ಉಡುಪಿ ಜಿಲ್ಲೆಯಲ್ಲಿ ಮಂಗಗಳ ಸಾವಿನ ಸಂಖ್ಯೆ ಇಳಿಮುಖ

Update: 2019-02-11 15:48 GMT

ಉಡುಪಿ, ಫೆ.11: ಉಡುಪಿ ಜಿಲ್ಲೆಯಾದ್ಯಂತ ಮಂಗಗಳ ಸಾವಿನ ಸಂಖ್ಯೆ ಇಳಿಮುಖವಾಗುತ್ತಿದ್ದು, ಫೆ.10 ಮತ್ತು 11ರಂದು ಎರಡು ಸತ್ತ ಮಂಗಗಳು ಪತ್ತೆಯಾಗಿವೆ ಎಂದು ಮಂಗನ ಕಾಯಿಲೆಯ ಜಿಲ್ಲಾ ನೋಡೆಲ್ ಅಧಿಕಾರಿ ಡಾ.ಪ್ರಶಾಂತ್ ಭಟ್ ತಿಳಿಸಿದ್ದಾರೆ.

ಫೆ.10ರಂದು ಸಿದ್ದಾಪುರ ಗ್ರಾಮದ ಜನ್ಸಾಲೆಯಲ್ಲಿ ಒಂದು ಹಾಗೂ ಫೆ.11 ರಂದು ಹೆಬ್ರಿ ಸಮೀಪದ ಕುಚ್ಚೂರು ಎಂಬಲ್ಲಿ ಒಂದು ಮಂಗನ ಶವ ದೊರೆತಿದೆ. ಜನ್ಸಾಲೆಯಲ್ಲಿ ಈಗಾಗಲೇ ಕೆಎಫ್‌ಡಿ ಸೋಂಕು ಇರುವುದು ದೃಢಪಟ್ಟಿರುವುದ ರಿಂದ ಹಾಗೂ ಕುಚ್ಚೂರಿನ ಮಂಗನ ಶವ ಕೊಳೆತಿರುವುದರಿಂದ ಈ ಎರಡು ಮಂಗಗಳ ಅಟಾಪ್ಸಿ ನಡೆಸಿಲ್ಲ ಎಂದು ಅವರು ಮಾಹಿತಿ ನೀಡಿದ್ದಾರೆ.

ಈವರೆಗೆ ಒಟ್ಟು 53 ಮಂಗಗಳ ಅಟಾಪ್ಸಿ ನಡೆಸಿದ್ದು, ಇವುಗಳಲ್ಲಿ 50ರ ವರದಿಗಳು ಬಂದಿವೆ. 12ರಲ್ಲಿ ಮಾತ್ರ ಕೆಎಫ್‌ಡಿ ವೈರಸ್ ಪತ್ತೆಯಾಗಿದ್ದರೆ, 38ರಲ್ಲಿ ಸೊಂಕು ಪತ್ತೆಯಾಗಿಲ್ಲ. ಇಂದು ಬ್ರಹ್ಮಾವರದಿಂದ ಮಂಗನ ಕಾಯಿಲೆ ಶಂಕಿತರೊಬ್ಬರ ಮಾದರಿಯನ್ನು ಪರೀಕ್ಷೆಗಾಗಿ ಕಳುಹಿಸಲಾಗಿದ್ದು, ವರದಿಯನ್ನು ನಿರೀಕ್ಷಿಸಲಾಗುತ್ತಿದೆ.

ಈವರೆಗೆ ಜಿಲ್ಲೆಯ ಒಟ್ಟು 30 ಮಂದಿ ಮಂಗನ ಕಾಯಿಲೆ ಶಂಕಿತರ ಮಾದರಿ ಯನ್ನು ಪರೀಕ್ಷೆಗಾಗಿ ಕಳುಹಿಸಿದ್ದು, ಇದರಲ್ಲಿ 29 ಮಂದಿಯಲ್ಲಿ ಯಾವುದೇ ವೈರಸ್ ಕಂಡುಬಂದಿಲ್ಲ. ಒಂದು ಪರೀಕ್ಷೆಯ ವರದಿ ಬರಲು ಬಾಕಿ ಇದೆ ಎಂದು ಅವರು ತಿಳಿಸಿದ್ದಾರೆ.

32 ಮಂದಿಗೆ ಚಿಕಿತ್ಸೆ: ಶಿವಮೊಗ್ಗ ಜಿಲ್ಲೆಯ ಸಾಗರ ಹಾಗೂ ಅಸುಪಾಸಿನ ಸುಮಾರು 183 ಜನರು ಈವರೆಗೆ ಶಂಕಿತ ಮಂಗನ ಕಾಯಿಲೆ ಚಿಕಿತ್ಸೆಗಾಗಿ ಮತ್ತು ಜ್ವರ ಮರುಕಳಿಸಿದ್ದ ರಿಂದ ಎಂಟು ಮಂದಿ ಮರುಸೇರ್ಪಡಗೊಂಡು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಇದರಲ್ಲಿ ಸುಮಾರು 70 ಜನರಿಗೆ ಮಂಗನ ಕಾಯಿಲೆ ಇರುವ ಬಗ್ಗೆ ಮತ್ತು 120 ಜನರಿಗೆ ಮಂಗನ ಕಾಯಿಲೆ ಸೊಂಕು ಇಲ್ಲದ ಬಗ್ಗೆ ವರದಿಯಾಗಿದೆ. ಒಬ್ಬ ವ್ಯಕ್ತಿಯ ವರದಿ ಬರಲು ಬಾಕಿ ಇದೆ. ಇದರಲ್ಲಿ 155 ಮಂದಿ ಆಸ್ಪತ್ರೆಯಲ್ಲಿ ಗುಣಮಟ್ಟದ ಚಿಕಿತ್ಸೆ ಪಡೆದು ಬಿಡುಗಡೆ ಹೊಂದಿದ್ದಾರೆ. 32 ಮಂದಿ ಆಸ್ಪತ್ರೆ ಯಲ್ಲಿ ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಲ್ಲಿ ಎರಡು ಮಂದಿ ಮರು ದಾಖಲಾದವರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News