ಶಾರದಾ ಚಿಟ್ ಫಂಡ್ ಹಗರಣ ಸಿಬಿಐ ತನಿಖೆ ಮೇಲ್ವಿಚಾರಣೆಗೆ ಸುಪ್ರೀಂ ನಕಾರ

Update: 2019-02-11 18:11 GMT

ಹೊಸದಿಲ್ಲಿ, ಫೆ. 11: ಪಶ್ಚಿಮಬಂಗಾಳದ ಶಾರದಾ ಚಿಟ್ ಫಂಡ್ ಹಗರಣದ ಕುರಿತ ನಡೆಯುತ್ತಿರುವ ಸಿಬಿಐ ತನಿಖೆಯ ಮೇಲ್ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ. ಚಿಟ್ ಫಂಡ್ ಹಗರಣದ ತನಿಖೆ ನಡೆಸುವಂತೆ ಸುಪ್ರೀಂ ಕೋರ್ಟ್ 2013ರಲ್ಲಿ ಸಿಬಿಐಗೆ ನಿರ್ದೇಶಿಸಿದ ಹಾಗೂ ಸಿಬಿಐ ತನಿಖೆ ಪೂರ್ಣಗೊಳ್ಳದ ಹೊರತಾಗಿಯೂ ಕೆಲವು ಹೂಡಿಕೆದಾರರು ಸಲ್ಲಿಸಿದ ಮನವಿಯನ್ನು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ಹಾಗೂ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರನ್ನು ಒಳಗೊಡ ದ್ವಿಸದಸ್ಯ ಪೀಠ ತಿರಸ್ಕರಿಸಿದೆ.

ಚಿಟ್ ಫಂಡ್ ಹಗರಣದ ತನಿಖೆಗೆ ಮೇಲ್ವಿಚಾರಣಾ ಸಮಿತಿ ರೂಪಿಸಲು ನಾವು ಒಲವು ಹೊಂದಿಲ್ಲ ಎಂದು ಪೀಠ ಹೇಳಿದೆ. ಸುಪ್ರೀಂ ಕೋರ್ಟ್ 2013ರಲ್ಲಿ ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸಿತ್ತು. ಸಿಬಿಐ ಮುಂದೆ ಹಾಜರಾಗುವಂತೆ ಕೋಲ್ಕತ್ತಾ ಪೊಲೀಸ್ ಆಯುಕ್ತ ರಾಜೀವ್ ಕುಮಾರ್ ಅವರಿಗೆ ಸುಪ್ರೀಂ ಕೋರ್ಟ್ ಪೆಬ್ರವರಿ 5ರಂದು ನಿರ್ದೇಶಿಸಿತ್ತು ಹಾಗೂ ತನಿಖಾ ಸಂಸ್ಥೆಯೊಂದಿಗೆ ಸಹಕರಿಸುವಂತೆ ಸೂಚಿಸಿತ್ತು. ಶಾರದಾ ಚಿಟ್ ಫಂಡ್ ಹಗರಣದ ತನಿಖೆಯಲ್ಲಿ ಸಿಟ್ ನೇತೃತ್ವ ವಹಿಸಿದ್ದ ಕುಮಾರ್ ಅವರು ಭೌತಿಕ ಸಾಕ್ಷಿಗಳಾದ ಪ್ರಧಾನ ಆರೋಪಿ ಹಾಗೂ ಸಂಭಾವ್ಯ ಆರೋಪಿಗಳ ಕಾಲ್ ರೆಕಾರ್ಡ್ ವಿವರಗಳನ್ನು ತಿರುಚಿದ್ದಾರೆ ಹಾಗೂ ನಾಶಗೊಳಿಸಿದ್ದಾರೆ ಎಂದು ಸಿಬಿಐ ಆರೋಪಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News