ಬಂಟ್ವಾಳ: ಪಿಎಫ್‍ಐ ವತಿಯಿಂದ ವಿದ್ಯಾರ್ಥಿ ವೇತನ ವಿತರಣೆ
ಬಂಟ್ವಾಳ, ಫೆ. 10: ಪಿಎಫ್‍ಐ ರಾಷ್ಟ್ರದಾದ್ಯಂತ ಹಮ್ಮಿಕೊಂಡಿರುವ ನ್ಯಾಷನಲ್ ಸ್ಕಾಲರ್ ಶಿಪ್-2019 ಅಭಿಯಾನದ ಅಂಗವಾಗಿ ದ.ಕ ಜಿಲ್ಲೆಯ ವ್ಯಾಪ್ತಿಯ ವಿದ್ಯಾರ್ಥಿಗಳಿಗೆ ಎರಡನೆ ಹಂತದ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮವು ಬಂಟ್ವಾಳದ ಸೂರ್ಯವಂಶ ಸಭಾಂಗಣದಲ್ಲಿ ರವಿವಾರ ನಡೆಯಿತು.
ಕಾರ್ಯಕ್ರಮದಲ್ಲಿ ಒಟ್ಟು 150 ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ಚೆಕ್ ವಿತರಿಸಲಾಯಿತು.
ಪಿ.ಎ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲ ಪ್ರೊ. ಕೆ.ಪಿ. ಸೂಫಿ ಮುಖ್ಯ ಅತಿಥಿಗಳಾಗಿ ಮಾತನಾಡಿ, ಸಾಮಾಜಿಕ ಕೆಲಸಗಳಲ್ಲಿ ತೊಡಗಿಕೊಂಡು ಈ ರೀತಿ ಶೈಕ್ಷಣಿಕ ವಿಚಾರಗಳಿಗೆ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸುತ್ತಿರುವ ಪಿಎಫ್‍ಐ ಯ ಕಾರ್ಯವೈಖರಿಯು ಶ್ಲಾಘನೀಯ ಮತ್ತು ಫಲಾನುಭವಿ ವಿದ್ಯಾರ್ಥಿಗಳು ಕಠಿಣ ಪರಿಶ್ರಮದೊಂದಿಗೆ ನಿರ್ದಿಷ್ಟ ಗುರಿಯನ್ನಿಟ್ಟು ಜೀವನದಲ್ಲಿ ಮುಂದೆ ಸಾಗಬೇಕು ಎಂದು ಹೇಳಿದರು.
ಅನುಗ್ರಹ ವುಮೆನ್ಸ್ ಕಾಲೇಜಿನ ಸಂಚಾಲಕ ಅಮಾನುಲ್ಲಾ ಖಾನ್ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಪಿಎಫ್‍ಐ ಬಂಟ್ವಾಳ ತಾಲೂಕು ಅಧ್ಯಕ್ಷ ಇಜಾಝ್ ಅಹ್ಮದ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಎಸ್‍ಡಿಪಿಐ ದ.ಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಾಹುಲ್ ಹಮೀದ್ ಎಸ್.ಎಚ್, ಪುರಸಭಾ ಸದಸ್ಯರಾದ ಇದ್ರೀಸ್ ಪಿ.ಜೆ, ಸಂಶಾದ್ ಮತ್ತು ಸಿಎಫ್‍ಐ ರಾಜ್ಯ ಉಪಾಧ್ಯಕ್ಷೆ ಮುರ್ಶಿದಾ ಬಾನು ಉಪಸ್ಥಿತರಿದ್ದರು.
ಸಂಪನ್ಮೂಲ ವ್ಯಕ್ತಿಗಳಾಗಿ ಜಿಲ್ಲಾ ಅಲ್ಪಸಂಖ್ಯಾತ ಇಲಾಖೆಯ ಮಾಹಿತಿ ಕೇಂದ್ರದ ಸಂಯೋಜಕ ಅಬ್ದುಲ್ ಖಾದರ್ ಮತ್ತು ಇಮ್ತಿಯಾಝ್ ತುಂಬೆ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು. ಪಿಎಫ್‍ಐ ತಾಲೂಕು ಕಾರ್ಯದರ್ಶಿ ಸಲೀಂ ಸ್ವಾಗತಿಸಿ, ಇಮ್ರಾನ್ ಪಿ.ಜೆ. ಕಾರ್ಯಕ್ರಮ ನಿರೂಪಿಸಿದರು.