ಝಕಿಯಾ ಜಾಫ್ರಿ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆ ಜುಲೈನಲ್ಲಿ

Update: 2019-02-11 15:11 GMT

ಹೊಸದಿಲ್ಲಿ,ಫೆ.11: 2002ರ ಗುಜರಾತ್ ಹತ್ಯಾಕಾಂಡ ಪ್ರಕರಣದಲ್ಲಿ ಸಂಬಂಧಿಸಿದಂತೆ ಆಗಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರಿಗೆ ವಿಶೇಷ ತನಿಖಾ ತಂಡ(ಸಿಟ್)ವು ಕ್ಲೀನ್ ಚಿಟ್ ನೀಡಿದ್ದನ್ನು ಪ್ರಶ್ನಿಸಿ ಮಾಜಿ ಸಂಸದ ಎಹ್ಸಾನ್ ಜಾಫ್ರಿ ಅವರ ಪತ್ನಿ ಝಕಿಯಾ ಜಾಫ್ರಿ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಜುಲೈನಲ್ಲಿ ನಡೆಸುವುದಾಗಿ ನ್ಯಾ.ಎ.ಎಂ.ಖನ್ವಿಲ್ಕರ್ ನೇತೃತ್ವದ ಸರ್ವೋಚ್ಚ ನ್ಯಾಯಾಲಯದ ಪೀಠವು ಸೋಮವಾರ ತಿಳಿಸಿತು.

2002,ಫೆ.28ರಂದು ಅಹ್ಮದಾಬಾದ್‌ನ ಗುಲ್ಬರ್ಗ್ ಸೊಸೈಟಿಯಲ್ಲಿ ನಡೆದಿದ್ದ ನರಮೇಧದಲ್ಲಿ ಜಾಫ್ರಿ ಸೇರಿದಂತೆ 68 ಜನರು ಕೊಲ್ಲಲ್ಪಟ್ಟಿದ್ದರು.ಸಿಟ್ 2012,ಫೆ.8ರಂದು ನ್ಯಾಯಾಲಯಕ್ಕೆ ಸಲ್ಲಿಸಿದ್ದ ಮುಕ್ತಾಯ ವರದಿಯಲ್ಲಿ ಮೋದಿ ಮತ್ತು ಇತರ 63 ಜನರ ವಿರುದ್ಧ ಕಾನೂನು ಕ್ರಮ ನಡೆಸಬಹುದಾದ ಯಾವುದೇ ಸಾಕ್ಷ್ಯಾಧಾರಗಳಿಲ್ಲವೆಂದು ಹೇಳುವ ಮೂಲಕ ಅವರಿಗೆ ಕ್ಲೀನ್ ಚಿಟ್ ನೀಡಿತ್ತು. ಇದನ್ನು ಪ್ರಶ್ನಿಸಿ ಝಕಿಯಾ ಸಲ್ಲಿಸಿದ್ದ ಅರ್ಜಿಯನ್ನು ಗುಜರಾತ್ ಉಚ್ಚ ನ್ಯಾಯಾಲಯವು 2017,ಅ.5ರಂದು ತಿರಸ್ಕರಿಸಿತ್ತು.

ಮುಖ್ಯ ಪ್ರಕರಣದ ವಿಚಾರಣೆಗೆ ಮುನ್ನ ಝಕಿಯಾರ ಅರ್ಜಿಯಲ್ಲಿ ಸಹ ಅರ್ಜಿದಾರರಾಗಲು ಕೋರಿ ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್ ಸಲ್ಲಿಸಿರುವ ಅರ್ಜಿಯನ್ನು ಪರಿಶೀಲಿಸುವುದಾಗಿ ಸರ್ವೋಚ್ಚ ನ್ಯಾಯಾಲಯವು ಈ ಮೊದಲು ತಿಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News