ಭಾರತದ ಮಾಜಿ ವೇಗದ ಬೌಲರ್ ಅಮಿತ್ ಭಂಡಾರಿ ಮೇಲೆ ಹಲ್ಲೆ

Update: 2019-02-11 12:07 GMT

ಹೊಸದಿಲ್ಲಿ, ಫೆ.11: ಭಾರತದ ಮಾಜಿ ವೇಗದ ಬೌಲರ್, ಡಿಡಿಸಿಎ ಹಿರಿಯ ಆಯ್ಕೆ ಸಮಿತಿ ಅಧ್ಯಕ್ಷರೂ ಆಗಿರುವ ಅಮಿತ್ ಭಂಡಾರಿ ಮೇಲೆ ಅಪರಿಚಿತ ಗುಂಪೊಂದು ಹಲ್ಲೆ ನಡೆಸಿರುವ ಘಟನೆ ವರದಿಯಾಗಿದೆ. ಸೈಂಟ್ ಸ್ಟೀಫನ್ಸ್ ಮೈದಾನದಲ್ಲಿ ಅಂಡರ್-23 ಕ್ರಿಕೆಟ್ ತಂಡದ ಟ್ರಯಲ್ಸ್ ನಡೆಯುತ್ತಿದ್ದಾಗ ಈ ಅಹಿತಕರ ಘಟನೆ ನಡೆದಿದೆ.

ಹಲ್ಲೆಯಿಂದಾಗಿ ಭಂಡಾರಿ ಅವರ ತಲೆ ಹಾಗೂ ಕಿವಿ ಭಾಗಕ್ಕೆ ಗಾಯವಾಗಿದ್ದು ಅವರನ್ನು ಸಹೋದ್ಯೋಗಿ ಸುಖ್ವಿಂದರ್ ಸಿಂಗ್ ಅವರು ಸಿವಿಲ್ ಲೈನ್ಸ್‌ನ ಸಂತ ಪರಮಾನಂದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪೊಲೀಸ್ ಸ್ಥಳಕ್ಕೆ ಧಾವಿಸುವ ವೇಳೆಗೆ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.

‘‘ನಾವು ಘಟನೆಯ ಸಮಗ್ರ ವರದಿ ಕಲೆಹಾಕಲು ಯತ್ನಿಸುತ್ತೇವೆ. ನನಗೆ ಗೊತ್ತಿರುವ ಪ್ರಕಾರ ರಾಷ್ಟ್ರೀಯ ಅಂಡರ್-23 ಟೂರ್ನಮೆಂಟ್‌ನ ಸಂಭಾವ್ಯ ಪಟ್ಟಿಯಲ್ಲಿ ಸ್ಥಾನ ಪಡೆಯದ ಅತೃಪ್ತ ಆಟಗಾರನ ಕೃತ್ಯ ಇದಾಗಿದೆ. ಸ್ಥಳೀಯ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಟೀಫನ್ಸ್ ಮೈದಾನಕ್ಕೆ ತಲುಪಿದ್ದಾರೆ. ದಿಲ್ಲಿ ಪೊಲೀಸ್ ಆಯುಕ್ತ ಅಮೂಲ್ಯ ಪಟ್ನಾಯಕ್‌ರೊಂದಿಗೆ ಖುದ್ದಾಗಿ ಮಾತನಾಡಿದ್ದೇನೆ. ತಪ್ಪಿತಸ್ಥರಿಗೆ ಶಿಕ್ಷೆ ನೀಡದೆ ಬಿಡುವುದಿಲ್ಲ. ಈ ಕೃತ್ಯದಲ್ಲಿ ಒಳಗೊಂಡಿರುವ ಎಲ್ಲರ ಮೇಲೆ ಕಠಿಣ ಕ್ರಮ ಕೈಗೊಳ್ಳುವ ಭರವಸೆ ನೀಡುವೆ. ನಾವು ಎಫ್‌ಐಆರ್‌ನ್ನು ದಾಖಲಿಸಿದ್ದೇವೆ’’ ಎಂದು ಡೆಲ್ಲಿ ಹಾಗೂ ಜಿಲ್ಲಾ ಕ್ರಿಕೆಟ್ ಸಂಸ್ಥೆ(ಡಿಡಿಸಿಎ)ಅಧ್ಯಕ್ಷ ರಜತ್ ಶರ್ಮಾ ಹೇಳಿದ್ದಿೆ.

ಘಟನೆಯ ಬಗ್ಗೆ ವಿವರಿಸಿದ ದಿಲ್ಲಿ ಹಿರಿಯರ ಹಾಗೂ ಅಂಡರ್-23 ತಂಡದ ಮ್ಯಾನೇಜರ್ ಶಂಕರ್ ಸೈನಿ, ‘‘ನಾನು ಟೆಂಟ್‌ನೊಳಗೆ ಸಹೋದ್ಯೋಗಿಯೊಂದಿಗೆ ಊಟ ಮಾಡುತ್ತಿದ್ದೆ. ಭಂಡಾರಿ ಅವರು ಇತರ ಆಯ್ಕೆಗಾರರು ಹಾಗೂ ಹಿರಿಯರ ತಂಡದ ಕೋಚ್ ಮಿಥುನ್ ಮನ್ಹಾಸ್ ಸಂಭಾವ್ಯ ಆಟಗಾರರ ಟ್ರಯಲ್ ಪಂದ್ಯವನ್ನು ನೋಡುತ್ತಿದ್ದರು. ಕೆಲವು ಜನರ ಗುಂಪು ಮೈದಾನ ಬಳಿ ಬಂದು ಭಂಡಾರಿಯವರತ್ತ ತೆರಳಿತು. ಇಬ್ಬರು ವ್ಯಕ್ತಿಗಳು ಹಾಗೂ ಭಂಡಾರಿ ಮಧ್ಯೆ ಮಾತಿನ ಚಕಮಕಿ ನಡೆಯಿತು. ಆ ಬಳಿಕ ಅವರು ಅಲ್ಲಿಂದ ತೆರಳಿದರು. ತಕ್ಷಣವೇ 15 ಜನರಿದ್ದ ತಂಡ ಹಾಕಿ ಸ್ಟಿಕ್ಸ್, ರಾಡ್ ಹಾಗೂ ಸೈಕಲ್ ಚೈನ್‌ನೊಂದಿಗೆ ಬಂದು ಹಲ್ಲೆ ನಡೆಸಿದೆ. ಟ್ರಯಲ್ಸ್‌ನಲ್ಲಿದ್ದ ಇತರ ಹುಡುಗರು ಹಾಗೂ ನಾನು ಭಂಡಾರಿಯವರ ರಕ್ಷಣೆಗೆ ಧಾವಿಸಿದೆವು. ಆ ಗುಂಪು ನಮಗೆ ಬೆದರಿಕೆ ಹಾಕಲಾರಂಭಿಸಿತು. ನೀವು ಈ ವಿಷಯದಲ್ಲಿ ಮಧ್ಯೆ ಪ್ರವೇಶಿಸಬೇಡಿ. ಮುಂದೆ ಬಂದರೆ ಶೂಟ್ ಮಾಡುತ್ತೇವೆ ಎಂದು ಓರ್ವ ವ್ಯಕ್ತಿ ನಮಗೆ ಬೆದರಿಸಿದ. ಕಿಡಿಗೇಡಿಗಳ ಗುಂಪು ಹಾಕಿ ಸ್ಟಿಕ್ಸ್, ರಾಡ್ಸ್‌ನಿಂದ ಭಂಡಾರಿಗೆ ಹಲ್ಲೆ ನಡೆಸಿದ ಕಾರಣ ಅವರ ತಲೆಗೆ ಗಾಯವಾಗಿದೆ ಎಂದು ಸೈನಿ ಹೇಳಿದ್ದಾರೆ.

ದಾಳಿ ಹಿಂದೆ ಯಾರಿರಬಹುದು ಎಂದು ಕೇಳಿದಾಗ, ‘‘ಭಂಡಾರಿ ಬಳಿ ಮೊದಲಿಗೆ ಮಾತನಾಡಿದ್ದ ಇಬ್ಬರ ಪರಿಚಯ ನನಗಿಲ್ಲ. ಭಂಡಾರಿ ಪೊಲೀಸರಿಗೆ ಹೇಳಿಕೆ ನೀಡಿದ ಬಳಿಕ ಸತ್ಯ ಗೊತ್ತಾಗಬಹುದು’’ ಎಂದರು.

ದಿಲ್ಲಿ ಕ್ರಿಕೆಟ್ ಸಂಸ್ಥೆ ಭ್ರಷ್ಟಾಚಾರ ಆರೋಪ ಹಾಗೂ ಆಟಗಾರರ ಆಯ್ಕೆ ವಿಷಯಕ್ಕೆ ಸಂಬಂಧಿಸಿ ಸದಾ ಕಾಲ ಸುದ್ದಿಯಾಗುತ್ತಿರುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News