‘ಮತ್ತೊಮ್ಮೆ ಮೋದಿ’: ಬಿಜೆಪಿಯಿಂದ ಮನೆ ಸಂಪರ್ಕ ಅಭಿಯಾನ

Update: 2019-02-11 12:53 GMT

ಮಂಗಳೂರು, ಫೆ. 11: ಮುಂಬರುವ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರ ನಿರ್ದೇಶನದ ಮೇರೆಗೆ ಫೆ. 12ರಿಂದ ಮಾ. 3ರವರೆಗೆ ಮತ್ತೊಮ್ಮೆ ಮೋದಿ ಧ್ಯೇಯವಾಕ್ಯದೊಂದಿಗೆ ‘ನನ್ನ ಪರಿವಾರ ಬಿಜೆಪಿ ಪರಿವಾರ’ ಎಂಬ ಅಭಿಯಾನ ಆರಂಭವಾಗಲಿದೆ. ಈ ಮೂಲಕ ದ.ಕ. ಜಿಲ್ಲೆಯಲ್ಲಿಯೂ ಬಿಜೆಪಿ ಕಾರ್ಯಕರ್ತರು ಮನೆ ಸಂಪರ್ಕ ಅಭಿಯಾನವನ್ನು ಆರಂಭಿಸಲಿದ್ದಾರೆ ಎಂದು ಬಿಜೆಪಿ ರಾಜ್ಯ ಸಹ ವಕ್ತಾರೆ ಸುಲೋಚನಾ ಭಟ್ ತಿಳಿಸಿದರು.

ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ. 12ರಂದು ಅಹಮದಾಬಾದ್‌ನಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ತನ್ನ ಮನೆಯಲ್ಲಿ ಬಿಜೆಪಿ ಧ್ವಜ ಹಾರಿಸುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ. ರಾಜ್ಯದಲ್ಲೂ ಪ್ರತಿ ಮಂಡಲ ಮತ್ತು ಮಹಾಶಕ್ತಿಕೇಂದ್ರದಲ್ಲಿ ಬಿಜೆಪಿ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ತಮ್ಮ ಮನೆ ಮೇಲೆ ಬಿಜೆಪಿ ಧ್ವಜ ಹಾರಿಸುವ ಮೂಲಕ ‘ಮೇರಾ ಪರಿವಾರ್ ಬಾಜಪಾ ಪರಿವಾರ್’ ಅಭಿಯಾನ ಉದ್ಘಾಟನೆಗೊಳ್ಳಲಿದೆ ಎಂದರು.

ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ ಏಳು ಯೋಜನೆಗಳನ್ನು ರೂಪಿಸಿದೆ. ಈ ಪೈಕಿ ‘ಮೇರಾ ಪರಿವಾರ್ ಭಾಜಪಾ ಪರಿವಾರ್’ ಯೋಜನೆಯಡಿ ಬಿಜೆಪಿ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ತಮ್ಮ ಬೂತ್ ಹೊರತುಪಡಿಸಿ ಇತರ ಬೂತ್‌ಗಳಲ್ಲಿ ವಿಸ್ತಾರಕರಾಗಿ ಕೆಲಸ ಮಾಡಲಿದ್ದಾರೆ. ಮನೆ ಮನೆ ಸಂಪರ್ಕ ಅಭಿಯಾನ ಆರಂಭಗೊಳ್ಳಲಿದೆ. ಪ್ರತಿ ಕಾರ್ಯಕರ್ತರ ಮನೆಯಲ್ಲಿ ಬಿಜೆಪಿ ಧ್ವಜ ಹಾರಿಸುವ ಜತೆಗೆ ‘ಮೇರಾ ಪರಿವಾರ್ ಭಾಜಪಾ ಪರಿವಾರ್’ ಎಂಬ ಸ್ಟಿಕ್ಕರ್ ಅಂಟಿಸಲಿದ್ದಾರೆ. ಕೇಂದ್ರ ಸರಕಾರದ ಸಾಧನೆಯ ವಿವರವುಳ್ಳ ಕರಪತ್ರಗಳನ್ನು ಮನೆಮನೆಗೆ ಹಂಚಲಿದ್ದಾರೆ ಎಂದು ವಿವರಿಸಿದರು.

ಬಿಜೆಪಿ ಕಾರ್ಯಕರ್ತರು ತಮ್ಮ ಹಿತೈಷಿಗಳನ್ನು, ಪರಿವಾರದವರನ್ನು ಭೇಟಿ ಮಾಡಿ ನರೇಂದ್ರ ಮೋದಿ ಅವರು ಸಾಧನೆಗಳನ್ನು ತಿಳಿಸಿ, ಬಿಜೆಪಿಗೆ ಮತ ನೀಡುವಂತೆ ವಿನಂತಿಸಲಿದ್ದಾರೆ. ಕೇಂದ್ರ ಸರಕಾರದ ಬಜೆಟ್‌ನ ಪ್ರಮುಖ ಅಂಶಗಳನ್ನು ಮನೆ ಮನೆಗೆ ತಲುಪಿಸಲಿದ್ದಾರೆ. ಮಾ. 2ರಂದು ವಿಜಯ ಸಂಕಲ್ಪ ರ್ಯಾಲಿ ಮೂಲಕ ಎಲ್ಲ ಮಂಡಲಗಳಲ್ಲಿ ಈ ಯೋಜನೆ ಸಮಾಪನಗೊಳ್ಳಲಿದೆ. ತನ್ಮೂಲಕ ರಾಜ್ಯದಲ್ಲಿ 22 ಸ್ಥಾನ ಗೆಲ್ಲುವ ಬಿಜೆಪಿ ಗುರಿ ಸಾಧನೆಗೆ ಪ್ರಯತ್ನ ನಡೆಯಲಿದೆ ಎಂದರು.

ಹಾಗಿದ್ದರೆ ಈ ಬಾರಿ ಸ್ಥಳೀಯ ಅಭ್ಯರ್ಥಿಗಳ ಪರ ಮತಯಾಚನೆ ನಡೆಯುವುದಿಲ್ಲವೇ ಎಂಬ ಸುದ್ದಿಗಾರರ ಪ್ರಶ್ನೆಗೆ, ಕ್ಷೇತ್ರದ ಲೋಕಸಭಾ ಅಭ್ಯರ್ಥಿ ಯಾರೇ ಆದರೂ ನರೇಂದ್ರ ಮೋದಿಯವರನ್ನು ಮತ್ತೆ ಪ್ರಧಾನಿಯನ್ನಾಗಿಸುವುದೇ ನಮ್ಮ ಗುರಿ ಎಂದರು.

ಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ವಕ್ತಾರ ಜಿತೇಂದ್ರ ಕೊಟ್ಟಾರಿ ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News