ಗದ್ದಲ, ಗೊಂದಲದ ಗೂಡಾದ ಬಂಟ್ವಾಳ ತಾಲೂಕು ಪಂಚಾಯತ್ ಸಾಮಾನ್ಯ ಸಭೆ

Update: 2019-02-12 14:40 GMT

ಬಂಟ್ವಾಳ, ಫೆ. 12: ಉಜ್ವಲ ಯೋಜನೆ ಹಾಗೂ ಕುಡಿಯುವ ನೀರಿನ ವಿಷಯಕ್ಕೆ ಸಂಬಂಧಿಸಿದಂತೆ ಮಂಗಳವಾರ ಬಂಟ್ವಾಳ ತಾಲೂಕು ಪಂಚಾಯತ್‍ನ ಎಸ್‍ಜಿಎಸ್‍ವೈ ಸಭಾಂಗಂಣದಲ್ಲಿನಡೆದ ತಾಲೂಕು ಪಂಚಾಯತ್ ಸಾಮಾನ್ಯ ಸಭೆಯು ಅಕ್ಷರಶಃ ಗದ್ದಲ, ಗೊಂದಲದ ಗೂಡಾಗಿ ಪರಿವರ್ತಿತವಾಗಿತ್ತು. ಆಡಳಿತ ಹಾಗೂ ಪ್ರತಿಪಕ್ಷಗಳ ಆರೋಪ-ಪ್ರತ್ಯಾರೋಪಗಳಿಗೆ ವೇದಿಕೆಯಾಗಿ ರಾಜಕೀಯ ಮೇಲಾಟವೇ ನಡೆಯಿತು.

ಸಭೆ ಆರಂಭವಾಗುತ್ತಿದ್ದಂತೆ ಜಿಲ್ಲಾ ಪಂಚಾಯತ್ ಸದಸ್ಯೆ ಮಂಜುಳಾ ಮಾವೆ ಮಾತನಾಡಿ, ಉಜ್ವಲ ಯೋಜನೆಯು ಖಾಸಗಿ ಕಾರ್ಯಕ್ರಮವೋ ಅಥವಾ ಸರಕಾರಿ ಕಾರ್ಯಕ್ರಮವೋ ? ಈ ಯೋಜನೆ ಯಾವ ಇಲಾಖೆಗೆ ಸಂಬಂಧಿಸಿದ್ದು ? ಎಂದು ಸಭೆಯನ್ನು ಪ್ರಶ್ನಿಸಿ, ಈ ಬಗ್ಗೆ ಮಾಹಿತಿ ನೀಡುವಂತೆ ಕೋರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಆಹಾರ ಮತ್ತು ನಾಗರಿಕ ಪೂರೈಕೆ ಅಧಿಕಾರಿ ಪ್ರತಿಯಿಸಿ ಈ ಯೋಜನೆ ನಮ್ಮ ಇಲಾಖಾ ವ್ಯಾಪ್ತಿಗೆ ಬಾರದಿದ್ದು, ಗ್ಯಾಸ್ ಏಜನ್ಸಿಗಳೇ ನೇರವಾಗಿ ಅಡುಗೆ ಅನಿಲ ವಿತರಿಸುತ್ತಿದೆ. ಮುಖ್ಯಮಂತ್ರಿಗಳ ಅನಿಲ ಯೋಜನೆಯಲ್ಲಿ ಮಾತ್ರ ತಮ್ಮ ಇಲಾಖೆಯಿಂದ ಫಲಾನುಭವಿಗಳನ್ನು ಆಯ್ಕೆಗೊಳಿಸಿ ಅಡುಗೆ ಅನಿಲ ವಿತರಿಸಲಾಗುತ್ತಿದೆ ಎಂದರು.

ಮಾತಿನ ಮಧ್ಯೆ ತಾಪಂ ಸದಸ್ಯ ಪ್ರಭಾಕರ ಪ್ರಭು ಪ್ರತಿಕ್ರಿಯಿಸಿ, ಉಜ್ವಲ ಯೋಜನೆಯು ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು, ಬಿಪಿಎಲ್ ಕಾರ್ಡ್ ಹೊಂದಿದ ಗ್ಯಾಸ್ ಸಂಪರ್ಕವಿಲ್ಲದ ಕುಟುಂಬವನ್ನು ಗುರುತಿಸಿ, ಗ್ಯಾಸ್ ಏಜೆನ್ಸಿಯ ಮೂಲಕ ವಿತರಣೆ ಮಾಡಲಾಗುತ್ತದೆ ಎಂದು ಸಭೆಗೆ ಮಾಹಿತಿ ನೀಡಿದರು.

ಈ ವಿಚಾರಕ್ಕೆ ಸಂಬಂಧಿಸಿ ಸ್ಥಳೀಯ ಪ್ರತಿನಿಧಿಗಳನ್ನು ಹಾಗೂ ಗ್ರಾಪಂ ಅನ್ನು ಗಣನೆಗೆ ತೆಗೆದುಕೊಳ್ಳದೇ ಮನೆ, ಅಂಗಡಿ ಬಾಗಿಲಿನಲ್ಲಿ ನಿಂತು ವಿತರಣೆ ಮಾಡಲಾಗುತ್ತಿದೆ. ಸ್ಥಳೀಯ ಪ್ರತಿನಿಧಿಗಳ ಹಾಗೂ ಗ್ರಾಪಂ ಮೂಲಕ ಗ್ಯಾಸ್ ಹಂಚಿಕೆ ಮಾಡಬೇಕಾಗಿ ನಿರ್ಣಯ ಮಾಡುವಂತೆ ಜಿಪಂ ಸದಸ್ಯೆ ಮಂಜುಳಾ ಅವರು ಸಭೆಯನ್ನು ಒತ್ತಾಯಿಸಿದರು.

ಇದಕ್ಕೆ ಸದಸ್ಯ ಪ್ರಭಾಕರ ಪ್ರಭು ಆಕ್ಷೇಪ ವ್ಯಕ್ತಪಡಿಸಿ, ತಾಪಂ ಸಭೆಯಲ್ಲಿ ಜಿಪಂ ಸದಸ್ಯರು ಭಾಗವಹಿಸಿ ಸಲಹೆ ಮಾತ್ರ ನೀಡಬೇಕೆ ವಿನಹ ಪ್ರಶ್ನೆ ಕೇಳಲು ಅವಕಾಶವಿಲ್ಲ. ಜಿಪಂ ಸದಸ್ಯರ ಮಾತನ್ನು ತಾಪಂನಲ್ಲಿ ನಿರ್ಣಯ ಮಾಡಲು ಆಗುವುದಿಲ್ಲ ಎಂದಾಗ, ಸದಸ್ಯ ಹೈದರ್ ಕೈರಂಗಳ ಮಾತನಾಡಿ, ಜಿಪಂ ಸದಸ್ಯರ ಸಲಹೆಗಳು ಸಾಮಾನ್ಯ ಸಭೆಗೆ ಅಗತ್ಯವಾಗಿದ್ದು, ಇದನ್ನು ಮಾನ್ಯ ಮಾಡಬೇಕು. ಅದನ್ನು ಬಿಟ್ಟು ಅವರಿಗೆ ಅಗೌರವವನ್ನು ಉಂಟು ಮಾಡುವುದು ಸರಿಯಲ್ಲ ಎಂಂದರು. ಈ ವಿಚಾರವಾಗಿ ಸಭೆಯಲ್ಲಿ ಕೆಲ ಸಮಯ ಗದ್ದಲ, ಪರ-ವಿರೋಧ ಚರ್ಚೆ ನಡೆದು, ಗೊಂದಲದ ಗೂಡಾಗಿ ಪರಿವರ್ತಿತವಾಯಿತು. 

ತಾಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಅವರು ಉಜ್ವಲ ಯೋಜನೆಯ ಬಗ್ಗೆ ಸಭೆಗೆ ಮಾಹಿತಿ ನೀಡಿ, ವಿತರಣೆಯ ರೂಪುರೇಷೆಗಳ ಬಗ್ಗೆ ಜಿಲ್ಲಾಧಿಕಾರಿಯೊಂದಿಗೆ ಚರ್ಚಿಸಿ ಮಾಹಿತಿ ನೀಡಲಾಗುವುದು ಎಂದರು.

ಕರೋಪಾಡಿ ಗ್ರಾಮಕ್ಕೆ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ: ಆರೋಪ

ಕರೋಪಾಡಿ ಗ್ರಾಮದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಸಂಪರ್ಕವಿರುವ ಪ್ರದೇಶವಾದ ಮಿತ್ತನಡ್ಕ-ಬೇಡಗುಡ್ಡೆ-ದೇವಸ್ಯ ಮತ್ತುಬೇಂಗದಪಡ್ಪು ಎಂಬಲ್ಲಿ ನೀರಿನ ಟ್ಯಾಂಕ್‍ಗಳಿಗೆ ಸಮರ್ಪಕವಾಗಿ ಕುಡಿಯುವ ನೀರು ಸರಬರಾಜು ಆಗುತ್ತಿಲ್ಲ. ಅಲ್ಲದೆ, ಕಳೆದ 1 ವರ್ಷದಿಂದ ಇದನ್ನು ಸರಿಯಾಗಿ ನರ್ವಹಣೆ ಮಾಡು ತ್ತಿಲ್ಲ. ಇದರಿಂದ ಗ್ರಾಮಸ್ಥರಿಗೆ ನೀರಿನ ಸಮಸ್ಯೆ ಉಲ್ಬಣಗೊಂಡಿದೆ ಎಂದು ತಾಪಂ ಸದಸ್ಯ ಉಸ್ಮಾನ್ ಕರೋಪಾಡಿ ಗಂಭೀರ ಆರೋಪ ಮಾಡಿದರು.

ಇದಕ್ಕೆ ಧ್ವನಿಗೂಡಿಸಿದ ಜಿಪಂ ಸದಸ್ಯ ತುಂಗಪ್ಪ ಬಂಗೇರ, ಸಂಗಬೆಟ್ಟು ಗ್ರಾಮ ಸಹಿತ ಇನ್ನಿತರ ಗ್ರಾಮಗಳಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ 2 ವರ್ಷಗಳ ಹಿಂದೆಯೇ ಪೈಪ್‍ಲೇನ್ ಸಹಿತ ಟ್ಯಾಂಕ್‍ಗಳನ್ನು ನಿರ್ಮಾಣ ಮಾಡಲಾಗಿದೆ. ಆದರೂ, ಸರಿಯಾಗಿ ನೀರು ಪೂರೈಕೆ ಯಾಗುತ್ತಿಲ್ಲ ಎಂದರು.

ಸಂಗಬೆಟ್ಟುವಿನ ಕರಿಮಳೆ ಎಂಬಲ್ಲಿ ಹೊಸಪಂಪು ಕಾಮಗಾರಿ ಪ್ರಗತಿಯಲ್ಲಿದ್ದು, ಈ ತಿಂಗಳ ಕೊನೆಗೆ ಕಾಮಗಾರಿ ಪೂರ್ಣಗೊಳಿಸಲಾಗುವುದು. ಅದೇ ರೀತಿ ಕರೋಪಾಡಿಯಲ್ಲಿ ನಿರಂತರ ವಿದ್ಯುತ್ ಸಮಸ್ಯೆಯಿಂದ ತೊಟ್ಟಿಗಳಿಗೆ ನೀರನ್ನು ತುಂಬಿಸುವ ಪ್ರಕ್ರಿಯೆ ನಿಧಾನವಾಗಿರುತ್ತದೆ ಎಂದು ಮೆಸ್ಕಾಂ ಅಧಿಕಾರಿಗಳು ಸಭೆಗೆ ತಿಳಿಸಿದಾಗ, ಶೀಘ್ರವಾಗಿ ಸಮಸ್ಯೆ ಪರಿಹಾರ ಮಾಡುವಂತೆ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಅವರು ಸೂಚನೆ ನೀಡಿದರು.

ಒಂದು ವಾರದೊಳಗೆ ಕುಡಿಯುವ ನೀರಿನ ಸಮಸ್ಯೆ ನಿವಾರಿಸುವಂತೆ ಸದಸ್ಯ ಉಸ್ಮಾನ್ ಕರೋಪಾಡಿ ಪಟ್ಟು ಹಿಡಿದ ಪ್ರಸಂಗವೂ ನಡೆಯಿತು.

ವಿದ್ಯಾರ್ಥಿ ವೇತನ ವಿತರಣೆ:

ತಾಲೂಕಿನಲ್ಲಿ 40,393 ವಿದ್ಯಾರ್ಥಿಗಳಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಬಂದಿದ್ದು, ಈ ಪೈಕಿ 3,800 ವಿದ್ಯಾರ್ಥಿಗಳನ್ನು ಹೊರತು ಪಡಿಸಿ, ಉಳಿದ ಎಲ್ಲರಿಗೂ ವಿದ್ಯಾರ್ಥಿ ವೇತನವನ್ನು ವಿತರಣೆ ಮಾಡಲಾಗಿದೆ. ಬ್ಯಾಂಕ್‍ನಲ್ಲಿ ಆಧಾರ್ ಕಾರ್ಡ್ ಲಿಂಕ್ ಮಾಡದ ಕಾರಣ 3,800 ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನವನ್ನು ತಡೆಹಿಡಿಯಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶಿವಪ್ರಕಾಶ್ ಸಭೆಗೆ ಮಾಹಿತಿ ನಿಡಿದರು.

ಗುಣಮಟ್ಟವಿಲ್ಲದ ಸೈಕಲ್‍ಗಳನ್ನು ಮಕ್ಕಳಿಗೆ ವಿತರಣೆ ಮಾಡಿರುವ ಬಗ್ಗೆ ಸದಸ್ಯ ರಮೇಶ್ ಸಭೆಯಲ್ಲಿ ಪ್ರಸ್ತಾಪಿಸಿದಾಗ, ಸರಕಾರ ಜಿಲ್ಲೆಯ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಆದೇಶ ನೀಡಿದ್ದರಿಂದ ತಾಲೂಕಿನಲ್ಲಿ ಸೈಕಲ್‍ಗಳ ವಿತರಣೆ ತಡೆಹಿಡಿಯಲಾಗಿತ್ತು. ಇದೀಗ ಮತ್ತೆ ಗುಣಮಟ್ಟವಿರುವ ಸೈಕಲ್‍ಗಳನ್ನು ವಿತರಿಸಲು ಆದೇಶಿಸಿದ್ದು, ಈ ನಿಟ್ಟಿನಲ್ಲಿ ವಿತರಣೆ ಮಾಡಲಾಗಿದೆ. ವಿತರಿಸಿದ ಸೈಕಲ್‍ಗಳನ್ನು ಗುಣಮಟ್ಟ ಇಲ್ಲದಿದ್ದಲ್ಲಿ ಅದನ್ನು ಹಿಂದಿರುಗಿಸುವಂತೆ ಶಾಲೆಗಳಿಗೆ ಮಾಹಿತಿ ನೀಡಲಾಗಿದೆ ಎಂದು ಶಿವಪ್ರಕಾಶ್ ಸಭೆಗೆ ತಿಳಿಸಿದರು.

ಪಂದ್ಯಾಟಕ್ಕೆ ಅನುಮತಿ ನೀಡಬೇಡಿ

ಮಾರ್ಚ್ ತಿಂಗಳಲ್ಲಿ ಎಸೆಸೆಲ್ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆ ನಡೆಯಲಿದ್ದು, ವಿದ್ಯಾರ್ಥಿಗಳ ಹಿತದೃಷ್ಠಿಯಿಂದ ಆ ತಿಂಗಳಲ್ಲಿ ಕ್ರಿಕೆಟ್ ಸಹಿತ ಇನ್ನಿತರ ಪಂದ್ಯಾಟಗಳಿಗೆ ಅನುಮತಿ ನೀಡಬಾರದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶೀವಪ್ರಕಾಶ್ ಸಭೆಯನ್ನು ಒತ್ತಾಯಿಸಿದಾಗ, ಈ ವಿಚಾರವನ್ನು ಸ್ವಾಗತಿಸಿ ಸಭೆಯಲ್ಲಿ ನಿರ್ಣಯಿಸಲಾಯಿತು. 

ಮಾ.10ರಂದು ಪಲ್ಸ್ ಪೋಲಿಯೋ

ಮಾರ್ಚ್ 10ರಂದು ಪಲ್ಸ್ ಪೋಲಿಯೋ ಕಾರ್ಯಕ್ರಮ ಆಯೋಜಿಸಲಾಗಿದ್ದು, ತಾಲೂಕಿನ 196 ಬೂತ್‍ಗಳಲ್ಲಿ 30 ಸಾವಿರಕ್ಕೂ ಹೆಚ್ಚು ಮಕ್ಕಳಿಗೆ ಪಲ್ಸ್ ಲಸಿಕೆ ಹಾಕುವ ಗುರಿಯನ್ನು ಹೊಂದಲಾಗಿದೆ. ಇದಕ್ಕಾಗಿ 784 ವಿವಿಧ ಸಂಘಗಳ ಕಾರ್ಯಕರ್ತೆರಿಗೆ ತರಬೇತಿ ನೀಡಲಾಗಿದೆ ಎಂದು ತಾಲೂಕು ವೈದ್ಯಾಧಿಕಾರಿ ದೀಪಾಪ್ರಭು ಮಾಹಿತಿ ನೀಡಿರು.

ಬೆಂಜನಪದವು ಪ್ರಾಥಮಿಕ ಆರೋಗ್ಯಕೇಂದ್ರದ ವೈದ್ಯಾಧಿಕಾರಿಯ ವಿರುದ್ದ ಹಲವಾರು ಆರೋಪಗಳು ಬಂದಿರುವ ಹಿನ್ನೆಲೆಯಲ್ಲಿ, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ, ಅವರ ಮೇಲಿನ ಆರೋಪಗಳು ಸಾಬೀತಾಗಿದ್ದು, ಅವರಿಗೆ ಶೋಕಾಸ್ ನೋಟೀಸ್ ನೀಡಲಾಗಿದೆ ಎಂದು ತಾಲೂಕು ವೈದ್ಯಾಧಿಕಾರಿ ದೀಪಾಪ್ರಭು ತಿಳಿಸಿದರು.

ಪೋಡಿಮುಕ್ತ ಗ್ರಾಮ, ಅಕ್ರಮ ಸಕ್ರಮ, ಹಕ್ಕುಪತ್ರ ವಿತರಣೆ, ಭೂ ಮಂಜೂರಾತಿಯಾದ ಜಮೀನಿನ ಪರಭಾರೆ, ಶಾಲೆಗಳಿಗೆ ಆವರಣ ಗೋಡೆ ನಿರ್ಮಾಣ, ಕರೋಪಾಡಿಯಲ್ಲಿ ಅಂಬೇಡ್ಕರ್ ಭವನ ನಿರ್ಮಾಣ, ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಅಂಗನವಾಡಿ ಕಾರ್ಯಕರ್ತರ ಬಳಕೆ ಹಾಗೂ ಇತರ ವಿಷಯಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು.

ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ ಅಧ್ಯಕ್ಷತೆ ವಹಿಸಿದ್ದರು. ತಾಪಂ ಉಪಾಧ್ಯಕ್ಷ ಅಬ್ಬಾಸ್ ಅಲಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷ್ಮೀ ಸಿ.ಬಂಗೇರ, ತಹಶೀಲ್ದಾರ್ ರಶ್ಮಿ ಕಿಶೋರ್ ಹಾಜರಿದ್ದರು.

ತಾಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಸ್ವಾಗತಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News