ಎಸ್ಸೆಸ್ಸೆಫ್ ಭಾರತ ಯಾತ್ರೆ 'ಹಿಂದ್ ಸಫರ್' ಸಮಾಪ್ತಿ

Update: 2019-02-12 18:22 GMT

ಕಲ್ಲಿಕೋಟೆ, ಫೆ. 12: ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ ರಾಷ್ಟ್ರೀಯ ಸಮಿತಿ ಹಮ್ಮಿಕೊಂಡಿದ್ದ ನಾಲ್ಕು ವಾರಗಳ ಭಾರತ ಯಾತ್ರೆ 'ಹಿಂದ್ ಸಫರ್'ಗೆ  ಕಲ್ಲಿಕೋಟೆಯ ಕಡಲ ಕಿನಾರೆಯಲ್ಲಿ ಭವ್ಯ ಸಮಾಪ್ತಿ ನೀಡಲಾಯಿತು.

ಜ.11 ರಂದು ಕಾಶ್ಮೀರದ ಶ್ರೀ ನಗರದಲ್ಲಿರುವ ಐತಿಹಾಸಿಕ ಹಝ್ರತ್ ಬಾಲ್ ಮಸ್ಜಿದ್ ನಿಂದ ಆರಂಭಗೊಂಡಿದ್ದ ಭಾರತ ಯಾತ್ರೆಯು 28 ದಿನಗಳಲ್ಲಿ ದೆಹಲಿ, ಪಂಜಾಬ್, ಗುಜರಾತ್, ಉತ್ತರ ಪ್ರದೇಶ, ಬಿಹಾರ, ಒರಿಸ್ಸಾ, ಈಶಾನ್ಯ ರಾಜ್ಯಗಳು, ದಕ್ಷಿಣ ರಾಜ್ಯಗಳು ಸೇರಿದಂತೆ 23 ರಾಜ್ಯಗಳಲ್ಲಿ 14,000 ಕಿ.ಮೀ ಗಿಂತಲೂ ಹೆಚ್ಚಿನ ಪರ್ಯಟನೆ ನಡೆಸಿ ಕೇರಳ ತಲುಪಿತ್ತು.

ಫೆ. 23, 24ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆಯಲಿರುವ ಎಸ್ಸೆಸ್ಸೆಫ್ ರಾಷ್ಟ್ರೀಯ ಸಮ್ಮೇಳನದ ಪ್ರಚಾರಾರ್ಥ 'ಸಾಕ್ಷರತೆ ಮತ್ತು ಸಹಿಷ್ಣುತೆಯ ಭಾರತಕ್ಕಾಗಿ' ಎಂಬ ಧ್ಯೇಯ ವಾಕ್ಯದೊಂದಿಗೆ ಸಂಘಟನೆಯ ರಾಷ್ಟ್ರೀಯ ನಾಯಕರು 'ಹಿಂದ್ ಸಫರ್' ಯಾತ್ರೆ ಕೈಗೊಂಡಿದ್ದರು.

ಶ್ರೀ ನಗರ ವಕ್ಫ್ ಬೋರ್ಡ್ ಅಧ್ಯಕ್ಷ ಡಾ. ಕಮಾಲ್ ಫಾರೂಖಿ, ದೆಹಲಿಯ ಮಾಜಿ ಸಚಿವ ಮತೀನ್ ಚೌಧರಿ ಸಿಲಂಬೂಲ್, ಅಖಿಲ ಭಾರತ ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ಅಧ್ಯಕ್ಷ ಸಯ್ಯಿದ್ ಮೆಹ್ದಿ ಮಿಯಾ ಅಜ್ಮೀರ್, ಉತ್ತರ ಪ್ರದೇಶದ ಹಿಂದೂ ಧರ್ಮ ಪ್ರಚಾರಕ ಶ್ರೀ ಸಾರಂಗ್ ಸ್ವಾಮೀಜಿ, ತೆಲಂಗಾಣ ಶಾಸಕ ಸೈಯದ್ ಅಹ್ಮದ್ ಪಾಶಾ ಖಾದ್ರಿ ಹೈದರಾಬಾದ್, ಶಾಸಕ ರೋಶನ್ ಬೇಗ್ ಬೆಂಗಳೂರು, ಶ್ರೀ ಸತ್ಯ ವ್ರತಾನಂದ ಮಹಾ ರಾಜ ಸ್ವಾಮಿ ಮೈಸೂರು, ಉಳ್ಳಾಲ ಖಾಝಿ ಸೈಯದ್ ಕೂರತ್ ತಂಙಳ್ ಮೊದಲಾದವರು ಯಾತ್ರೆಯನ್ನು ವಿವಿಧ ಕೇಂದ್ರಗಳಲ್ಲಿ ಸ್ವಾಗತಿಸಿ, ಅಭಿನಂದಿಸಿದರು. ಕರ್ನಾಟಕದ ಹುಬ್ಬಳ್ಳಿ, ಬೆಂಗಳೂರು, ಪುತ್ತೂರು, ಮಡಿಕೇರಿ ಮತ್ತು ಮೈಸೂರುಗಳಲ್ಲಿ ಸ್ವಾಗತ ಸಮಾರಂಭ ಏರ್ಪಡಿಸಲಾಗಿತ್ತು.

ಕಲ್ಲಿಕೋಟೆ ಕಡಲ ಕಿನಾರೆಯಲ್ಲಿ ಭಾರೀ ಸಂಖ್ಯೆಯಲ್ಲಿ ಜಮಾಯಿಸಿದ್ದ ಕಾರ್ಯಕರ್ತರ ಬೃಹತ್ ಜಾಥಾದೊಂದಿಗೆ ಯಾತ್ರೆಯನ್ನು ಸಮಾಪ್ತಿಗೊಳಿಸಲಾ ಯಿತು. ಸುನ್ನೀ ಉಲಮಾ ಒಕ್ಕೂಟದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸುಲ್ತಾನುಲ್ ಉಲಮಾ ಎ.ಪಿ ಅಬೂಬಕರ್ ಮುಸ್ಲಿಯಾರ್ ಉದ್ಘಾಟಿಸಿ, ಸುನ್ನೀ ‌ನಾಯಕತ್ವವು ಕಳೆದ ಎರಡು ದಶಕಗಳಿಂದ ರಾಷ್ಟ್ರಮಟ್ಟದಲ್ಲಿ ನಡೆಸುತ್ತಿರುವ ಶೈಕ್ಷಣಿಕ ಚಳವಳಿಗೆ 'ಹಿಂದ್ ಸಫರ್'ನೊಂದಿಗೆ ನವಚೈತನ್ಯ ಮೂಡಲಿದೆ ಎಂದು ಹೇಳಿದರು.

ಸಮರ್ಪಕವಾದ ಶಿಕ್ಷಣ, ಸರ್ವರಿಗೂ ಉದ್ಯೋಗ ಮತ್ತು ಸರ್ವರಲ್ಲೂ ಸೌಹಾರ್ದತೆ ಇವು ಮೂರು ಇಂದಿನ ಭಾರತದ ಪ್ರಮುಖ ಅಗತ್ಯಗಳು. ಈ ನಿಟ್ಟಿನಲ್ಲಿ ಸರ್ಕಾರಗಳು ಹಾಗೂ ಸಾಮಾಜಿಕ ಸಂಘ ಸಂಸ್ಥೆಗಳು ಸಮಗ್ರ ಕಾರ್ಯಯೋಜನೆಯೊಂದಿಗೆ ಕರ್ಮ ರಂಗಕ್ಕಿಳಿಯಬೇಕು ಎಂದು ಅವರು ಕರೆ ನೀಡಿದರು.

'ಸಮಸ್ತ' ಉಲಮಾ ಒಕ್ಕೂಟದ ಕೇಂದ್ರೀಯ ಉಪಾಧ್ಯಕ್ಷ ಸೈಯದ್ ಅಲೀ ಬಾಫಖೀ ತಂಙಳ್ ಆಶೀರ್ವಚನ ನೀಡಿದರು. ಕೇರಳ ಮುಸ್ಲಿಂ ಜಮಾಅತ್ ಅಧ್ಯಕ್ಷ ಬದ್ರುಸ್ಸಾದಾತ್ ಸೈಯದ್ ಖಲೀಲುಲ್ ಬುಖಾರಿ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ವಿದ್ವಾಂಸ  ಪೊನ್ಮಳ ಅಬ್ದುಲ್ ಖಾದಿರ್ ಮುಸ್ಲಿಯಾರ್ ಮುಖ್ಯ ಭಾಷಣ ಮಾಡಿದರು.

ಎಸ್ಸೆಸ್ಸಫ್ ರಾಷ್ಟ್ರಾಧ್ಯಕ್ಷ  ಶೌಖತ್ ನಯೀಮಿ ಕಾಶ್ಮೀರ್, ಪ್ರಧಾನ ಕಾರ್ಯದರ್ಶಿ ಕೆ.ಎಂ ಅಬೂಬಕರ್ ಸಿದ್ಧೀಕ್ ಮೊಂಟುಗೋಳಿ, ಕೋಶಾಧಿಕಾರಿ ಝುಹೈರುದ್ದೀನ್ ನೂರಾನಿ ಪಶ್ಚಿಮ ಬಂಗಾಳ, ಉಪಾಧ್ಯಕ್ಷರಾದ ಡಾ.ಫಾರೂಕ್ ನಯೀಮಿ ಕೊಲ್ಲಂ, ಸಾಲಿಕ್ ಅಹ್ಮದ್ ಲತೀಫಿ ಅಸ್ಸಾಂ, ನೌಶಾದ್ ಆಲಂ ಮಿಸ್ಬಾಹಿ ಒರಿಸ್ಸಾ, ಆಲೀಘರ್ ವಿ.ವಿ ವಿದ್ಯಾರ್ಥಿ ಸೈಯದ್ ಸಾಜಿದ್ ಅಲೀ ಕಾಶ್ಮೀರ್, ಕರ್ನಾಟಕ ರಾಜ್ಯಾಧ್ಯಕ್ಷ ಸೈಯದ್ ಉಮರ್ ಅಸ್ಸಖಾಫ್, ಗುಜರಾತ್ ರಾಜ್ಯಾಧ್ಯಕ್ಷ ಅಕ್ರಂ ಅಬ್ದುಲ್ ಘನಿ, ಮಣಿಪುರ ರಾಜ್ಯಾಧ್ಯಕ್ಷ ಸಲ್ಮಾನ್ ಖುರ್ಷಿದ್, ತಮಿಳ್ನಾಡು ರಾಜ್ಯಾಧ್ಯಕ್ಷ ಕಮಾಲುದ್ದೀನ್ ಸಖಾಫಿ ಕನ್ಯಾಕುಮಾರಿ, ಕೇರಳ ರಾಜ್ಯಾಧ್ಯಕ್ಷ ರಾಶಿದ್ ಬುಖಾರಿ, ಕೇರಳ ಎಸ್ ವೈ ಎಸ್ ರಾಜ್ಯಾಧ್ಯಕ್ಷ ಸೈಯದ್ ತ್ವಾಹ ತಂಙಳ್, ಉಪಾಧ್ಯಕ್ಷರಾದ ಸೈಯದ್ ತುರಾಬ್ ತಂಙಳ್, ಡಾ‌. ಎ.ಪಿ ಹಕೀಂ ಅಝ್ಹರಿ ಮೊದಲಾದವರು ಮಾತನಾಡಿದರು.

ಪ್ರಮುಖರಾದ ಅಬೂ ಹನೀಫಲ್ ಫೈಝಿ, ವಿಪಿಎಂ ಫೈಝಿ ವಿಲ್ಯಾಪಳ್ಳಿ, ಎನ್. ಅಲೀ ಅಬ್ದುಲ್ಲ, ಅಪೋಲೊ ಮೂಸ ಹಾಜಿ, ಶಾಹುಲ್ ಹಮೀದ್ ಬಾಖವಿ ಶಾಂತಪುರಂ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News