ಮಂಗಳೂರು: ರೈಲು ಢಿಕ್ಕಿ ಹೊಡೆದು ಕಾಲ್ ಸೆಂಟರ್ ಉದ್ಯೋಗಿ ಮೃತ್ಯು
Update: 2019-02-10 22:25 IST
ಮಂಗಳೂರು, ಫೆ.10: ನಗರದ ಮೊರ್ಗನ್ಸ್‌ಗೇಟ್‌ನಲ್ಲಿರುವ ಕಾಲ್ ಸೆಂಟರ್ ಉದ್ಯೋಗಿ ದೀಪಕ್ ಬರ್ಕೆ (41) ಶನಿವಾರ ರಾತ್ರಿ ಪಡೀಲ್ ಸಮೀಪ ರೈಲು ಢಿಕ್ಕಿ ಹೊಡೆದು ಮೃತಪಟ್ಟಿದ್ದಾರೆ. ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರಬೇಕು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಮೂಲತಃ ಬರ್ಕೆ ನಿವಾಸಿಯಾಗಿದ್ದ ಅವರು, ಕಳೆದ ಎರಡು ವರ್ಷಗಳ ಹಿಂದೆ ಪಡೀಲ್ ಸಮೀಪದ ಕರ್ಮಾರ್ ಬಳಿ ಪ್ಲಾಟ್‌ನಲ್ಲಿ ತನ್ನ ಸಹೋದರಿ ಜತೆಯಲ್ಲಿ ವಾಸಿಸುತ್ತಿದ್ದರು. ಅವಿವಾಹಿತರಾಗಿದ್ದ ಅವರು ಕಳೆದ ಕೆಲವು ತಿಂಗಳುಗಳಿಂದ ಮಾನಸಿಕವಾಗಿ ನೊಂದಿದ್ದರು. ಇದೇ ಕಾರಣದಿಂದ ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.
ಮಂಗಳೂರು ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.