ಬಿಜೆಪಿಯಿಂದ ಅಮಾನತಾಗಿರುವ ಕೀರ್ತಿ ಆಝಾದ್ ಕಾಂಗ್ರೆಸ್ ಸೇರ್ಪಡೆ ?

Update: 2019-02-11 17:37 GMT

ಪಾಟ್ನ, ಫೆ.11: ಬಿಹಾರದ ದರ್ಭಾಂಗ ಕ್ಷೇತ್ರವನ್ನು ಮೂರು ಬಾರಿ ಪ್ರತಿನಿಧಿಸಿರುವ ಸಂಸದ ಕೀರ್ತಿ ಆಝಾದ್ ಫೆ.15ರಂದು ಕಾಂಗ್ರೆಸ್ ಸೇರುವ ನಿರೀಕ್ಷೆಯಿದೆ ಎಂದು ಕಾಂಗ್ರೆಸ್ ಮುಖಂಡರೊಬ್ಬರು ತಿಳಿಸಿದ್ದಾರೆ.

ಕೀರ್ತಿ ಆಝಾದ್ ‌ರನ್ನು ಪಕ್ಷ ವಿರೋಧಿ ಚಟುವಟಿಕೆಗಾಗಿ 2015ರಲ್ಲಿ ಬಿಜೆಪಿಯಿಂದ ಅಮಾನತುಗೊಳಿಸಲಾಗಿದೆ. ಸಾಂಪ್ರದಾಯಿಕವಾಗಿ ದರ್ಭಾಂಗ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಆರ್‌ಜೆಡಿ(ರಾಷ್ಟ್ರೀಯ ಜನತಾ ದಳ)ಯ ಮಧ್ಯೆ ತೀವ್ರ ಪೈಪೋಟಿ ನಡೆಯುತ್ತಾ ಬಂದಿದೆ. ಆಝಾದ್ ಕಾಂಗ್ರೆಸ್‌ ಗೆ ಸೇರ್ಪಡೆಗೊಂಡರೆ ಅವರು ಈ ಕ್ಷೇತ್ರದಲ್ಲಿ ಮರು ಆಯ್ಕೆ ಬಯಸುವ ಸಾಧ್ಯತೆಯಿದ್ದು, ಇದಕ್ಕೆ ಬಿಹಾರದಲ್ಲಿ ಕಾಂಗ್ರೆಸ್‌ನ ಮಿತ್ರ ಪಕ್ಷವಾಗಿರುವ ಆರ್‌ಜೆಡಿ ಒಪ್ಪುತ್ತದೆಯೇ ಎಂಬ ಬಗ್ಗೆ ಕುತೂಹಲವಿದೆ. ಮಾಜಿ ಕ್ರಿಕೆಟರ್ ಆಝಾದ್ ಬಿಹಾರದ ಮಾಜಿ ಮುಖ್ಯಮಂತ್ರಿ ಭಗವತ್ ಝಾ ಆಝಾದ್‌ರ ಪುತ್ರ. 2014ರ ಚುನಾವಣೆಯಲ್ಲಿ ದರ್ಭಾಂಗ್ ಕ್ಷೇತ್ರದಲ್ಲಿ ಆರ್‌ಜೆಡಿಯ ನಾಲ್ಕು ಬಾರಿಯ ಸಂಸದ ಮುಹಮ್ಮದ್ ಅಲಿ ಅಶ್ರಫ್ ಫಾತ್ಮಿಯನ್ನು ಸುಮಾರು 34 ಸಾವಿರ ಮತಗಳ ಅಂತರದಿಂದ ಸೋಲಿಸಿದ್ದರು. ಜೆಡಿಯುನ ಸಂಜಯ್ ಕುಮಾರ್ ಝಾ ಮೂರನೇ ಸ್ಥಾನ ಪಡೆದಿದ್ದರು. ಈ ಬಾರಿ ಬಿಹಾರದಲ್ಲಿ ಬಿಜೆಪಿ ಮತ್ತು ಜೆಡಿಯು ಮಧ್ಯೆ ಮೈತ್ರಿಯಾಗಿರುವ ಕಾರಣ ದರ್ಭಾಂಗ್‌ನಲ್ಲಿ ಝಾ ಮೈತ್ರಿಕೂಟದ ಅಭ್ಯರ್ಥಿಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News