ಕನ್ಯಾನ: ಲಾರಿ - ಕಾರು ಢಿಕ್ಕಿ; ಮಗು ಸಹಿತ ಮೂವರಿಗೆ ಗಾಯ

Update: 2019-02-11 17:23 GMT

ಬಂಟ್ವಾಳ, ಫೆ. 11: ಲಾರಿಯೊಂದು ಕಾರಿಗೆ ಢಿಕ್ಕಿ ಹೊಡೆದ ಪರಿಣಾಮ ಮಗು ಸಹಿತ ಮೂವರು ಗಾಯಗೊಂಡು ವಧು-ವರ ಅಪಾಯದಿಂದ ಪಾರಾದ ಘಟನೆ ಕನ್ಯಾನ ಸಮೀಪದ ಕಮ್ಮಾಜೆ ಎಂಬಲ್ಲಿ ಸೋಮವಾರ ನಡೆದಿದೆ.

ಕನ್ಯಾನ ಗ್ರಾಮದ ಮಾರಾಟಿಮೂಲೆ ಎಂಬಲ್ಲಿ ವಿವಾಹ ಸಮಾರಂಭ ನಡೆಯುತ್ತಿತ್ತು. ಮದುಮಗನ ಕಡೆಯವರು ಮದುಮಗಳ ಮನೆಗೆ ಆಗಮಿಸಿ, ಮದುಮಗಳನ್ನು ಕರೆದುಕೊಂಡು ಹೋಗಲು ಆಗಮಿಸಿದ್ದರು. ಮನೆಯಿಂದ ಪೈವಳಿಕೆ ಕಡೆಗೆ ಕಾರಿನಲ್ಲಿ ತೆರಳುತ್ತಿದ್ದಾಗ ಜಲ್ಲಿ ಹುಡಿ ಸಾಗಾಟ ಮಾಡುತ್ತಿದ್ದ ಲಾರಿಯು ಕಮ್ಮಾಜೆ ಎಂಬಲ್ಲಿ ಕಾರಿಗೆ ಢಿಕ್ಕಿ ಹೊಡೆದಿದೆ. ಪರಿಣಾಮ ಕಾರಿನಲ್ಲಿದ್ದ ಮಗು ಸಹಿತ ಮೂವರು ಗಂಭೀರ ಗಾಯಗೊಂಡಿದ್ದು, ಇಬ್ಬರನ್ನು ಉಪ್ಪಳ ಆಸ್ಪತ್ರೆಗೆ ದಾಖಲು ಮಾಡಿದರೆ ಮಗುವನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ವಧು-ವರ ಅಪಾಯದಿಂದ ಪಾರಾಗಿದ್ದು, ಘಟನೆಯಲ್ಲಿ ಕಾರಿನ ಮುಂಭಾಗ ಜಖಂಗೊಂಡಿದೆ.

ಪ್ರತಿಭಟನೆ

ಘಟನೆ ನಡೆಯುತ್ತಿದ್ದಂತೆ ನೂರಾರು ಗ್ರಾಮಸ್ಥರು ಸ್ಥಳದಲ್ಲಿ ಆಕ್ರೋಶ ವ್ಯಕ್ತಪಡಿಸಿ, ಜಲ್ಲಿ ಹುಡಿ ಸಾಗಾಟ ಮಾಡುವ ಹತ್ತು ಚಕ್ರದ ಲಾರಿಗಳು ಈ ರಸ್ತೆಯಲ್ಲಿ ನಿರಂತರವಾಗಿ ಸಂಚಾರ ಮಾಡುತ್ತಿದೆ. ಇಲ್ಲಿ ಹತ್ತು ಚಕ್ರದ ಲಾರಿ ಸಂಚಾರ ಮಾಡಲು ಕಾನೂನು ಪ್ರಕಾರ ಪ್ರವೇಶ ನಿಷೇಧಿಸಲಾಗಿದೆ. ಆದರೂ, ಸಂಚಾರ ಮಾಡುತ್ತಿದೆ ಎಂದು ಆರೋಪಿಸಿ, ಪ್ರತಿಭಟನೆಗೆ ಮುಂದಾದ ಘಟನೆಯೂ ನಡೆಯಿತು.

ಈ ಸಂದರ್ಭ ವಿಟ್ಲ ಪೊಲೀಸರು ಸ್ಥಳಕ್ಕೆ ಆಗಮಿಸಿ ಲಾರಿಯನ್ನು ವಶಕ್ಕೆ ಪಡೆಯಲು ಮುಂದಾಗುತ್ತಿದ್ದಂತೆ ರೊಚ್ಚಿಗೆದ್ದ ಸಾರ್ವಜನಿಕರು ನೀವು ಲಾರಿ ವಶಕ್ಕೆ ಪಡೆಯಬಾರದು ಸಾರಿಗೆ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬರುವಂತೆ ಆಗ್ರಹಿಸಿದರು. ಬಳಿಕ ಸಾರ್ವಜನಿಕರು ಬಂಟ್ವಾಳ ಸಾರಿಗೆ ಇಲಾಖೆ ಅಧಿಕಾರಿಗಳ ಜೊತೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದು, ಬಳಿಕ ಪೊಲೀಸರು ಲಾರಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News