ಕೋಟ ಮಣೂರು ಜೋಡಿ ಕೊಲೆ ಪ್ರಕರಣ: ಇಬ್ಬರು ಪೊಲೀಸ್ ಸಿಬ್ಬಂದಿಯ ಬಂಧನ; ಮೊಬೈಲ್, ಕಾರು ವಶ

Update: 2019-02-11 12:33 GMT
ಪವನ್ - ವೀರೇಂದ್ರ

ಉಡುಪಿ, ಫೆ.11: ಕೋಟ ಮಣೂರು ಗ್ರಾಮದ ಚಿಕ್ಕನಕೆರೆ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಕಾರ್ಯಾಚರಣೆಯನ್ನು ಮುಂದುವರೆಸಿರುವ ಪೊಲೀಸರು, ಪ್ರಕರಣದ ಆರೋಪಿಗಳಿಗೆ ಸಹಕಾರ ನೀಡಿದ ಆರೋಪದಡಿ ಉಡುಪಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ಬಂಧಿಸಿದ್ದಾರೆ.

ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿ ಪವನ್ ಅಮೀನ್ (31) ಮತ್ತು ವೀರೇಂದ್ರ ಆಚಾರ್ಯ (31) ಬಂಧಿತ ಆರೋಪಿಗಳಾಗಿದ್ದಾರೆ. ಇವರಿಬ್ಬರನ್ನು ಫೆ.10ರಂದು ಬಂಧಿಸಲಾಗಿದ್ದು, ಅದೇ ದಿನ ರಾತ್ರಿ ಕುಂದಾಪುರ ನ್ಯಾಯಾಧೀಶರ ನಿವಾಸದ ಮುಂದೆ ಹಾಜರುಪಡಿಸಿ, ಫೆ.15ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ಮೂಲಕ ಪ್ರಕರಣದ ಬಂಧಿತ ಆರೋಪಿಗಳ ಸಂಖ್ಯೆ ಎಂಟಕ್ಕೇರಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ಬ.ನಿಂಬರಗಿ ತಿಳಿಸಿದ್ದಾರೆ.

ಪವನ್ ಅಮೀನ್ ಮತ್ತು ವಿರೇಂದ್ರ ಅಚಾರ್ಯ ಹಲವು ವರ್ಷಗಳಿಂದ ಈಗಾಗಲೇ ಜೋಡಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ಕೋಟ ಪೊಲೀಸ್ ಠಾಣಾ ವ್ಯಾಪ್ತಿಯ ರೌಡಿಗಳಾದ ಹರೀಶ್ ರೆಡ್ಡಿ, ರಾಜಶೇಖರ ರೆಡ್ದಿ, ಮಹೇಶ ಗಾಣಿಗ ಹಾಗೂ ಇನ್ನಷ್ಟೆ ಬಂಧಿತನಾಗಬೇಕಾದ ಆರೋಪಿ ಸಂತೋಷ ಕುಂದರ್ ಸೇರಿದಂತೆ ಹಲವು ಮಂದಿ ಜೊತೆ ಒಡನಾಟ ಹೊಂದಿದ್ದರು.

ಮನೆಯಲ್ಲಿ ಆಶ್ರಯ:  ಜ.26ರಂದು ಕೋಟ ಮಣೂರಿನಲ್ಲಿ ಭರತ್ ಕುಮಾರ್ ಮತ್ತು ಯತೀಶ್ ರನ್ನು ಕೊಲೆಗೈದ ರಾಜಶೇಖರ್ ರೆಡ್ದಿ ಮತ್ತು ಎಲ್ಲ ಪ್ರಮುಖ ಅರೋಪಿಗಳು ಅದೇ ದಿನ ರಾತ್ರಿ ಪವನ್ ಅಮೀನ್‌ಗೆ ಸೇರಿದ ಹೆಬ್ರಿಯ ಕುಚ್ಚೂರಿನಲ್ಲಿರುವ ಮನೆಯಲ್ಲಿ ತಂಗಿದ್ದರು. ಜ.27ರಂದು ಬೆಳಗ್ಗೆ ಹರೀಶ್ ರೆಡ್ಡಿ, ಪವನ್ ಅಮೀನ್‌ಗೆ ಮೊಬೈಲ್ ಕರೆ ಮಾಡಿ ಒಂದು ಸಿಮ್, ಮೊಬೈಲ್, ಹಣ ಮತ್ತು ಕೆಲವು ವಸ್ತುಗಳನ್ನು ಕಳುಹಿಸಿ ಕೊಡಲು ಹೇಳಿದ್ದನು.

ಅದರಂತೆ ಪವನ್ ಅಮೀನ್ ಅವುಗಳನ್ನು ಪ್ರಣವ್ ಭಟ್ ಎಂಬಾತನ ಮೂಲಕ ಕುಚ್ಚೂರಿನ ತನ್ನ ಮನೆಯಲ್ಲಿರುವ ಆರೋಪಿಗಳಿಗೆ ತಲುಪಿಸಿದ್ದನು. ನಂತರ ರಾತ್ರಿ ವೀರೇಂದ್ರ ಅಚಾರ್ಯನೊಂದಿಗೆ ಸೇರಿ ಕಾರಿನ ವ್ಯವಸ್ಥೆ ಮಾಡಿ ಆರೋಪಿಗಳನ್ನು ಆಗುಂಬೆ ಎನ್.ಆರ್.ಪುರ ಮಲ್ಲಂದೂರಿನಲ್ಲಿರುವ ತನ್ನ ಸಂಬಂಧಿಕರ ಮನೆಯಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಿದ್ದನು.

ಪವನ್ ಅಮೀನ್ ಜ. 28ರಂದು ಆರೋಪಿಗಳನ್ನು ಮಲ್ಲಂದೂರಿನಲ್ಲಿಯೆ ಬಿಟ್ಟು ವೀರೇಂದ್ರ ಆಚಾರ್ಯನೊಂದಿಗೆ ಕಾರಿನಲ್ಲಿ ವಾಪಾಸ್ಸು ಬಂದಿದ್ದನು. ಈ ಮಧ್ಯೆ ಆರೋಪಿ ಹರೀಶ್ ರೆಡ್ಡಿ ನೀಡಿದ ಮೊಬೈಲ್‌ಗಳನ್ನು ಮತ್ತು ಇತರೆ ವಸ್ತುಗಳನ್ನು ಪವನ್ ಕುಮಾರ್ ಬಚ್ಚಿಟ್ಟಿದ್ದನು ಎಂಬುದು ತನಿಖೆಯಿಂದ ಬಹಿ ರಂಗಗೊಂಡಿದೆ.

ಕಾರು, ಮೊಬೈಲ್‌ಗಳು ವಶ: ಈ ಮೂಲಕ ಜೋಡಿ ಕೊಲೆ ಪ್ರಕರಣದ ಆರೋಪಿಗಳಿಗೆ ಸಹಕರಿಸಿದ ಪೊಲಿಸ್ ಪೇದೆಗಳಾದ ಪವನ್ ಅಮೀನ್ ಮತ್ತು ವೀರೇಂದ್ರ ಆಚಾರ್ಯರನ್ನು ಬಂಧಿಸಿರುವ ಪೊಲೀಸರು, ಕಾರು, ಮೊಬೈಲ್ ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಇನ್ನು ಈ ಪ್ರಕರಣದಲ್ಲಿ ಹಲವು ಮಂದಿ ಆರೋಪಿಗಳು ಭಾಗಿಯಾಗಿದ್ದು, ಅವರ ಶೋಧ ಕಾರ್ಯ ಮುಂದುವರೆಸಲಾಗಿದೆ ಎಂದು ಎಸ್ಪಿ ಲಕ್ಷ್ಮಣ್ ನಿಂಬರ್ಗಿ ತಿಳಿಸಿದರು.

ಮಣೂರು ಗ್ರಾಮದ ಚಿಕ್ಕನಕೆರೆಯಲ್ಲಿ ಶೌಚಾಲಯ ಹೊಂಡದ ವಿವಾದಕ್ಕೆ ಸಂಬಂಧಿಸಿ ಭರತ್ ಕುಮಾರ್ ಮತ್ತು ಯತೀಶ್ ಎಂಬವರನ್ನು ಜ.26ರಂದು ಕೊಲೆಗೈದ ಪ್ರಕರಣದಲ್ಲಿ ಈಗಾಗಲೇ ಉಡುಪಿ ಜಿಪಂ ಬಿಜೆಪಿ ಸದಸ್ಯ ರಾಘ ವೇಂದ್ರ ಕಾಂಚನ್, ರೌಡಿಶೀಟರ್ ರಾಜಶೇಖರ ರೆಡ್ಡಿ, ಮೆಡಿಕಲ್ ರವಿ, ಹರೀಶ್ ರೆಡ್ಡಿ, ಮಹೇಶ್ ಗಾಣಿಗ, ರವಿಚಂದ್ರ ಪೂಜಾರಿ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳು ಕಳೆದ ಮೂರು ದಿನಗಳಿಂದ ಪೊಲೀಸ್ ಕಸ್ಟಡಿಯಲ್ಲಿದ್ದು ಇವರ ವಿಚಾರಣೆ ಮುಂದುವರೆಸಲಾಗಿದೆ. ಇವರ ಪೊಲೀಸ್ ಕಸ್ಟಡಿ ಅವಧಿಯು ಫೆ.15ರಂದು ಪೂರ್ಣಗೊಳ್ಳಲಿರುವುದರಿಂದ ಅದೇ ದಿನ ನ್ಯಾಯಾಂಗ ಬಂಧನದಲ್ಲಿರುವ ನಿನ್ನೆ ಬಂಧಿಸಲ್ಪಟ್ಟ ಇಬ್ಬರು ಪೊಲೀಸ್ ಸಿಬ್ಬಂದಿ ಸೇರಿದಂತೆ ಎಲ್ಲ ಎಂಟು ಆರೋಪಿಗಳನ್ನು ಕೂಡ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.

10 ವರ್ಷಗಳಿಂದ ಡಿಎಆರ್‌ನಲ್ಲಿ ಕರ್ತವ್ಯ

ಹೆಬ್ರಿ ಕುಚ್ಚೂರು ನಿವಾಸಿಯಾಗಿರುವ ಪವನ್ ಕುಮಾರ್ ಹಾಗೂ ಬೈಂದೂರಿನ ವೀರೇಂದ್ರ ಆಚಾರ್ಯ 2008ರಲ್ಲಿ ಜಿಲ್ಲಾ ಸಶಸ್ತ್ರ ಮೀಸಲು ಪಡೆ(ಡಿಎಆರ್)ಗೆ ನೇಮಕಗೊಂಡಿದ್ದು, ಆರಂಭದಲ್ಲಿ ಇವರಿಬ್ಬರು ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಕಂಪ್ಯೂಟರ್ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಕಳೆದ ಮೂರು ನಾಲ್ಕು ವರ್ಷಗಳಿಂದ ಇವರಿಬ್ಬರು ಜಿಲ್ಲಾ ಸಶಸ್ತ್ರ ಮೀಸಲು ಪಡೆಯಲ್ಲಿ ಸಿಬ್ಬಂದಿಗಳಾಗಿ ದ್ದಾರೆ.

ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾಗಿರುವ ಹಿನ್ನೆಲೆಯಲ್ಲಿ ಕರ್ತವ್ಯ ಲೋಪ ಎಸಗಿರುವ ಪೊಲೀಸ್ ಸಿಬ್ಬಂದಿ ಪವನ್ ಕುಮಾರ್ ಹಾಗೂ ವೀರೇಂದ್ರ ಆಚಾರ್ಯರನ್ನು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ್ ನಿಂಬರ್ಗಿ ಅಮಾನುತುಗೊಳಿಸಿ ಇಂದು ಆದೇಶ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News