'ಕಲೆಯ ಮೇಲೆ ವಿಧಿಸುವ ಜಿಎಸ್‌ಟಿ ವಿರುದ್ಧ ಆಂದೋಲನ ಅಗತ್ಯ'

Update: 2019-02-12 15:22 GMT

ಉಡುಪಿ, ಫೆ.12: ರಂಗಭೂಮಿಗೆ ಸರಕಾರಗಳು ಬೆಂಬಲ ನೀಡಿ, ಅದರ ಲ್ಲಿನ ಕೊರತೆ ನಿವಾರಿಸಬೇಕೇ ಹೊರತು ಅದರ ಮೇಲೆ ಸುಂಕ ಹಾಕುವುದು ನ್ಯಾಯ ಅಲ್ಲ. ಕೇಂದ್ರ ಸರಕಾರ ಕಲೆ, ಸಂಸ್ಕೃತಿ, ಸಂಗೀತ, ನೃತ್ಯಗಳ ಮೇಲೆ ಶೇ.18ರಷ್ಟು ವಿಧಿಸುತ್ತಿರುವ ಜಿಎಸ್‌ಟಿ ವಿರುದ್ಧ ರಂಗಕರ್ಮಿಗಳು ಆಂದೋಲನ ಆರಂಭಿಸಬೇಕು ಎಂದು ರಂಗಭೂಮಿ ಮತ್ತು ಚಲನಚಿತ್ರ ನಿರ್ದೇಶಕ ಎಂ. ಎಸ್. ಸತ್ಯು ಕರೆ ನೀಡಿದ್ದಾರೆ.

ಕರ್ನಾಟಕ ನಾಟಕ ಅಕಾಡೆಮಿಯ ವತಿಯಿಂದ ಉಡುಪಿ ಪುರಭವನದಲ್ಲಿ ಮಂಗಳವಾರ ಆಯೋಜಿಸಲಾದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು. ಈ ಆಂದೋಲನದಲ್ಲಿ ಎಲ್ಲರೂ ಕೈಜೋಡಿಸಬೇಕು. ಇಂತಹ ಬುದ್ದಿ ಇಲ್ಲದ ಸರಕಾರಕ್ಕೆ ದೊಣ್ಣೆ ಅಥವಾ ಮಾತಿನ ಮೂಲಕ ವಿಚಾರ ತಿಳಿಸುವ ಕೆಲಸ ಮಾಡಬೇಕು. ದೊಣ್ಣೆ ಮೂಲಕ ತಿಳಿಸುವುದೇ ಉತ್ತಮ. ಯಾಕೆಂದರೆ ಸ್ವಲ್ಪ ಪೆಟ್ಟಾದರೆ ಮಾತ್ರ ಸರಕಾರ ಎಚ್ಚೆತ್ತುಕೊಳ್ಳುವುದು ಎಂದರು.

ಪಿಟೀಲು ಚೌಡಯ್ಯರ ಹೆಸರಿನಲ್ಲಿ ಸರಕಾರ ಒಂದು ರೂ.ಗೆ ನೀಡಿದ ದೊಡ್ಡ ಜಮೀನಿನಲ್ಲಿ ನಿರ್ಮಿಸಿರುವ ರಂಗಮಂದಿರದಲ್ಲಿ ನಾಟಕಗಳಿಗೆ ಬೇಕಾಬೆಟ್ಟಿ ಬಾಡಿಗೆಗಳನ್ನು ತೆಗೆದುಕೊಳ್ಳಲಾಗುತ್ತದೆ. ಆದರೆ ಹವ್ಯಾಸಿ ನಾಟಕದವರೇ ನಡೆಸಿ ಕೊಂಡು ಬರುತ್ತಿರುವ ರಂಗ ಶಂಕರದಲ್ಲಿ ಕಳೆದ 14ವರ್ಷಗಳಿಂದಲೂ 2500 ರೂ. ಬಾಡಿಗೆ ಪಡೆದುಕೊಳ್ಳಲಾಗುತ್ತದೆ. ಇಲ್ಲಿ ಸಾಧ್ಯವಾದರೆ ಸರಕಾರ ಬೇರೆ ಕಡೆ ಮಾಡಲು ಯಾಕೆ ಸಾಧ್ಯವಿಲ್ಲ. ಆದುದರಿಂದ ಸರಕಾರಕ್ಕೆ ಬುದ್ದಿ ಬರುವ ರೀತಿಯಲ್ಲಿ ಹೋರಾಟ ಮಾಡಬೇಕಾಗಿದೆ ಎಂದು ಅವರು ಹೇಳಿದರು.

ನಗಾರಿ ಬಾರಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದ ಹಿರಿಯ ವಿಮರ್ಶಕ ಪ್ರೊ.ಮುರಳೀಧರ ಉಪಾಧ್ಯಾಯ ಮಾತನಾಡಿ, ರಾಜ್ಯದಲ್ಲಿ ಸಾಕಷ್ಟು ನಾಟಕ ಶಾಲೆಗಳಿರುವುದರಿಂದ ಅಕಾಡೆಮಿಯು ತಜ್ಞರ ಸಮಿತಿಯ ಮೂಲಕ ರಂಗ ಶಿಕ್ಷಣ ಪಠ್ಯ ಕ್ರಮವನ್ನು ತಯಾರಿಸಬೇಕು. ಉಡುಪಿ ಮತ್ತು ದ.ಕ. ಜಿಲ್ಲೆಯಲ್ಲಿ ಈವರೆಗೆ ರಂಗ ಮಂದಿರ ನಿರ್ಮಾಣವಾಗದಿರುವುದು ನಾಚಿಕೆಗೇಡು ಎಂದು ಟೀಕಿಸಿದರು.

ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯು ದಕ್ಷಿಣ ಭಾರತದ ವಿದ್ಯಾರ್ಥಿ ಗಳನ್ನು ಅಲಕ್ಷ ಮಾಡುತ್ತಿದೆ. ಈ ವರ್ಷ ತಮಿಳುನಾಡಿನ ಒಬ್ಬ ವಿದ್ಯಾರ್ಥಿ ಯನ್ನು ಮಾತ್ರ ಆಯ್ಕೆ ಮಾಡಲಾಗಿದೆ. ಇಲ್ಲಿ ಅವಕಾಶ ವಂಚಿತ ವಿದ್ಯಾರ್ಥಿ ಗಳು ಸಿಂಗಾಪುರಕ್ಕೆ ತೆರಳುತ್ತಿದ್ದಾರೆ. ಅಕಾಡೆಮಿಯು ನಾಟಕ ವಿಮರ್ಶೆಯ ಪರಿಭಾಷೆಯನ್ನು ವಿವರಿಸುವ ಗ್ರಂಥವನ್ನು ಪ್ರಕಟಿಸಬೇಕು ಎಂದು ಅವರು ತಿಳಿಸಿದರು.

ನಾಟಕ ಅಕಾಡೆಮಿ, ರಂಗಾಯಣ, ನಾಟಕ ಸಂಸ್ಥೆಗಳಿಗೆ ರಾಜ್ಯ ಸರಕಾರ ಒಟ್ಟು 8-9 ಕೋಟಿ ರೂ. ಅನುದಾನ ನೀಡುತ್ತದೆ. ಆದರೆ ಸಿನೆಮಾಗಳಿಗೆ ಲಕ್ಷಾಂತರ ರೂ. ಸಬ್ಸಿಡಿ ನೀಡಲಾಗುತ್ತದೆ. ಕನ್ನಡ ಸಾಹಿತ್ಯ ಪರಿಷತ್‌ಗೆ ಕೋಟಿ ಗಟ್ಟಲೆ ಅನುದಾನವನ್ನು ಬಿಡುಗಡೆ ಮಾಡುತ್ತದೆ. ಆದರೆ ಇವುಗಳ ಮಧ್ಯೆ ತಾರತಮ್ಯ ಮಾಡಬಾರದು. ನಾಟಕ ಅಕಾಡೆಮಿಯನ್ನು ಸರಕಾರ ಅಲಕ್ಷ ಮಾಡಬಾರದು ಎಂದರು.

ಈ ಸಂದರ್ಭದಲ್ಲಿ ಪಿ.ಗಂಗಾಧರ ಸ್ವಾಮಿ ಅವರಿಗೆ ಅಕಾಡೆಮಿ ಗೌರವ ಪ್ರಶಸ್ತಿ ಹಾಗೂ 25 ಮಂದಿಗೆ ತಲಾ 25ಸಾವಿರ ರೂ. ನಗದು ಒಳಗೊಂಡ ನಾಟಕ ಅಕಾಡೆಮಿ ವಾರ್ಷಿಕ ಪ್ರಶಸ್ತಿಯನ್ನು ಮತ್ತು ನಾಲ್ವರಿಗೆ ಐದು ಸಾವಿರ ರೂ. ನಗದು ಒಳಗೊಂಡ ದತ್ತಿ ಪುರಸ್ಕಾರವನ್ನು ಪ್ರದಾನ ಮಾಡಲಾಯಿತು. ಸಿರಿಗೇರಿ ಯರಿಸ್ವಾಮಿ ಅವರ ರಂಗ ಸಂಭ್ರಮ ಕೃತಿಗೆ ಪುಸ್ತಕ ಬಹುಮಾನವನ್ನು ನೀಡಲಾಯಿತು.

ಅಧ್ಯಕ್ಷತೆಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿಕಟಪೂರ್ವ ನಿರ್ದೇಶಕ ಎನ್.ಆರ್.ವಿಶುಕುಮನಾರ್ ವಹಿಸಿದ್ದರು. ಅಕಾಡೆಮಿ ಅಧ್ಯಕ್ಷ ಜೆ.ಲೋಕೇಶ್ ಆಶಯ ನುಡಿಗಳನ್ನಾಡಿದರು. ಪದ್ಮ ಕೊಡಗು ಅವರ ಉಡುಪಿ ಜಿಲ್ಲಾ ರಂಗ ಮಾಹಿತಿ, ಬಸವರಾಜ ಬೆಂಗೇರಿ ಅವರ ಅವಿಭಜಿತ ಧಾರವಾಡ ಜಿಲ್ಲಾ ರಂಗ ಮಾಹಿತಿ ಹಾಗೂ ಗಣೇಶ್ ಅಮೀನಗಡ ಅವರ ರಹಿಮಾನವ್ವ ಕಲ್ಮನಿ ಪುಸ್ತಕ ವನ್ನು ಬಿಡುಗಡೆಗೊಳಿಸಲಾಯಿತು.

ಅಕಾಡೆಮಿ ರಿಜಿಸ್ಟ್ರಾರ್ ಡಾ.ಎ.ಸಿ.ಶೈಲಜಾ ಸ್ವಾಗತಿಸಿದರು. ಸದಸ್ಯ ಬಾಸುಮ ಕೊಡಗು ವಂದಿಸಿದರು. ಸದಸ್ಯ ಬೇಲೂರು ರಘುಂದನ್ ಕಾರ್ಯಕ್ರಮ ನಿರೂಪಿಸಿದರು.

ರಂಗ ಮಂದಿರ ಪ್ರಾಧಿಕಾರಕ್ಕೆ ಆಗ್ರಹ

ಇಂದು ರಾಜ್ಯದ ಪ್ರತಿ ತಾಲೂಕಿನಲ್ಲಿ 50ಲಕ್ಷ ರೂ. ವೆಚ್ಚದಲ್ಲಿ 200 ಪ್ರೇಕ್ಷಕರ ಸಾಮರ್ಥ್ಯವುಳ್ಳ ಒಂದು ರಂಗ ಮಂದಿರದ ನಿರ್ಮಿಸುವ ಅಗತ್ಯ ಇದೆ. ಈ ಎಲ್ಲ ರಂಗಮಂದಿರಗಳನ್ನು ನಿಬಾಯಿಸಲು ರಂಗ ಮಂದಿರ ಪ್ರಾಧಿಕಾರವನ್ನು ಸರಕಾರ ಸ್ಥಾಪಿಸಬೇಕು ಎಂದು ಅಕಾಡೆಮಿ ಅಧ್ಯಕ್ಷ ಜೆ.ಲೋಕೇಶ್ ಒತ್ತಾಯಿಸಿ ದರು.

ಅಕಾಡೆಮಿಯ ಸಭೆಯಲ್ಲಿ ತೆಗೆದುಕೊಂಡ ನಿರ್ಣಯವನ್ನು ವಾಚಿಸಿದ ಅವರು, ಶಾಲೆ, ವಸತಿ ಶಾಲೆಗಳಲ್ಲಿ ರಂಗ ಶಿಕ್ಷಕರನ್ನು ನೇಮಕ ಮಾಡಬೇಕು. ಬೆಂಗಳೂರಿನ ಕಲಾಗ್ರಾಮದಲ್ಲಿ ರಂಗಭೂಮಿಯ ಸಂಗ್ರಹಾಲಯವನ್ನು ಸ್ಥಾಪಿಸ ಬೇಕು. ಅಕಾಡೆಮಿಯನ್ನು ಸ್ವಾಯತತ್ತೆ ಸಂಸ್ಥೆಯನ್ನಾಗಿ ರೂಪಿಸಬೇಕು ಎಂದು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News