ಆಕ್ಲಂಡ್‌ನಿಂದ ಚೀನಾಕ್ಕೆ ಹಾರುತ್ತಿದ್ದ ವಿಮಾನ ಗಂಟೆಗಳ ಬಳಿಕ ವಾಪಸ್!

Update: 2019-02-11 15:51 GMT

ಸಿಡ್ನಿ, ಫೆ. 11: ಆಕ್ಲಂಡ್‌ನಿಂದ ಶಾಂಘೈಗೆ ಹಾರುತ್ತಿದ್ದ ಏರ್ ನ್ಯೂಝಿಲ್ಯಾಂಡ್ ವಿಮಾನವೊಂದು, ಚೀನಾದಲ್ಲಿ ಇಳಿಯಲು ಅನುಮತಿಯಿಲ್ಲ ಎಂಬುದನ್ನು ಕೊನೆ ಕ್ಷಣದಲ್ಲಿ ಮನಗಂಡು ಹಿಂದಿರುಗಿದ ಘಟನೆಯೊಂದು ವರದಿಯಾಗಿದೆ. ಆದರೆ, ಅಷ್ಟರಲ್ಲಿ ವಿಮಾನವು ಹಲವು ಗಂಟೆಗಳ ಪ್ರಯಾಣ ಮಾಡಿತ್ತು.

270 ಪ್ರಯಾಣಿಕರನ್ನು ಹೊತ್ತ ವಿಮಾನವು ಶನಿವಾರ ಮಧ್ಯರಾತ್ರಿ ಆಕ್ಲಂಡ್‌ನಿಂದ ಹೊರಟಿತ್ತು. ಹಲವು ಗಂಟೆಗಳ ಕಾಲ ಪ್ರಯಾಣಿಸಿದ ಬಳಿಕ ರವಿವಾರ ಬೆಳಗ್ಗೆ 10 ಗಂಟೆಯ ಸುಮಾರಿಗೆ ಅದು ಹಿಂದಿರುಗಿತು.

‘‘ಈ ಹಾರಾಟದಲ್ಲಿ ತೊಡಗಿದ್ದ ನಿರ್ದಿಷ್ಟ ವಿಮಾನಕ್ಕೆ ಚೀನಾದಲ್ಲಿ ಇಳಿಯಲು ಚೀನಾದ ವಿಮಾನ ಹಾರಾಟ ನಿಯಂತ್ರಣ ಪ್ರಾಧಿಕಾರದ ಅನುಮತಿಯಿರಲಿಲ್ಲ’’ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.

ಈ ತಪ್ಪಿಗೆ ವಿಮಾನಯಾನ ಸಂಸ್ಥೆಯು ಪ್ರಯಾಣಿಕರ ಕ್ಷಮೆ ಯಾಚಿಸಿದೆ ಹಾಗೂ ರವಿವಾರ ರಾತ್ರಿ 11 ಗಂಟೆಯ ವಿಮಾನದಲ್ಲಿ ಅದು ಪ್ರಯಾಣಿಕರನ್ನು ಶಾಂಘೈಗೆ ಕಳುಹಿಸಿಕೊಟ್ಟಿದೆ.

ಚೀನಾಕ್ಕೆ ಹೊರಟಿದ್ದ ಇದೇ ವಿಮಾನವನ್ನು ಕಳೆದ ವರ್ಷದ ಆಗಸ್ಟ್ 24ರಂದು ವಾಪಸ್ ಕಳುಹಿಸಲಾಗಿತ್ತು ಎನ್ನುವುದನ್ನು ಸ್ಮರಿಸಬಹುದಾಗಿದೆ. ಆದಾಗ್ಯೂ, ಇದಕ್ಕೆ ಇಂಜಿನಿಯರಿಂಗ್ ಸಮಸ್ಯೆ ಕಾರಣವೇ ಹೊರತು, ಪರವಾನಿಗೆಯಲ್ಲ ಎಂದು ವಾಯುಯಾನ ಸಂಸ್ಥೆ ವಿವರಣೆ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News