×
Ad

ಫೆ. 15ರಂದು ಆದಿವಾಸಿಗಳಿಗೆ ಮೂಲ ಸೌಕರ್ಯಕ್ಕೆ ಒತ್ತಾಯಿಸಿ ದ.ಕ. ಜಿಲ್ಲಾಧಿಕಾರಿ ಚಲೋ

Update: 2019-02-13 18:48 IST

ಮಂಗಳೂರು, ಫೆ.13: ಬೆಳ್ತಂಗಡಿ ತಾಲೂಕಿನ ಬಾಂಜಾರು ಮಲೆ ಕುಡಿಯ ಕಾಲನಿಯ ಜಮೀನಿನ ಸಮಸ್ಯೆಗಳನ್ನು ಶೀಘ್ರವಾಗಿ ಇತ್ಯರ್ಥಪಡಿಸಬೇಕು. ಕುದುರೆಮುಖ ರಾಷ್ಟ್ರೀಯ ಉದ್ಯಾನವನದಲ್ಲಿ ವಾಸಿಸುವ ಆದಿವಾಸಿಗಳಿಗೆ ಮೂಲ ಸೌಕರ್ಯ ಕಲ್ಪಿಸಬೇಕು ಎಂದು ಜಿಲ್ಲಾಡಳಿತವನ್ನು ಒತ್ತಾಯಿಸಿರುವ ಆದಿವಾಸಿ ಸಂಘಟನೆಗಲು ಫೆ.15ರಂದು ಜಿಲ್ಲಾಧಿಕಾರಿ ಕಚೇರಿ ಚಲೋ ಕಾರ್ಯಕ್ರಮ ಹಮ್ಮಿಕೊಂಡಿವೆ.

ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಬೆಳ್ತಂಗಡಿ, ಜಿಲ್ಲಾ ಮಲೆಕುಡಿಯ ಸಂಘ, ತಾಲೂಕು ಯುವ ಮರಾಠಿ ಸೇವಾ ಸಂಘ, ತಾಲೂಕು ಮಲೆಕುಡಿಯ ಸಂಘ, ಮಲೆಕುಡಿಯ ಯುವ ವೇದಿಕೆ ಇವುಗಳ ಜಂಟಿ ಆಶ್ರದಲ್ಲಿ ಹೋರಾಟ ಸಂಘಟಿಸಲಾಗಿದೆ ನ್ಯಾಯ ಸಿಗುವವರೆಗೆ ಹೋರಾಟ ನಡೆಸಲಾಗುವುದು ಎಂದು ಬೆಳ್ತಂಗಡಿ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಸಂಚಾಲಯಕ ಶೇಖರ ಲಾಯಿಲ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮಲೆಕುಡಿಯ ಸಮುದಾಯ ಸತತವಾಗಿ ಸಮಸ್ಯೆಗಳನ್ನು ಎದುರಿಸುತ್ತಲೇ ಬಂದಿವೆ. ಇಲ್ಲಿನ ಮಲೆಕುಡಿಯ, ಮರಾಠಿ ನಾಯ್ಕ, ಕೊರಗ ಕುಟುಂಬಗಳು ವಾಸಿಸುವ ಕಾಲನಿಗಳಿಗೆ ರಸ್ತೆ, ವಿದ್ಯುತ್ ಸಂಪರ್ಕ ಒದಗಿಸಬೇಕು.ಆದಿವಾಸಿ ಕುಟುಂಬಗಳಿಗೆ ಜಮೀನಿನ ಹಕ್ಕು ಪತ್ರ ನೀಡಬೇಕು. ನೆರಿಯ ಸುಂದರ ಮಲೆಕುಡಿಯ ಪ್ರಕರಣದಲ್ಲಿ ಪರಿಶಿಷ್ಟ ಜಾತಿ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆ 1989ನ್ನು ಸೇರ್ಪಡೆಗೊಳಿಸಬೇಕು ಎಂದವರು ಆಗ್ರಹಿಸಿದರು.

ಮೂಲವಾಸಿ ಆದಿವಾಸಿಗಳು ಇಂದು ಹಲವಾರು ಗಂಭೀರ ಸ್ವರೂಪದ ಸಮಸ್ಯೆಗಳ ಸುಳಿಯಲ್ಲಿ ಬದುಕುತ್ತಿದ್ದಾರೆ. ಸ್ವಾತಂತ್ರ್ಯ ದೊರೆತು 72 ವರ್ಷಗಳು ಕಳೆದರೂ ಇಂದಿಗೂ ಹಲವಾರು ಕುಟುಂಬಗಳು ರಸ್ತೆ, ವಿದ್ಯುತ್ ಮೊದಲಾದ ಮೂಲ ಸೌಕರ್ಯಗಳಿಂದ ವಂಚಿತವಾಗಿವೆ. ನೆರಿಯ ಗ್ರಾಮದ ಬಾಂಜಾರು ಮಲೆಕುಡಿಯ ನಿವಾಸಿಗಳ ಜಮೀನಿನ ಮೇಲೆ ರಾಜ್ಯ ಹೈಕೋರ್ಟ್‌ನಲ್ಲಿ ಕೇಸು ದಾಖಲಿಸಲಾಗಿದ್ದುಘಿ, ಆದಿವಾಸಿಗಳ ಜಮೀನನ್ನು ವಶಪಡಿಸಿಕೊಂಡು ಅವರನ್ನು ಬೀದಿಪಾಲು ಮಾಡುವ ಹುನ್ನಾರ ನಡೆಯುತ್ತಿದೆ ಎಂದವರು ಆಕ್ರೋಶ ವ್ಯಕ್ತಪಡಿಸಿದರು.

ಆದಿವಾಸಿಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ಹಲವಾರು ಕಾರ್ಯಕ್ರಮಗಳಿದ್ದರೂ ಆದಿವಾಸಿಗಳ ಪಾಲಿಗೆ ಯಾವುದೂ ಇಲ್ಲವಾಗಿದೆ. ಬಜೆಟ್‌ನಲ್ಲಿ ಹಣ ಮೀಸಲಿಟ್ಟರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಅರಣ್ಯ ಹಕ್ಕು ಕಾಯ್ದೆ ಜಾರಿಯಾಗಿ 12 ವರ್ಷಗಳು ಕಳೆದರೂ ಅಧಿಕಾರಿಗಳ ನಿರ್ಲಕ್ಷ್ಯತೆಯಿಂದ ಇನ್ನೂ ಅನುಷ್ಠಾನಗೊಂಡಿಲ್ಲ. ಅರಣ್ಯ ಪ್ರದೇಶದಲ್ಲಿ ತಮಗೆ ಬೇಕಾದಂತೆ ರಸ್ತೆ ಮಾಡುವ ಅರಣ್ಯಾಧಿಕಾರಿಗಳು ಮಲೆಕುಡಿಯ ಸಮುದಾಯ ವಾಸಿಸುವ ಪ್ರದೇಶದಲ್ಲಿ ರಸ್ತೆ ನಿರ್ಮಾಣ ಮಾಡಲು ಹೊರಟರೆ ಅದಕ್ಕೆ ಅರಣ್ಯ ಕಾಯ್ದೆಯ ನೆಪವೊಡ್ಡಿ ಅಡ್ಡಗಾಲು ಹಾಕುತ್ತಿದ್ದಾರೆ. ಈ ಎಲ್ಲಾ ಸಮಸ್ಯೆಗಳು ಕೊನೆಗೊಂಡು ಮಲೆಕುಡಿಯ ಸಮುದಾಯ ನೆಮ್ಮದಿಯ ಬದುಕು ಸಾಗಿಸುವಂತಾಗಬೇಕು ಎಂಬ ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಚಲೋ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದು ಶೇಖರ ಲಾಯಿಲ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಮಿತಿಯ ಅಧ್ಯಕ್ಷ ವಸಂತ ನಡ, ಕಾರ್ಯದರ್ಶಿ ಜಯಾನಂದ ಪಿಲಿಕಲ, ಕೋಶಾಧಿಕಾರಿ ನಾಗೇಶ್ ಬಾಂಜಾರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News