20 ರೂಪಾಯಿ ಖರ್ಚಾಗುವ ತಲೆಗೂದಲು ಕಟಿಂಗ್ ಗೆ 28,000 ರೂಪಾಯಿ ಕೊಟ್ಟ!

Update: 2019-02-13 05:41 GMT

ಅಹ್ಮದಾಬಾದ್, ಫೆ. 12: 20 ರೂಪಾಯಿ ಖರ್ಚಾಗುವ ತಲೆಗೂದಲು ಕಟಿಂಗ್ ಗೆ 28,000 ರೂಪಾಯಿ ಕೊಟ್ಟಿದ್ದರೆ ಅದಕ್ಕೆ ಕಾರಣವೇನಿರಬಹುದು ? ಒಂದೋ ಆತ  ತಲೆಗೂದಲು ತೆಗೆಯುವವನ ಪ್ರತಿಭೆಗೆ ಬೆರಗಾಗಿರಬೇಕು ಅಥವಾ ಆತನನ್ನು ಆ ಅಂಗಡಿಯವನು ವಂಚಿಸಿರಬೇಕು. ಅಲ್ಲವೇ ?

ಇಂತಹದೊಂದು ಘಟನೆ ಇತ್ತೀಚಿಗೆ ಅಹ್ಮದಾಬಾದ್ ನಲ್ಲಿ ನಡೆದಿದೆ. ನಾರ್ವೆ ದೇಶದ ಯೂಟ್ಯೂಬ್ ವಿಡಿಯೋ ಗಳ ಖ್ಯಾತಿಯ  ಹೆರಾಲ್ಡ್ ಬಾಲ್ಡ್ರ್ ಅಹ್ಮದಾಬಾದ್ ನಲ್ಲಿದ್ದರು. ಅಲ್ಲಿನ ಬೀದಿ ಬದಿಯ ಸಲೂನ್ ಒಂದಕ್ಕೆ ಹೋದ ಹೆರಾಲ್ಡ್ ತಲೆಗೂದಲು ತೆಗೆಯುವಂತೆ ಹೇಳಿ ಅದನ್ನು ವಿಡಿಯೋ ಮಾಡಿಕೊಳ್ಳಲು ಆತನ ಅನುಮತಿಯನ್ನೂ ಪಡೆಯುತ್ತಾರೆ.

ಕಟಿಂಗ್ ಮುಗಿದ ಮೇಲೆ ಸುತ್ತಮುತ್ತಲ ಜನರ ಬಳಿ ಮಾತಾಡಿಸಿ ಅಲ್ಲಿನ ಜನಜೀವನ, ಈ ಸಲೂನ್ ನವನ ಬದುಕು, ಆತನ ದುಡಿಮೆ ಇತ್ಯಾದಿಗಳ ಕುರಿತು ವಿಡಿಯೋ ಮಾಡುವುದು ಹೆರಾಲ್ಡ್ ಉದ್ದೇಶ ಎಂದು ಅವರೇ ವಿಡಿಯೋ ದಲ್ಲಿ ಹೇಳುತ್ತಾರೆ.

ಕಟಿಂಗ್ ಮಾಡಿಸುತ್ತಾ ಚಾರ್ಜ್ ಎಷ್ಟು ಎಂದು ಹೆರಾಲ್ಡ್ ಕೇಳಿದಾಗ ಸಲೂನ್ ನವನು 20 ರೂಪಾಯಿ ಎನ್ನುತ್ತಾನೆ. “20 ರೂಪಾಯಿ!” ಎಂದು ಬೆರಗಾಗುವ ಹೆರಾಲ್ಡ್ , “ನೋಡಿ ಇದು ಅತ್ಯಂತ ಸೀದಾಸಾದಾ ಪ್ರಾಮಾಣಿಕತನ. ಆತ ನೂರು ರೂಪಾಯಿ ಎಂದಿದ್ದರೆ ನಾನು ತುಟಿ ಪಿಟಿಕ್ ಅನ್ನುತ್ತಿರಲಿಲ್ಲ. ಆದರೆ ಆತ ಆತನ ಸಾಮಾನ್ಯ ಶುಲ್ಕವನ್ನೇ ಕೇಳಿದ ಎಂದು ಹೇಳಿ 400 ಡಾಲರ್ ನೋಟು ತೆಗೆದು ಆತನ ಕೈಗಿಡುತ್ತಾರೆ ! 400 ಡಾಲರ್  ಅಂದರೆ 28,000 ರೂಪಾಯಿ!!”

“ನಾನು ಸುಮ್ಮನೆ ಆ ಹಣ ಕೊಟ್ಟಿಲ್ಲ. ಆ ಸಲೂನ್ ನವನು ಆ ಹಣದಿಂದ ತನ್ನ ಕೆಲಸಕ್ಕೆ ಬೇಕಾದ ಒಳ್ಳೆಯ ಉಪಕರಣಗಳನ್ನು ಖರೀದಿಸಬೇಕು ಹಾಗು ತನ್ನ ಮನೆಯವರನ್ನು ಚೆನ್ನಾಗಿ ನೋಡಿಕೊಳ್ಳಬೇಕು” ಎಂದು ಅಲ್ಲಿದ್ದವರ ಬಳಿ ಆತನಿಗೆ ಹೇಳಿಸುತ್ತಾರೆ ಹೆರಾಲ್ಡ್. ಖುಷಿಯಾಗಿ ಪುಳಕಗೊಂಡ ಅಂಗಡಿಯವನು ಹೆರಾಲ್ಡ್ ಗೆ ಕಾಫಿ ತರಿಸಿ ಕೊಡುತ್ತಾನೆ.

ನಿಜವಾಗಿ ಹೆರಾಲ್ಡ್ ಬಗ್ಗೆ ತಿಳಿದವರಿಗೆ ಇದು ಹೊಸತಲ್ಲ. ಯುಟ್ಯೂಬ್ ವಿಡಿಯೋ ಮಾಡಿಕೊಂಡು ಜಗತ್ತು ಸುತ್ತುವ ಹೆರಾಲ್ಡ್ ತಾನು ಜನರಿಂದ ಸಂಗ್ರಹಿಸಿದ ಹಣವನ್ನು ಹೀಗೆ ತನಗೆ ಸಿಗುವ ಅರ್ಹ ವ್ಯಕ್ತಿಗೆ ಅಥವಾ ವ್ಯಾಪಾರಿಗೆ ಕೊಟ್ಟು ಆತ ಬದುಕು ಕಟ್ಟಿಕೊಳ್ಳಲು ನೆರವಾಗುತ್ತಾರೆ. ಇದರಿಂದಾಗಿಯೇ ಅವರ ವಿಡಿಯೋ ಗಳು ವ್ಯಾಪಕ ಜನಪ್ರಿಯತೆ ಗಳಿಸಿವೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News