2ನೆ ಮದುವೆಯಾದ ಬಿಜೆಪಿ ಶಾಸಕನಿಗೆ ತಾಯಿ, ಮೊದಲನೆ ಪತ್ನಿಯಿಂದ ಥಳಿತ

Update: 2019-02-13 14:13 GMT

ಯವತ್ಮಲ್, ಫೆ.13: ಅರ್ನಿ ಕ್ಷೇತ್ರದ ಬಿಜೆಪಿ ಶಾಸಕ ರಾಜು ನಾರಾಯಣ್ ತೊಡ್ಸಮ್ ಮತ್ತವರ ಎರಡನೇ ಪತ್ನಿ ಪ್ರಿಯಾ ಶಿಂಧೆ-ತೊಡ್ಸಮ್ ರಿಗೆ ಶಾಸಕರ ಮೊದಲನೇ ಪತ್ನಿ ಅರ್ಚನಾ ಮತ್ತು ಶಾಸಕರ ತಾಯಿ ನಡು ರಸ್ತೆಯಲ್ಲಿಯೇ ಥಳಿಸಿದ ಘಟನೆ ಮಂಗಳವಾರ ಸಂಜೆ ವರದಿಯಾಗಿದೆ.

ಕ್ರೀಡಾ ಪಂದ್ಯಾಟವನ್ನು ಉದ್ಘಾಟಿಸಿ ತಮ್ಮ ಎರಡನೇ ಪತ್ನಿಯೊಂದಿಗೆ ಶಾಸಕ ವಾಪಸಾಗುತ್ತಿದ್ದಾಗ ಈ ಘಟನೆ ನಡೆದಿದೆ. ಈ ಸಂದರ್ಭ ಶಾಸಕರ ಎರಡನೇ ಪತ್ನಿ ಮತ್ತು ಪಕ್ಷದ ಬೆಂಬಲಿಗರು ಅವರ 42ನೆ ಹುಟ್ಟು ಹಬ್ಬವನ್ನು ಆಚರಿಸುತ್ತಿದ್ದಂತೆಯೇ ಅರ್ಚನಾ  ಮತ್ತು ಶಾಸಕರ ತಾಯಿ ಅಲ್ಲಿಗೆ ಧಾವಿಸಿ ಎರಡನೇ ಪತ್ನಿಯನ್ನು ತರಾಟೆಗೆ ತೆಗೆದುಕೊಂಡರು.

 ಇಬ್ಬರೂ ಆಕೆಯ ಕಪಾಳಕ್ಕೆ ಬಿಗಿದು ಆಕೆಯನ್ನು ಚೆನ್ನಾಗಿ ಥಳಿಸಲಾರಂಭಿಸಿದ್ದರು. ಆಕೆಯ ರಕ್ಷಣೆಗೆ ಶಾಸಕ ಧಾವಿಸಿದಾಗ ಅವರ ಮೇಲೂ ಹಲ್ಲೆ ನಡೆಯಿತು. ಸ್ಥಳದಲ್ಲಿದ್ದವರೊಬ್ಬರು ಘಟನೆಯ ವೀಡಿಯೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದು ಅದು ವೈರಲ್ ಆಗಿದೆ. ಶಾಸಕನ ಮೊದಲ ಪತ್ನಿ ಆದಿವಾಸಿಗಳ ಶಾಲೆಯ ಶಿಕ್ಷಿಕಿಯಾಗಿದ್ದಾರೆ.

ತಮ್ಮ ಮೊದಲ ಪತ್ನಿ ಮತ್ತಾಕೆಯ ಎರಡು ಮಕ್ಕಳಿಗೆ ಶಾಸಕ ನ್ಯಾಯ ಒದಗಿಸದೇ ಇದ್ದರೆ ಶನಿವಾರ ಪ್ರಧಾನಿಯ ಕಾರ್ಯಕ್ರಮದಲ್ಲಿ ವೇದಿಕೆಯೇರಲು ಅನುಮತಿಸಬಾರದು ಎಂದು ಬಿಜೆಪಿಯ ವಿದರ್ಭ ಆದಿವಾಸಿ ಘಟಕದ  ಮುಖ್ಯಸ್ಥ ಅಂಕಿತ್ ಮೈತಮ್ ಹೇಳಿದ್ದಾರೆ.

ಹಲ್ಲೆಯಲ್ಲಿ ಮುಖಕ್ಕೆ ಗಾಯಗಳುಂಟಾಗಿರುವುದರಿಂದ ಪ್ರಿಯಾರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಎರಡೂ ಕಡೆಗಳು ಪರಸ್ಪರ ಮಾತುಕತೆಗಳ ಮೂಲಕ ವಿವಾದ  ಬಗೆಹರಿಸಲು ನಿರ್ಧರಿಸಿರುವುದರಿಂದ ಯಾವುದೇ ದೂರು ದಾಖಲಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News