ಲ ಎಂದು ಹೇಳಿದ್ದಾರೆ.

ಗೋಸ್ವಾಮಿಯವರ ಸುದ್ದಿವಾಹಿನಿಯು ವೀಕ್ಷಕರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನವಾಗಿ ಉದ್ದೇಶಪೂರ್ವಕವಾಗಿ ತನ್ನ ವಿರುದ್ಧ ಮಾನಹಾನಿಕರ ಹೇಳಿಕೆಗಳನ್ನು ನೀಡಿದೆ. ಅಲ್ಲದೆ ಅದು ತನ್ನ ಅನುಮತಿಯಿಲ್ಲದೆ ತನ್ನ ಇಮೇಲ್‌ಗಳನ್ನು ಪಡೆದುಕೊಂಡಿದೆ ಎಂದೂ ತರೂರ್ ಆರೋಪಿಸಿದ್ದಾರೆ.

ಸಂಜ್ಞೇಯ ಅಪರಾಧ ನಡೆದಿರುವುದನ್ನು ತರೂರ್ ಅವರ ದೂರು ಮತ್ತು ಲಭ್ಯ ದಾಖಲೆಗಳು ಬೆಟ್ಟು ಮಾಡುತ್ತಿವೆ. ಈ ದಾಖಲೆಗಳು ಪ್ರಸ್ತಾವಿತ ಆರೋಪಿಗಳ ಕೈಗೆ ಹೇಗೆ ಸೇರಿದವು ಎನ್ನುವುದು ಸ್ಪಷ್ಟವಿಲ್ಲ. ಹೀಗಾಗಿ ಈ ವಿಷಯದಲ್ಲಿ ಪೊಲೀಸ್ ತನಿಖೆ ನಡೆಯುವುದು ಅಗತ್ಯವಿದೆ ಎಂದು ನ್ಯಾಯಾಲಯವು ಹೇಳಿದೆ. ಜ.21ರಂದು ನ್ಯಾಯಾಲಯದ ಈ ಆದೇಶ ಹೊರಬಿದ್ದಿದ್ದು,ಎ.4ರಂದು ಮುಂದಿನ ವಿಚಾರಣೆ ನಡೆಯಲಿದೆ. ತರೂರ್ ಅವರು ಈಗಾಗಲೇ ಗೋಸ್ವಾಮಿ ಮತ್ತು ರಿಪಬ್ಲಿಕ್ ಟಿವಿ ವಿರುದ್ಧ ದಿಲ್ಲಿ ಉಚ್ಚ ನ್ಯಾಯಾಲಯದಲ್ಲಿ ಕಾನೂನು ಕ್ರಮ ಆರಂಭಿಸಿರುವುದನ್ನು ನ್ಯಾಯಾಲಯವು ಗಮನಕ್ಕೆ ತೆಗೆದುಕೊಂಡಿದೆ.

ಕಳೆದ ತಿಂಗಳು ಕೇರಳ ಉಚ್ಚ ನ್ಯಾಯಾಲಯವು ಗೋಸ್ವಾಮಿ ವಿರುದ್ಧ ತರೂರ್ ದಾಖಲಿಸಿರುವ ಕ್ರಿಮಿನಲ್ ಮಾನನಷ್ಟ ಪ್ರಕರಣದಲ್ಲಿ ಕಲಾಪಗಳಿಗೆ ತಡೆಯಾಜ್ಞೆ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News