ಉತ್ತರಪ್ರದೇಶ: ಕಳ್ಳಭಟ್ಟಿ ದುರಂತ; ಇಬ್ಬರು ಹಿರಿಯ ಅಧಿಕಾರಿಗಳ ಅಮಾನತು

Update: 2019-02-11 18:06 GMT

 ಲಕ್ನೋ, ಫೆ. 11: 104 ಜನರ ಸಾವಿಗೆ ಕಾರಣವಾದ ಉತ್ತರಪ್ರದೇಶ ಹಾಗೂ ಉತ್ತರಾಖಂಡದಲ್ಲಿ ಸಂಭವಿಸಿದ ಕಳ್ಳಭಟ್ಟಿ ದುರಂತಕ್ಕೆ ಸಂಬಂಧಿಸಿ ಉತ್ತರಪ್ರದೇಶ ಸರಕಾರ ಇಬ್ಬರು ಹಿರಿಯ ಅಧಿಕಾರಿಗಳನ್ನು ಅಮಾನತುಗೊಳಿಸಿದೆ. ಕಳ್ಳ ಭಟ್ಟಿ ದುರಂತದಲ್ಲಿ ಉತ್ತರಪ್ರದೇಶಲ್ಲಿ 67 ಮಂದಿ ಹಾಗೂ ಉತ್ತರಾಖಂಡದಲ್ಲಿ 37 ಮಂದಿ ಮೃತಪಟ್ಟಿದ್ದರು.

ಅನಂತರ ಉತ್ತರ ಪ್ರದೇಶದ ವಿವಿಧ ಭಾಗಗಲ್ಲಿ ದಾಳಿ ನಡೆಸಿ 79,000 ಲೀಟರ್ ಕಳ್ಳಭಟ್ಟಿ ವಶಪಡಿಸಿಕೊಳ್ಳಲಾಗಿತ್ತು. ಕಳ್ಳಭಟ್ಟಿಯಿಂದ ಸಾವು ಸಂಭವಿಸಿದ ಪ್ರಕರಣಕ್ಕೆ ಸಂಬಂಧಿಸಿ ವಿಶೇಷ ತನಿಖಾ ತಂಡ (ಸಿಟ್) ದಿಂದ ತನಿಖೆ ನಡೆಸುವುದಾಗಿ ಉತ್ತರಪ್ರದೇಶ ಸರಕಾರ ನಿನ್ನೆ ಘೋಷಿಸಿತ್ತು. ನಿರ್ದಿಷ್ಟವಾಗಿ ಪಿತೂರಿಯ ಆಯಾಮದ ಬಗ್ಗೆ ಗಮನ ಕೇಂದ್ರೀಕರಿಸುವಂತೆ ಹಾಗೂ 10 ದಿನಗಳ ಒಳಗೆ ವರದಿ ಸಲ್ಲಿಸುವಂತೆ ಹಿರಿಯ ಪೊಲೀಸ್ ಅಧಿಕಾರಿ ಸಂಜಯ್ ಸಿಂಘಾಲ್ ನೇತೃತ್ವದ ಐವರು ಸದಸ್ಯರ ಸಿಟ್ ತಂಡಕ್ಕೆ ಸರಕಾರ ಸೂಚಿಸಿದೆ.

ಕಳ್ಳಭಟ್ಟಿ ದುರಂತದಲ್ಲಿ ಅತಿ ಹೆಚ್ಚು ಸಾವು ಸಂಭವಿಸಿದ ಸಹರಣಪುರ ಹಾಗೂ ಕುಶಿನಗರ್‌ನ ಸರ್ಕಲ್ ಅಧಿಕಾರಿಗಳನ್ನು ಅಮಾನತುಗೊಳಿಸುವ ನಿರ್ಧಾರವನ್ನು ಕೂಡ ರಾಜ್ಯ ಸರಕಾರ ತೆಗೆದುಕೊಂಡಿದೆ. ಕಳ್ಳಭಟ್ಟಿ ದುರಂತದ ಬಗ್ಗೆ ಆದಿತ್ಯನಾಥ್ ನೇತೃತ್ವದ ಸರಕಾರ ಹಾಗೂ ಸಮಾಜವಾದಿ ಪಕ್ಷದ ನಡುವೆ ತೀವ್ರ ವಾಗ್ವಾದಗಳು ನಡೆದ ಬಳಿಕ ಅಧಿಕಾರಿಗಳ ವಿರುದ್ಧ ಈ ಕ್ರಮ ಕೈಗೊಳ್ಳಲಾಗಿದೆ. ಬಿಎಸ್‌ಪಿ ವರಿಷ್ಠೆ ಮಾಯಾವತಿ ಅವರು ಘಟನೆ ಬಗ್ಗೆ ಸಿಬಿಐ ತನಿಖೆ ನಡೆಸುವಂತೆ ಆಗ್ರಹಿಸಿದ್ದರು ಹಾಗೂ ಇದು ಬಿಜೆಪಿ ಸರಕಾರದ ‘ಕೇವಲ ಕಠೋರತೆ’ಯ ಪ್ರತಿಫಲ ಎಂದಿದ್ದಾರೆ.

ಒಂದು ವೇಳೆ ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದ್ದರೂ ಕಳ್ಳಭಟ್ಟಿ ಪ್ರಕರಣದಲ್ಲಿ ಸಂಪರ್ಕ ಹೊಂದಿದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಆದಿತ್ಯನಾಥ್ ಹೇಳಿದ್ದಾರೆ. ಈ ಹಿಂದೆ ಕೂಡ ಇಂತಹ ದುಷ್ಕೃತ್ಯದಲ್ಲಿ ಎಸ್‌ಪಿ ನಾಯಕರು ಭಾಗಿಯಾಗಿರುವುದು ಬೆಳಕಿಗೆ ಬಂದಿತ್ತು. ಅಝಂಗಢ, ಹರ್ಡೋಲಿ, ಕಾನ್ಪುರ ಹಾಗೂ ಬಾರಾಬಂಕಿಯಲ್ಲಿ ಸಂಭವಿಸಿದ್ದ ಕಳ್ಳಭಟ್ಟಿ ದುರಂತದಲ್ಲಿ ಎಸ್‌ಪಿ ನಾಯಕರು ಪಾಲ್ಗೊಂಡಿರುವುದು ಬಹಿರಂಗಗೊಂಡಿತ್ತು. ಈ ಬಾರಿ ಕೂಡ ಅವರ ಪಿತೂರಿಯನ್ನು ನಾವು ನಿರಾಕರಿಸಲು ಸಾಧ್ಯವಿಲ್ಲ ಎಂದು ಆದಿತ್ಯನಾಥ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News