ಸವಿತಾ ಮಹರ್ಷಿ ಜಯಂತಿ ಆಚರಣೆ
ಮಂಗಳೂರು, ಫೆ.12: ದ.ಕ.ಜಿಲ್ಲಾಡಳಿತ, ದ.ಕ.ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಸವಿತಾ ಸಮಾಜದ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ನಗರದ ಉರ್ವಸ್ಟೋರ್‌ನ ತುಳುಭವನದ ಸಿರಿ ಚಾವಡಿಯಲ್ಲಿ ‘ಸವಿತಾ ಮಹರ್ಷಿ ಜಯಂತಿ ಆಚರಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ದ.ಕ.ಜಿಲ್ಲಾ ಕಸಾಪ ಅಧ್ಯಕ್ಷ ಎಸ್.ಪ್ರದೀಪ್ ಕುಮಾರ್ ಕಲ್ಕೂರಾ ವ್ಯಕ್ತಿಯು ತನ್ನ ಸಾಧನೆಯಿಂದ ಮಾನ್ಯತೆ ಯನ್ನು ಪಡೆಯುತ್ತಾನೆ. ಋಷಿ ಮೂಲದಿಂದ ಬಂದ ಸವಿತಾ ಮಹರ್ಷಿಯು ಸರ್ವಮಾನ್ಯರು. ಅವರು ಎಲ್ಲ ಸಮುದಾಯದ ಜನರು ಒಪ್ಪಿಕೊಳ್ಳು ವಂತಹ ಮಹರ್ಷಿ ಎಂದರು.
ಹಣಕಾಸಿನ ಬಲದಿಂದ ಜೀವನ ಸಾರ್ಥಕ ಪಡೆಯಲು ಸಾಧ್ಯವಿಲ್ಲ. ಬದುಕು ಹಸನಾಗಲು ಜ್ಞಾನಾರ್ಜನೆಯೂ ಮುಖ್ಯ. ಪ್ರಕೃತಿ ಚಿಕಿತ್ಸೆಯ ಮರ್ಮವನ್ನು ಅರಿತ ಸವಿತಾ ಸಮಾಜ ತನ್ನ ವೃತ್ತಿಧರ್ಮವನ್ನು ಮುಂದುವರಿಸಿಕೊಂಡು ಹೋಗುವುದರೊಂದಿಗೆ ಸವಿತಾ ಮಹರ್ಷಿ ಜಯಂತಿ ಮಹತ್ವವನ್ನು ಇತರ ಸಮಾಜದ ಜನರಿಗೂ ತಿಳಿಸಿಕೊಡುವ ಪ್ರಯತ್ನ ಮಾಡಬೇಕು ಎಂದರು.
ಹಿಂದೆ ಹೋಟೆಲ್ ನಡೆಸುವವರ ಬಗ್ಗೆ ತಾತ್ಸಾರದ ಭಾವನೆ ಇತ್ತು. ಇಂದು ಹೋಟೆಲ್ ಉದ್ಯಮ ಬಹಳಷ್ಟು ದೊಡ್ಡದಾಗಿ ಬೆಳೆದು ನಿಂತಿದ್ದು, ಹೋಟೆಲ್ ಮ್ಯಾನೇಜ್‌ಮೆಂಟ್ ಕೋರ್ಸ್ ಕೂಡ ಬಂದಿದೆ. ಹಾಗಾಗಿ ಸವಿತಾ ಸಮಾಜದವರು ತನ್ನ ವೃತ್ತಿಯ ಕುರಿತು ಡಿಗ್ರಿ, ಡಿಪ್ಲಮೋ ಕೋರ್ಸ್‌ಗಳನ್ನು ಸ್ಥಾಪಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಸಬೇಕು ಎಂದು ಪ್ರದೀಪ್ ಕುಮಾರ್ ಕಲ್ಕೂರಾ ನುಡಿದರು.
ಉಪನ್ಯಾಸಕ ಕೃಷ್ಣ ಭಟ್ ಸವಿತಾ ಮಹರ್ಷಿ ಜಯಂತಿಯ ಸಂದೇಶ ನೀಡಿದರು.
ಕಾರ್ಯಕ್ರಮದಲ್ಲಿ ಸವಿತಾ ಸಮಾಜದ ಜಿಲ್ಲಾಧ್ಯಕ್ಷ ಆನಂದ ಭಂಡಾರಿ ಹೊಸಬೆಟ್ಟು, ತುಳು ಅಕಾಡಮಿಯ ರಿಜಿಸ್ಟ್ರಾರ್ ಚಂದ್ರಹಾಸ ಆಳ್ವ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಜಿ. ಉಪಸ್ಥಿತರಿದ್ದರು.