ಅಂಗವಿಕಲ ಯುವಕನಿಗೆ ತಂಡದಿಂದ ಹಲ್ಲೆ: ದೂರು

Update: 2019-02-12 17:59 GMT

ಪುತ್ತೂರು, ಫೆ. 12: ಪಾನಮತ್ತರಾಗಿ ಇಬ್ಬರು ಹೊಡೆದಾಡುತ್ತಿದ್ದ ದೃಶ್ಯವನ್ನು ಮೊಬೈಲ್ ಮೂಲಕ ಚಿತ್ರೀಕರಣ ಮಾಡುತ್ತಿರುವ ಆರೋಪದಲ್ಲಿ ವಿಕಲಚೇತನ ಯುವಕನೊಬ್ಬನಿಗೆ ತಂಡವೊಂದು ಹಲ್ಲೆ ನಡೆಸಿದ ಘಟನೆ ನೆಟ್ಟಣಿಗೆ ಮುಡ್ನೂರು ಗ್ರಾಮದ ಗಾಳಿಮುಖ ಎಂಬಲ್ಲಿ ಸೋಮವಾರ ನಡೆದಿದೆ. ಘಟನೆಗೆ ಸಂಬಂಧಿಸಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಕಾಸರಗೋಡು ಜಿಲ್ಲೆಯ ದೇಲಂಪಾಡಿ ಗ್ರಾಮದ ಅಡೂರು ನಿವಾಸಿ ಕೃಷ್ಣಾಜಿ ರಾವ್ ಅವರ ಪುತ್ರ ಚಿತ್ರಕುಮಾರ್(35) ಹಲ್ಲೆಗೊಳಗಾದ ಯುವಕ. ಹಲ್ಲೆಗೊಳಗಾದ ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ.

ತಾನು ಗಾಳಿಮುಖದಲ್ಲಿ ಮೊಬೈಲ್ ಅನ್ನು ಕೈಯಲ್ಲಿ ಹಿಡಿದುಕೊಂಡು ನಿಂತಿದ್ದ ವೇಳೆ ಅಲ್ಲಿ ಇಬ್ಬರು ಪಾನಮತ್ತರಾಗಿ ಪರಸ್ಪರ ಹೊಡೆದಾಡಿಕೊಳ್ಳುತ್ತಿದ್ದರು. ಅದೇ ವೇಳೆ ಅಶ್ರಫ್ ಎಂಬಾತ ಸೇರಿದಂತೆ ಸುಮಾರು 20 ಮಂದಿಯಷ್ಟು ಇದ್ದ ತಂಡವೊಂದು ತನ್ನ ಬಳಿಗೆ ಬಂದು, ನೀನು ವಿಡಿಯೋ ಚಿತ್ರೀಕರಣ ಮಾಡಿರುವುದು ಯಾಕೆ ಎಂದು ಪ್ರಶ್ನಿಸಿ ಹಲ್ಲೆ ನಡೆಸಿದ್ದಾರೆ ಎಂದು ಚಿತ್ರಕುಮಾರ್ ಅವರು ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.  

ಪ್ರಕರಣ ದಾಖಲಿಸಿಕೊಂಡಿರುವ ಸಂಪ್ಯ ಪೊಲೀಸರು ಆರೋಪಿಗಳಾದ ಪುತ್ತೂರು ತಾಲ್ಲೂಕಿನ ನೆಟ್ಟಣಿಗೆ ಮುಡ್ನೂರು ಗ್ರಾಮದ ಕರ್ನೂರು ನಿವಾಸಿಗಳಾದ ಅಶ್ರಫ್ ಮತ್ತು ಮಹಮ್ಮದ್ ಅಶ್ರಫ್ ಎಂಬವರನ್ನು ಬಂಧಿಸಿ ಮಂಗಳವಾರ ಸಂಜೆ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News