ಬನ್ನೂರಿನಲ್ಲಿ ಮನೆ ದುರಸ್ಥಿತಿಗೊಳಿಸಿ ಕುಟುಂಬಕ್ಕೆ ಹಸ್ತಾಂತರಿಸಿದ ಎಸ್‍ಡಿಪಿಐ ಕಾರ್ಯಕರ್ತರು

Update: 2019-02-10 17:26 GMT

ಪುತ್ತೂರು, ಫೆ. 10: ತಾಲೂಕಿನ ನಗರಸಭಾ ವ್ಯಾಪ್ತಿಯ ಬನ್ನೂರು ಎಂಬಲ್ಲಿ ಬಡ ಕುಟುಂಬದ ಮನೆಯೊಂದನ್ನು ಸಮರ್ಪಕವಾಗಿ ದುರಸ್ತಿಗೊಳಿಸಿದ ಎಸ್‍ಡಿಪಿಐ ಕಾರ್ಯಕರ್ತರು ಕುಟುಂಬಕ್ಕೆ ಹಸ್ತಾಂತರಿಸಿದರು.

ಬನ್ನೂರಿನ ನಗರಸಭಾ ವಾರ್ಡ್ ನಂ.5ರಲ್ಲಿ ವಾಸವಾಗಿರುವ ರಾಮಣ್ಣ ನಾಯ್ಕ್ ಎಂಬವರ ಮನೆಯು ತೀರಾ ನಾದುರಸ್ತಿಯಲ್ಲಿದ್ದು7 ಮನೆಯ ಮೇಲ್ಛಾವಣಿ ಬೀಳುವ ಸ್ಥಿತಿಯಲ್ಲಿತ್ತು. ಇದನ್ನು ಗಮನಿಸಿದ ಎಸ್‍ಡಿಪಿಐನ ಸ್ಥಳೀಯ ವಾರ್ಡ್ ಸದಸ್ಯೆ ಫಾತಿಮತ್ ಝೌರಾ ಅವರು ಈ ವಿಚಾರವನ್ನು ಎಸ್‍ಡಿಪಿಐ ಕಾರ್ಯಕರ್ತರ ಗಮನಕ್ಕೆ ತಂದು ದುರಸ್ತಿಗೊಳಿಸಿ ಕೊಡುವಂತೆ ಕೇಳಿಕೊಂಡಿದ್ದರು. ಅದರಂತೆ ಕಾರ್ಯೋನ್ಮುಖರಾದ ಕಾರ್ಯಕರ್ತರು ಮನೆಯನ್ನು ದುರಸ್ಥಿಗೊಳಿಸಿ ಶುಕ್ರವಾರ ಹಸ್ತಾಂತರಿಸುವ ಕಾರ್ಯಕ್ರಮ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ನಗರಸಭಾ ಸ್ಥಳೀಯ ಸದಸ್ಯೆ ಕೆ.ಫಾತಿಮತ್ ಝೌರಾ ಅವರು ನಮ್ಮ ವಾರ್ಡ್‍ನಲ್ಲಿ ನಗರಸಭೆ ಚುನಾವಣೆಯಲ್ಲಿ ಎಸ್‍ಡಿಪಿಐ ಪಕ್ಷ ಗೆಲುವು ಸಾಧಿಸಿದ ಬಳಿಕ ನಮ್ಮ ವಾರ್ಡ್‍ನಲ್ಲಿ ಜಾತಿ-ಮತ ಬೇಧವಿಲ್ಲದೆ ಸಾಕಷ್ಟು ಕೆಲಸ ನಡೆದಿದೆ. ವಿದ್ಯುತ್ ಸಂಪರ್ಕ ಇಲ್ಲದ ಮನೆಗೆ ವಿದ್ಯುತ್ ಸಂಪರ್ಕ, ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಬೃಹತ್ ರಕ್ತದಾನ ಶಿಬಿರ, ಮನೆ ದುರಸ್ಥಿ ಕಾರ್ಯ ಮುಂತಾದ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಹೇಳಿದರು.

ಎಸ್‍ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಕೆ.ಎ.ಸಿದ್ದಿಕ್ ಮಾತನಾಡಿ ಪ್ರವಾದಿಯವರ ಉವಾಚದಂತೆ ನಿರ್ಗತಿಕರಿಗೆ ಕೈಲಾದ ಸಹಾಯ ಮಾಡುವುದು ನಮ್ಮ ಸಮುದಾಯದಲ್ಲಿ ಎಲ್ಲರ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಎಸ್‍ಡಿಪಿಐ ಪಕ್ಷದ ಕಾರ್ಯಕರ್ತರು ಸ್ಥಳೀಯ ನಗರಸಭಾ ಸದಸ್ಯರ ಸಹಕಾರದಿಂದ ಸ್ಥಳೀಯ ಬಡ ರಾಮಣ್ಣ ನಾಯ್ಕ್ ಅವರ ಮನೆಯ ಮೇಲ್ಛಾವಣಿ ದುರಸ್ಥಿಗೊಳಿಸಿ ಹಸ್ತಾಂತರಿಸಲಾಗಿದೆ. ಮುಂದಿನ ದಿನಗಳಲ್ಲಿ ಈ ವಾರ್ಡನ್ನು ಮಾದರಿ ವಾರ್ಡ್ ಮಾಡುವ ಯೋಜನೆಯಿದೆ ಎಂದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷ ಇಬ್ರಾಹಿಂ ಸಾಗರ್, ಕಾರ್ಯದರ್ಶಿ ಅಶ್ರಫ್ ಬಾವ, ಪುತ್ತೂರು ನಗರ ಅಧ್ಯಕ್ಷ ಬಶೀರ್ ಕೂರ್ನಡ್ಕ, ಬನ್ನೂರು ವಲಯಾಧ್ಯಕ್ಷ ಮೊಹಮ್ಮದ್ ಹುಸೇನ್, ಸಲೀಂ, ಇಬ್ರಾಹಿಂ, ಕೆ.ಎಂ.ರಫೀಕ್, ಸುಲೈಮಾನ್, ಹಝ್ರತ್ ರಜಬ್ ಸಾಹೇಬ್, ಅಕ್ಬರ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News