ಸುಳ್ಳು, ಆಟಾಟೋಪ, ಬೆದರಿಕೆ ಮೋದಿ ಸರಕಾರದ ಸಿದ್ಧಾಂತ: ಸೋನಿಯಾ

Update: 2019-02-13 14:24 GMT

ಹೊಸದಿಲ್ಲಿ,ಫೆ.13: ಸುಳ್ಳು,ಆಟಾಟೋಪ ಮತ್ತು ಬೆದರಿಕೆ ಇವು ಮೋದಿ ಸರಕಾರದ ಸಿದ್ಧಾಂತವಾಗಿವೆ ಎಂದು ಬುಧವಾರ ಇಲ್ಲಿ ಆರೋಪಿಸಿದ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು,ಎದುರಾಳಿಗಳನ್ನು ಸಮರ್ಥವಾಗಿ ಎದುರಿಸುತ್ತಿರುವುದಕ್ಕಾಗಿ ಪುತ್ರ ಹಾಗೂ ಪಕ್ಷಾಧ್ಯಕ್ಷ ರಾಹುಲ್ ಗಾಂಧಿಯವರನ್ನು ಪ್ರಶಂಸಿಸಿದರು.

ಕಾಂಗ್ರೆಸ್ ಸಂಸದೀಯ ಪಕ್ಷದ ಸಾಮಾನ್ಯ ಸಭೆಯನ್ನುದೇಶಿಸಿ ಮಾತನಾಡುತ್ತಿದ್ದ ಅವರು,ಪಕ್ಷಕ್ಕೆ ಹೊಸ ಶಕ್ತಿಯನ್ನು ನೀಡುತ್ತಿರುವುದಕ್ಕಾಗಿ ಹಾಗೂ ಅನುಭವ ಮತ್ತು ಯೌವನಗಳ ಮಿಶ್ರಣವಾಗಿರುವ ತಂಡವನ್ನು ರೂಪಿಸುತ್ತಿರುವದಕ್ಕಾಗಿಯೂ ರಾಹುಲ್ ರನ್ನು ಹೊಗಳಿದರು.

ಕೇಂದ್ರದ ವಿರುದ್ಧ ತೀವ್ರದಾಳಿಯನ್ನು ನಡೆಸಿದ ಅವರು,ದೇಶಾದ್ಯಂತ ಭೀತಿ ಮತ್ತು ದ್ವೇಷದ ವಾತಾವರಣವಿದೆ ಎಂದು ಆರೋಪಿಸಿದರು.

ಹೊಸ ಆತ್ಮವಿಶ್ವಾಸ ಮತ್ತು ದೃಢನಿರ್ಧಾರದೊಂದಿಗೆ ನಾವು ಮುಂಬರುವ ಲೋಕಸಭಾ ಚುನಾವಣೆಗೆ ಸಜ್ಜಾಗುತ್ತಿದ್ದೇವೆ. ರಾಜಸ್ಥಾನ,ಛತ್ತೀಸ್‌ಗಡ ಮತ್ತು ಮಧ್ಯಪ್ರದೇಶಗಳಲ್ಲಿ ನಮ್ಮ ಗೆಲುವುಗಳು ನಮಗೆ ಹೊಸ ಆಶಯವನ್ನು ನೀಡಿವೆ. ನಮ್ಮ ಪ್ರತಿಸ್ಪರ್ಧಿಗಳನ್ನು ಈ ಹಿಂದೆ ಅಜೇಯರು ಎಂದು ಬಿಂಬಿಸಲಾಗುತ್ತಿತ್ತು. ರಾಹುಲ್ ಅವರಿಗೆ ನೇರ ಮುಖಾಮುಖಿಯಾಗಿ ಸವಾಲು ಒಡ್ಡಿದ್ದಾರೆ. ನಮ್ಮ ಲಕ್ಷಾಂತರ ಕಾರ್ಯಕರ್ತರನ್ನು ಕ್ರೋಢೀಕರಿಸಿ ಅವರನ್ನು ಪ್ರೇರೇಪಿಸಿದ್ದಾರೆ,ಹೋರಾಟಕ್ಕೆ ಸಜ್ಜುಗೊಳಿಸಿದ್ದಾರೆ. ನಮ್ಮ ಪ್ರತಿಸ್ಪರ್ಧಿಗಳ ಭದ್ರಕೋಟೆ ಎನ್ನಲಾಗಿದ್ದ ಸ್ಥಳಗಳಲ್ಲೇ ನಾವು ಗೆದ್ದಿದ್ದೇವೆ ಎಂದರು.

ಮೋದಿ ಆಡಳಿತವನ್ನು ತರಾಟೆಗೆತ್ತಿಕೊಂಡ ಅವರು, ನಮ್ಮ ಪ್ರಜಾಸತ್ತಾತ್ಮಕ ಮತ್ತು ಜಾತ್ಯತೀತ ಗಣರಾಜ್ಯದ ಬುನಾದಿಗಳು ಸರಕಾರದಿಂದ ವ್ಯವಸ್ಥಿತ ದಾಳಿಗೊಳಗಾಗಿವೆ. ಸಂವಿಧಾನದ ಮೇಲೆ ನಿರಂತರ ದಾಳಿಗಳು ನಡೆಯುತ್ತಿವೆ. ಸಾಂವಿಧಾನಿಕ ಸಂಸ್ಥೆಗಳನ್ನು ಬುಡಮೇಲುಗೊಳಿಸಲಾಗಿದೆ. ರಾಜಕೀಯ ವಿರೋಧಿಗಳನ್ನು ಬೇಟೆಯಾಡಲಾಗುತ್ತಿದೆ. ಭಿನ್ನಾಭಿಪ್ರಾಯಗಳ ಧ್ವನಿಯುಡುಗಿಸಲಾಗುತ್ತಿದೆ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮೊಟಕುಗೊಳಿಸಲಾಗಿದೆ ಮತ್ತು ಅದನ್ನು ದಮನಿಸಲಾಗಿದೆ ಎಂದರು.

ಕಳೆದ ಐದು ವರ್ಷಗಳು ದೇಶದ ಪಾಲಿಗೆ ಅನಿರೀಕ್ಷಿತ ಆರ್ಥಿಕ ಬಿಕ್ಕಟ್ಟು ಮತ್ತು ಸಾಮಾಜಿಕ ಉದ್ವಿಗ್ನತೆಯ ಅವಧಿಯಾಗಿತ್ತು ಎಂದು ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕಿಯೂ ಆಗಿರುವ ಸೋನಿಯಾ ಹೇಳಿದರು.

ಸಂಸತ್ ಭವನದಲ್ಲಿ ನಡೆದ ಪಕ್ಷದ ಸಂಸದೀಯ ಪಕ್ಷದ ಸಭೆಯಲ್ಲಿ ದೇಶದ ಮುಂದಿರುವ ಕೆಲವು ಪ್ರಮುಖ ರಾಜಕೀಯ ವಿಷಯಗಳನ್ನು ಚರ್ಚಿಸಲಾಯಿತು ಎಂದು ಫೇಸ್‌ಬುಕ್ ಪೋಸ್ಟ್‌ನಲ್ಲಿ ಬರೆದುಕೊಂಡಿರುವ ರಾಹುಲ್,ಇದೀಗ ಅವಧಿಯನ್ನು ಪೂರ್ಣಗೊಳಿಸುತ್ತಿರುವ ಸಂಸತ್ತಿನಲ್ಲಿ ತನ್ನ ಕಾಂಗ್ರೆಸ್ ಬಾಂಧವರು ನೀಡಿದ ಬೆಂಬಲ ಮತ್ತು ಪ್ರೀತಿಗೆ ತಾನು ಆಭಾರಿಯಾಗಿದ್ದೇನೆ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News