ಲೋಕಪಾಲ ಜಾರಿಗೊಂಡಿದ್ದರೆ ರಫೇಲ್‌ನಲ್ಲಿ ಮೋದಿ ‘ನಂ.1 ಆರೋಪಿ’: ವೀರಪ್ಪ ಮೊಯ್ಲಿ

Update: 2019-02-11 15:15 GMT

ಹೊಸದಿಲ್ಲಿ,ಫೆ.11: ಲೋಕಪಾಲ ವ್ಯವಸ್ಥೆಯು ಜಾರಿಗೊಂಡಿದ್ದರೆ ರಫೇಲ್ ವಿವಾದದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ‘ನಂ.1’ ಆರೋಪಿಯಾಗಿರುತ್ತಿದ್ದರು ಎಂದು ಸೋಮವಾರ ಲೋಕಸಭೆಯಲ್ಲಿ ಹೇಳಿದ ಹಿರಿಯ ಕಾಂಗ್ರೆಸ್ ನಾಯಕ ಎಂ.ವೀರಪ್ಪ ಮೊಯ್ಲಿ ಅವರು,ಪ್ರಧಾನಿಯವರ ‘56’ಇಂಚುಗಳ ಎದೆಯನ್ನು ಪರೋಕ್ಷವಾಗಿ ಪ್ರಸ್ತಾಪಿಸಿ ವಿಶಾಲ ಭುಜಗಳು ‘ಭ್ರಷ್ಟಾಚಾರದ ಗುಂಡ’ನ್ನು ತಾಳಿಕೊಳ್ಳುವಷ್ಟು ಸಮರ್ಥವಾಗಿಲ್ಲ ಎಂದು ಕುಟುಕಿದರು.

ಮಧ್ಯಂತರ ಮುಂಗಡಪತ್ರದ ಮೇಲಿನ ಚರ್ಚೆಯಲ್ಲಿ ಮೋದಿ ಮತ್ತು ಅವರ ಸರಕಾರದ ವಿರುದ್ಧ ತೀವ್ರ ದಾಳಿ ನಡೆಸಿದ ಮೊಯ್ಲಿ,ರಫೇಲ್ ಒಪ್ಪಂದದಲ್ಲಿ ತಪ್ಪಿತಸ್ಥರನ್ನಾಗಿ ಯಾರನ್ನಾದರೂ ಹೊಣೆ ಮಾಡುವುದಿದ್ದರೆ ಅದು ಪ್ರಧಾನಿ ಮಾತ್ರ ಆಗಿರುತ್ತಾರೆ ಎಂದರು.

ರಫೇಲ್ ಒಪ್ಪಂದವು ‘ಪರಿವಾರ ಹಗರಣ’ವಾಗಿದೆ ಎಂದು ಆರೋಪಿಸಿದ ಅವರು,ಮೋದಿ ಇಂದು ತನ್ನ ಹೊಣೆಗಾರಿಕೆಯಿಂದ ನುಣುಚಿಕೊಳ್ಳಬಹುದು,ಆದರೆ ಮುಂದಿನ ದಿನಗಳಲ್ಲಲ್ಲ ಎಂದರು.

ಸರಕಾರವನ್ನು ಗುರಿಯಾಗಿಸಿಕೊಳ್ಳಲು ರಫೇಲ್ ಯುದ್ಧವಿಮಾನಗಳ ಖರೀದಿ ಕುರಿತು ಇತ್ತೀಚಿನ ಮಾಧ್ಯಮ ವರದಿಗಳನ್ನು ಉಲ್ಲೇಖಿಸಿದ ಮೊಯ್ಲಿ, ಮುಂಗಡ ಪತ್ರದಲ್ಲಿ ರಕ್ಷಣಾ ಕ್ಷೇತ್ರಕ್ಕೆ ಹಂಚಿಕೆಯಲ್ಲಿ ಜುಜುಬಿ ಹೆಚ್ಚಳವನ್ನು ಮಾಡಲಾಗಿದೆ ಮತ್ತು ಆಡಳಿತ ಬಿಜೆಪಿಯು ಶಾಸಕರ ಖರೀದಿಗಾಗಿ,ಅರಮನೆಯಂತಹ ಕಚೇರಿಗಳ ನಿರ್ಮಾಣಕ್ಕಾಗಿ ಮತ್ತು ತನ್ನ ಬೊಕ್ಕಸವನ್ನು ತುಂಬಿಕೊಳ್ಳಲು ಹಣವನ್ನು ಬಳಸುತ್ತಿದೆ ಎಂದು ಆರೋಪಿಸಿದರು.

ಭ್ರಷ್ಟಾಚಾರ ನಡೆದಿದೆ ಎಂದು ಕಾಂಗ್ರೆಸ್ ಆರೋಪಿಸುತ್ತಿರುವ ರಫೇಲ್ ಒಪ್ಪಂದದ ಕುರಿತಂತೆ ಮೊಯ್ಲಿ,ಲೋಕಪಾಲ ವ್ಯವಸ್ಥೆಯನ್ನು ಏಕೆ ಜಾರಿಗೊಳಿಸುತ್ತಿಲ್ಲ ಎನ್ನುವುದು ಈಗ ಸ್ಪಷ್ಟವಾಗಿದೆ. ಅದು ಜಾರಿಗೊಂಡಿದ್ದರೆ ಮೋದಿ ಮೊದಲ ಆರೋಪಿಯಾಗಿರುತ್ತಿದ್ದರು ಎಂದರು. ಈ ತಪ್ಪಿನ ಪ್ರಜ್ಞೆಯಿಂದಾಗಿ ಕೇಂದ್ರ ಸರಕಾರವು ತನ್ನ ಎದುರಾಳಿಗಳ ವಿರುದ್ಧ ತನಿಖಾ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿದೆ ಎಂದರು.

ನಿರುದ್ಯೋಗ ಸಮಸ್ಯೆಯ ಕುರಿತು ಸರಕಾರದ ವಿರುದ್ಧ ದಾಳಿ ನಡೆಸಿದ ಮೊಯ್ಲಿ,ಅದು ಸುಳ್ಳು ಅಂಕಿಅಂಶಗಳನ್ನು ನೀಡುತ್ತಿದೆ ಎಂದು ಆರೋಪಿಸಿದರು.

ಟಿಡಿಪಿಯ ಬೇಡಿಕೆಯನ್ನು ಬೆಂಬಲಿಸಿದ ಅವರು,ಎನ್‌ಡಿಎ ಸರಕಾರವು ಆಂಧ್ರ ಪ್ರದೇಶಕ್ಕೆ ಶಾಸನಬದ್ಧ ಬೆಂಬಲವನ್ನು ನಿರಾಕರಿಸಿದೆ ಮತ್ತು ಸಂಸತ್ತಿನಲ್ಲಿ ನೀಡಿದ್ದ ಭರವಸೆಗೆ ವಿರುದ್ಧವಾಗಿ ಅದಕ್ಕೆ ವಿಶೇಷ ಸ್ಥಾನಮಾನವನ್ನು ಕೊಟ್ಟಿಲ್ಲ ಎಂದರು. ಇದು ಸರಕಾರಕ್ಕೆ ಸಂಸತ್ತಿನ ಬಗ್ಗೆ,ಸಂವಿಧಾನದ ಬಗ್ಗೆ ಗೌರವವಿಲ್ಲ ಎನ್ನ್ನುವುದನ್ನು ತೋರಿಸುತ್ತದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News