ಪುತ್ತೂರು: 24x7 ಕುಡಿಯುವ ನೀರು ಸರಬರಾಜು ಯೋಜನೆ ಸಾರ್ವಜನಿಕ ಸಮಾಲೋಚನಾ ಸಭೆ

Update: 2019-02-12 17:53 GMT

ಪುತ್ತೂರು, ಫೆ. 12: ನಗರಸಭೆಯಲ್ಲಿನ ಜಲಸಿರಿ ಟ್ರ್ಯಾಂಚ್ 2 ಅಡಿಯಲ್ಲಿ 24x7 ಕುಡಿಯುವ ನೀರು ಸರಬರಾಜು ಯೋಜನೆ ಮತ್ತು ಕಾಮಗಾರಿಗಳ ಬಗ್ಗೆ ಸಾರ್ವಜನಿಕ ಸಮಾಲೋಚನಾ ಸಭೆ ಮಂಗಳವಾರ ಸಂಜೆ ನಗರಸಭಾ ಸಭಾಂಗಣದಲ್ಲಿ ನಡೆಯಿತು.

ಸಭೆಯಲ್ಲಿ ಮಾಹಿತಿ ನೀಡಿದ ಕುಡ್ಸೆಂಪ್‍ನ ಎಂಜಿನಿಯರ್ ಪ್ರವೀಣ್ ರೇಗೊ ಅವರು ಪುತ್ತೂರು ನಗರಸಭೆ ವ್ಯಾಪ್ತಿಯಲ್ಲಿರುವ 9600 ಕುಡಿಯುವ ನೀರು ಸಂಪರ್ಕಗಳಿಗೆ ಮೀಟರ್ ಮರು ಅಳವಡಿಕೆ ಮಾಡಲಾಗುವುದು. ನಗರಸಭಾ ವ್ಯಾಪ್ತಿಯಲ್ಲಿರುವ ಎಲ್ಲಾ ನೀರಿನ ಮೀಟರ್‍ಗಳನ್ನು ಮರು ಅಳವಡಿಸಬೇಕಿದ್ದು,  ಇದರ ವೆಚ್ಚವನ್ನು ಯೋಜನೆಯಿಂದಲೇ ಭರಿಸಲಾಗುವುದು. ಆದಷ್ಟು ನೀರಿನ ದುರುಪಯೋಗ ಹಾಗೂ ಸೋರಿಕೆ ತಡೆಯುವ ಉದ್ದೇಶವಿದೆ. ಯೋಜನೆ ಜಾರಿ ಆಗುವಾಗ ಶೇ. 15ರಷ್ಟು ನೀರಿನ ಸೋರಿಕೆ ಕಡಿಮೆ ಆಗುತ್ತದೆ. ಮುಂದಿನ 8 ವರ್ಷ ಗುತ್ತಿಗೆದಾರರೇ ಯೋಜನೆಯ ನಿರ್ವಹಣೆ ನೋಡಿಕೊಳ್ಳಲಿದ್ದಾರೆ ಎಂದರು.

24x7 ಕುಡಿಯುವ ನೀರಿನ ಯೋಜನೆಗಾಗಿ ಪುತ್ತೂರನ್ನು 8 ವಲಯಗಳಾಗಿ ವಿಭಾಗ ಮಾಡಲಾಗಿದೆ. 6 ಕಡೆಗಳಲ್ಲಿ ಓವರ್‍ಟ್ಯಾಂಕ್ ನಿರ್ಮಾಣ, 2 ಜಲ ಸಂಗ್ರಹಣಾಗಾರ ಘಟಕಗಳ ನಿರ್ಮಾಣ ಆಗಲಿದೆ ಎಂದ ಅವರು 63.11 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಆಗಲಿರುವ 24x7 ಜಲಸಿರಿ ಯೋಜನೆಗೆ 30 ಕೋಟಿ ರೂ. ನಿರ್ವಹಣಾ ವೆಚ್ಚವಾಗಲಿದೆ, ಇದಕ್ಕಾಗಿ ಈಗಾಗಲೇ ಟೆಂಡರ್ ನಡೆದಿದ್ದು, ಗುತ್ತಿಗೆ ಪಡೆದುಕೊಂಡವರು ಸರ್ವೆ ಕೆಲಸ ಶುರು ಮಾಡಿದ್ದಾರೆ. 3 ತಿಂಗಳಲ್ಲಿ ಯೋಜನೆ ರೂಪು ಪಡೆಯಲಿದ್ದು, ಬಳಿಕ ಕಾಮಗಾರಿ ಆರಂಭವಾಗಲಿದೆ ಎಂದು ಮಾಹಿತಿ ನೀಡಿದರು.

ನೀರಿನ ದುರುಪಯೋಗ ಆಗದಂತೆ ಕ್ರಮ ಕೈಗೊಳ್ಳಲು ಈಗಾಗಲೇ ನಿರ್ದೇಶನ ನೀಡಲಾಗಿದೆ. ಒಂದು ವೇಳೆ ಮೀಟರನ್ನು ಬೈಪಾಸ್ ಮಾಡಿ, ನೀರು ಪಡೆದುಕೊಂಡರೆ ಅವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು. ಇದರ ಬಗ್ಗೆ ನಗರ ಸಕ್ರಮ ಕೈಗೊಳ್ಳಲಿದೆ ಎಂದು ಪ್ರವೀಣ್ ರೇಗೊ ತಿಳಿಸಿದರು.

ಸಭೆಯಲ್ಲಿ ನಗರಸಭಾ ಪೌರಾಯುಕ್ತೆ ರೂಪಾ ಶೆಟ್ಟಿ, ಸದಸ್ಯರಾದ ಬಾಲಚಂದ್ರ, ವಿದ್ಯಾಗೌರಿ, ಮಮತಾ ರಂಜನ್, ಪೂರ್ಣಿಮಾ, ರೋಹಿಣಿ, ಶಶಿಕಲಾ, ಇಂದಿರಾ ಪುರುಷೋತ್ತಮ ಆಚಾರ್ಯ, ನವೀನ್, ಶೀನಪ್ಪ ನಾಯ್ಕ್, ಸಂಜೀವ ಪೂಜಾರಿ ಉಪಸ್ಥಿತರಿದ್ದರು. ಕುಡ್ಸೆಂಪ್‍ನ ಸಾಮಾಜಿಕ ಅಭಿವೃದ್ಧಿ ಅಧಿಕಾರಿ ಸಂಜೀವ ಪೂಜಾರಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News