ಮಂಗಳೂರು: ಹುಕ್ಕಾಬಾರ್ ಮೇಲೆ ಪೊಲೀಸ್ ದಾಳಿ; ಸೊತ್ತು ವಶ
ಮಂಗಳೂರು, ಫೆ.10: ಯಾವುದೇ ಪರವಾನಿಗೆ ಇಲ್ಲದೇ ಅನಧಿಕೃತವಾಗಿ ಕಾರ್ಯಾಚರಿಸುತ್ತಿದ್ದ ‘ಸ್ಮೋಕಿಂಗ್ ಹಟ್’ ಹೆಸರಿನ ಹುಕ್ಕಾಬಾರ್ ಮೇಲೆ ಪೊಲೀಸರು ದಾಳಿ ನಡೆಸಿದ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಮುನ್ನೂರು ಗ್ರಾಮದಲ್ಲಿ ರವಿವಾರ ನಡೆದಿದೆ.
ಹುಕ್ಕಾ ಬಾರಿನ ಮಾಲಕ ಜೋಜೋ ಜೋಸೆಫ್ ಮತ್ತು ಮ್ಯಾನೇಜರ್ ಸಲೀಂ ಎಂಬವರು ಅನಧಿಕೃತವಾಗಿ ಹುಕ್ಕಾ ಬಾರ್ ನಡೆಸುತ್ತಿದ್ದರು ಎಂದು ಆರೋಪಿಸಲಾಗಿದೆ. ದಾಳಿ ಸಂದರ್ಭ ಸಾರ್ವಜನಿಕರಿಗೆ ಹುಕ್ಕಾ ಫ್ಲೇವೆರ್‌ಗಳನ್ನು ಮಾರಾಟ ಮಾಡುತ್ತಿರುವುದು ಕಂಡು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದಾಳಿ ನಡೆಸಿದ ಪೊಲೀಸರು ಸುಮಾರು 57 ಪ್ಯಾಕ್ ಸ್ಮೋಕ್ಕಿಂಗ್ ಹುಕ್ಕಾ ಫ್ಲೇವರ್‌ಗಳು, ಎಂಟು ಹುಕ್ಕಾ ಪಾಟ್‌ಗಳು, 15 ಹುಕ್ಕಾ ಪೈಪ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರ್ಯಾಚರಣೆಯಲ್ಲಿ ಉಳ್ಳಾಲ ಠಾಣಾ ಪೊಲೀಸ್ ನಿರೀಕ್ಷಕ ಗೋಪಿಕೃಷ್ಣ ಕೆ.ಆರ್. ಸೂಚನೆಯಂತೆ ಪೊಲೀಸ್ ಉಪ ನಿರೀಕ್ಷಕ ಗುರಪ್ಪ ಕಾಂತಿ, ರಂಜಿತ್, ಪ್ರಶಾಂತ್, ದಿಲ್ಲೆಪ್ಪ, ಅಕ್ಬರ್ ಭಾಗವಹಿಸಿದ್ದರು.