ಕಾನೂನು ಉಲ್ಲಂಘನೆ ಆರೋಪ: ಪಾರಿಕ್ಕರ್ ಪುತ್ರನಿಗೆ ಬಾಂಬೆ ಹೈಕೋರ್ಟ್ ನೋಟಿಸ್

Update: 2019-02-12 14:41 GMT

ಪಣಜಿ,ಫೆ.12: ಪರಿಸರ ಸ್ನೇಹಿ ರೆಸಾರ್ಟ್ ನಿರ್ಮಾಣಕ್ಕಾಗಿ ಅರಣ್ಯ ಪ್ರದೇಶಗಳನ್ನು ನಾಶಗೊಳಿಸಲಾಗಿದೆ ಮತ್ತು ಹಲವಾರು ಕಾನೂನುಗಳನ್ನು ಉಲ್ಲಂಘಿಸಲಾಗಿದೆ ಎಂದು ಆರೋಪಿಸಿ ಗೋವಾದ ಮುಖ್ಯಮಂತ್ರಿ ಮನೋಹರ ಪಾರಿಕ್ಕರ್ ಅವರ ಪುತ್ರ ಅಭಿಜಾತ್ ವಿರುದ್ಧ ಸಲ್ಲಿಸಲಾಗಿರುವ ದೂರಿಗೆ ಸಂಬಂಧಿಸಿದಂತೆ ಬಾಂಬೆ ಉಚ್ಚ ನ್ಯಾಯಾಲಯದ ಪಣಜಿ ಪೀಠವು ಮಂಗಳವಾರ ಕಿರಿಯ ಪಾರಿಕ್ಕರ್‌ಗೆ ನೋಟಿಸನ್ನು ಹೊರಡಿಸಿದೆ.

ಹೈಡ್‌ಅವೇ ಹಾಸ್ಪಿಟಾಲಿಟಿಯ ಪ್ರವರ್ತಕ ಅಭಿಜಾತ್ ಮತ್ತು ರಾಜ್ಯ ಮುಖ್ಯ ಕಾರ್ಯದರ್ಶಿ,ಪರಿಸರ ಮತ್ತು ಅರಣ್ಯ ಕಾರ್ಯದರ್ಶಿ,ಪ್ರಧಾನ ಮುಖ್ಯ ಅರಣ್ಯ ಸಂರಕ್ಷಕ ಸೇರಿದಂತೆ ಇತರ ಪ್ರತಿವಾದಿಗಳಿಗೆ ನೋಟಿಸುಗಳನ್ನು ಹೊರಡಿಸಿದ ನ್ಯಾಯಮೂರ್ತಿಗಳಾದ ಮಹೇಶ ಸೋನಕ್ ಮತ್ತು ಪೃಥ್ವಿರಾಜ ಚವಾಣ್ ಅವರ ಪೀಠವು,ಮಾ.11ರೊಳಗೆ ಉತ್ತರಿಸುವಂತೆ ನಿರ್ದೇಶ ನೀಡಿದೆ.

ದಕ್ಷಿಣ ಗೋವಾದ ನೇತ್ರಾವಳಿ ವನ್ಯಜೀವಿ ಧಾಮದ ಸಮೀಪ ರೆಸಾರ್ಟ್ ನಿರ್ಮಾಣಕ್ಕೆ ತಡೆಯಾಜ್ಞೆ ನೀಡುವಂತೆ ಕೋರಿ ನೇತ್ರಾವಳಿ ಪಂಚಾಯತ್‌ನ ಉಪ ಸರಪಂಚ ಅಭಿಜಿತ್ ದೇಸಾಯಿ ಅವರು ಫೆ.4ರಂದು ಈ ಅರ್ಜಿಯನ್ನು ಸಲ್ಲಿಸಿದ್ದರು.

90,000 ಚ.ಮೀ.ವಿಸ್ತೀರ್ಣದ ರೆಸಾರ್ಟ್‌ನ ತ್ವರಿತ ನಿರ್ಮಾಣಕ್ಕೆ ಅನುಕೂಲವಾಗುವಂತೆ ಬಿಜೆಪಿ ನೇತೃತ್ವದ ಸರಕಾರವು ವಿಶೇಷ ಅಧ್ಯಾದೇಶವನ್ನು ಹೊರಡಿಸಿದ್ದನ್ನೂ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ತನ್ಮಧ್ಯೆ ಈ ಅರ್ಜಿ ಪ್ರತಿಪಕ್ಷ ಕಾಂಗ್ರೆಸ್ ಮತ್ತು ರಾಜ್ಯ ಸರಕಾರದ ನಡುವೆ ಸಂಘರ್ಷಕ್ಕೂ ಕಾರಣವಾಗಿದೆ. ರಾಜ್ಯದ ಬಿಜೆಪಿ ನೇತೃತ್ವದ ಸರಕಾರಗಳು ಸ್ವಜನ ಪಕ್ಷಪಾತದಲ್ಲಿ ತೊಡಗಿದ್ದವು ಮತ್ತು ರೆಸಾರ್ಟ್ ಯೋಜನೆಯಲ್ಲಿ ಅಕ್ರಮಗಳಿಗೆ ಅವಕಾಶ ಕಲ್ಪಿಸಿದ್ದವು ಎಂದು ಕಾಂಗ್ರೆಸ್ ಆರೋಪಿಸಿದರೆ,ಅಭಿಜಾತ್ ಮತ್ತು ಮನೋಹರ ಪಾರಿಕ್ಕರ್ ಯಾವುದೇ ತಪ್ಪುಗಳನ್ನು ಮಾಡಿಲ್ಲ ಎಂದು ಬಿಪೆಪಿ ರಾಜ್ಯಾಧ್ಯಕ್ಷ ವಿನಯ ತೆಂಡುಲ್ಕರ್ ಅವರು ಸಮರ್ಥಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News