ಮದ್ಯವ್ಯಸನಿಗಳ ಮಕ್ಕಳ ಸಮಸ್ಯೆಗಳನ್ನು ಬಿಂಬಿಸುವ ಮರಳಶಿಲ್ಪ, ತ್ರೀಡಿ ಪೈಟಿಂಗ್

Update: 2019-02-11 13:10 GMT

ಉಡುಪಿ, ಫೆ. 11: ದೊಡ್ಡಣಗುಡ್ಡೆ ಡಾ.ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆ, ರೋಟರಿ ಕ್ಲಬ್ ಉಡುಪಿ ಮಣಿಪಾಲ ಹಾಗೂ ಐಎಂಎ ಉಡುಪಿ -ಕರಾವಳಿ ಇವುಗಳ ಸಹಯೋಗದೊಂದಿಗೆ ಮದ್ಯವ್ಯಸನಿಗಳ ಮಕ್ಕಳ ಸಮಸ್ಯೆಗಳ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾಗಿರುವ ಮದ್ಯ ವ್ಯಸನಿಗಳ ಮಕ್ಕಳ ಜಾಗೃತಿ ಸಪ್ತಾಹದ ಪ್ರಯುಕ್ತ ಸೋಮವಾರ ಆಸ್ಪತ್ರೆಯಲ್ಲಿ ತ್ರೀಡಿ ಪೇಂಟಿಗ್ ಹಾಗೂ ಮಲ್ಪೆ ಬೀಚ್‌ನಲ್ಲಿ ಮರಳು ಶಿಲ್ಪವನ್ನು ರಚಿಸಲಾಯಿತು.

ಆಸ್ಪತ್ರೆಯ ಆವರಣದಲ್ಲಿ ಆ್ಯನಿಮೇಶನ್ ತ್ರೀಡಿ ಪೈಟಿಂಗ್‌ನ್ನು ಕಲಾವಿದರಾದ ಸಂತೋಷ್ ಆಚಾರ್ಯ ಹಾಗೂ ಅಜಿತ್ ಕರ್ಕೇರ ರಚಿಸುವ ಮೂಲಕ ಸಪ್ತಾಹಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಆಸ್ಪತ್ರೆೆಯ ನಿರ್ದೇಶಕ ಡಾ.ಪಿ.ವಿ.ಭಂಡಾರಿ ಮಾತನಾಡಿ, ಮದ್ಯ ವ್ಯಸನ ಎಂಬುದು ಕೌಂಟುಬಿಕ ಕಾಯಿಲೆಯಾಗಿದ್ದು, ಪೋಷಕರ ಮೀತಿ ಮೀರಿದ ಕುಡಿತ ಮಕ್ಕಳ ಭದ್ರತೆ ಹಾಗೂ ಸುರಕ್ಷತೆಗೆ ಮಾರಕವಾಗಲಿದೆ ಎಂದರು.

ಮನೆಯಲ್ಲಿರುವ ಒಬ್ಬ ಮದ್ಯವ್ಯಸನಿಯಿಂದ ಮಕ್ಕಳು, ಪತ್ನಿ ಸೇರಿದಂತೆ ಕುಟುಂಬದವರು ವಿವಿಧ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ವ್ಯಸನಿ ತಂದೆ ಯಿಂದ ಮಕ್ಕಳು ಕೀಳೆರಿಮೆ, ಖಿನ್ನತೆಗೆ ತುತ್ತಾಗುವುದರ ಜೊತೆಗೆ ಉತ್ತಮ ಬಾಲ್ಯ ಜೀವನದಿಂದ ವಂಚಿತರಾಗುತ್ತಾರೆ. ಈ ಮಕ್ಕಳು ಭವಿಷ್ಯದಲ್ಲಿ ಮದ್ಯ ವ್ಯಸನಿಗಳಾಗುವ ಅಪಾಯ ಮೂರು ಪಟ್ಟು ಹೆಚ್ಚು ಎಂದು ಅವರು ತಿಳಿಸಿದರು.

ಆಸ್ಪತ್ರೆಯ ಮನೋವೈದ್ಯ ಡಾ.ವಿರೂಪಾಕ್ಷ ದೇವರಮನೆ ಮಾತನಾಡಿ, ಜಿಲ್ಲೆಯಲ್ಲಿ ಫೆ.10ರಿಂದ ಫೆ.16ವರೆಗೆ ಹಮ್ಮಿಕೊಳ್ಳಲಾಗಿರುವ ಮದ್ಯ ವ್ಯಸನಿಗಳ ಮಕ್ಕಳ ಜಾಗೃತಿ ಸಪ್ತಾಹದ ಪ್ರಯುಕ್ತ ಟಿವಿ ಸಂದರ್ಶನ, ರೇಡಿಯೋ ಕಾರ್ಯ ಕ್ರಮ, ಮರಳುಶಿಲ್ಪ ರಚನೆ, ವಿಶೇಷ ಉಪನ್ಯಾಸ, ವಿಡಿಯೋ, ಕಿರುಚಿತ್ರ, ಪುಸ್ತಕ ಬಿಡುಗಡೆ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಐಎಂಎ ಅಧ್ಯಕ್ಷ ಡಾ.ಗುರುಮೂರ್ತಿ, ರೋಟರಿ ಕ್ಲಬ್ ಉಡುಪಿ ಮಣಿಪಾಲ ಅಧ್ಯಕ್ಷ ಅಮಿತ್ ಅರವಿಂದ್, ರೇಣು ಜಯರಾಂ, ಆಸ್ಪತ್ರೆಯ ವೈದ್ಯರಾದ ಡಾ.ಎಚ್.ಆರ್.ನಾಯಕ್, ಡಾ.ದೀಪಕ್ ಮಲ್ಯ, ಡಾ.ಲಾವಣ್ಯ ಜಿ.ರಾವ್, ಆಪ್ತ ಸಮಾಲೋಚಕ ನಾಗರಾಜ್ ಮೂರ್ತಿ ಉಪಸ್ಥಿತರಿದ್ದರು.
ಕಲಾವಿದ ಸಂತೋಷ ಆಚಾರ್ಯ ಹಾಗೂ ಅಜಿತ್ ಕರ್ಕೇರ ಭೂಮಿಯನ್ನು ಸೀಳಿ ಹೊರಬರುವ ಸಿಗರೇಟು, ಮದ್ಯದ ಬಾಟಲಿ, ಕ್ಯಾನ್ಸರ್ ರೋಗದ ಸೂಚಕವಾದ ಏಡಿ ಕಾಲುಗಳ ಮಧ್ಯೆ ಮಕ್ಕಳ ಕೈಯನ್ನು ತ್ರೀಡಿ ಪೈಟಿಂಗ್‌ನಲ್ಲಿ ರಚಿಸುವ ಮೂಲಕ ಮದ್ಯವ್ಯಸನಿಗಳ ಮಕ್ಕಳಿಗೆ ಸಹಾಯ ಹಸ್ತ್ತ ನೀಡಿ ಎಂಬ ಸಂದೇಶವನ್ನು ಸಾರಿದರು.

ಮಲ್ಪೆ ಬೀಚ್‌ನಲ್ಲಿ ಕಲಾವಿದರಾದ ಹರೀಶ್ ಸಾಗ, ರಾಘವೇಂದ್ರ, ಜೈ ನೇರಳಕಟ್ಟೆ, ಪ್ರಸಾದ್ ಎಂಬವರು ಮದ್ಯದ ಬಾಟಲಿಯಲ್ಲಿ ಸಿಲುಕಿರುವ ಮಗು, ಭರವಸೆ ಮೈಲುಗಲ್ಲುಗಳ ಮರಳಶಿಲ್ಪವನ್ನು ರಚಿಸಿದರು. ಈ ಮೂಲಕ ಮದ್ಯ ವ್ಯಸನಿ ಕುಟುಂಬದ ಮಗುವಿಗೆ ಕುಟುಂಬ, ಸ್ನೇಹಿತರು, ಸಮಾಜ ಹಾಗೂ ಶಿಕ್ಷಣ ಸಂಸ್ಥೆಗಳು ಸಹಾಯಸ್ತ ನೀಡುವ ಸಂದೇಶವನ್ನು ಸಾರಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News