ಅನಿಯಂತ್ರಿತ ಠೇವಣಿ ಯೋಜನೆಗಳ ನಿಷೇಧ ಮಸೂದೆಗೆ ಲೋಕಸಭೆಯ ಅಂಗೀಕಾರ

Update: 2019-02-13 14:37 GMT

ಹೊಸದಿಲ್ಲಿ,ಫೆ.13: ವಂಚನೆ ಯೋಜನೆಗಳಿಂದ ಅಮಾಯಕ ಹೂಡಿಕೆದಾರರನ್ನು ರಕ್ಷಿಸಲು ಮಸೂದೆಯನ್ನು ಲೋಕಸಭೆಯು ಬುಧವಾರ ಅಂಗೀಕರಿಸಿತು. ನಿಯಮಗಳನ್ನು ರೂಪಿಸುವಾಗ ಯಾವುದೇ ಲೋಪಗಳಿರದಂತೆ ಸರಕಾರವು ಎಚ್ಚರಿಕೆ ವಹಿಸಲಿದೆ ಎಂದು ವಿತ್ತಸಚಿವ ಪಿಯೂಷ್ ಗೋಯಲ್ ಇದೇ ವೇಳೆ ತಿಳಿಸಿದರು.

ಅನಿಯಂತ್ರಿತ ಠೇವಣಿ ಯೋಜನೆಗಳ ನಿಷೇಧ ಮಸೂದೆ,2018 ವಂಚನೆಗೊಳಗಾದ ಹೂಡಿಕೆದಾರರಿಗೆ ಪರಿಹಾರ ನೀಡಲು ವ್ಯವಸ್ಥೆಯೊಂದನ್ನು ಜಾರಿಗೆ ತರಲು ಉದ್ದೇಶಿಸಿದೆ. ಹಣಕಾಸು ಕುರಿತು ಸ್ಥಾಯಿ ಸಮಿತಿಯು ಮಾಡಿದ ಶಿಫಾರಸುಗಳನ್ನು ಮಸೂದೆಯಲ್ಲಿ ಸೇರಿಸಲಾಗಿದೆ.

ಮಸೂದೆಯ ಮೇಲಿನ ಚರ್ಚೆಗೆ ಉತ್ತರಿಸಿದ ಗೋಯಲ್,ಒಟ್ಟು 978ನ ಅನಧಿಕೃತ ಠೇವಣಿ ಯೋಜನೆ ಪ್ರಕರಣಗಳ ಪೈಕಿ 326 ಪಶ್ಚಿಮ ಬಂಗಾಳಕ್ಕೆ ಸೇರಿದ್ದಾಗಿದ್ದು,ಇದು ಮೂರನೇ ಒಂದು ಭಾಗದಷ್ಟಿದೆ ಎಂದರು.

ಅನಧಿಕೃತ ಠೇವಣಿ ಯೋಜನೆಗಳನ್ನು ಅಂತ್ಯಗೊಳಿಸಲು ಸರಕಾರವು ತ್ವರಿತವಾಗಿ ಕಾರ್ಯಾಚರಿಸಿದೆ. ಮಸೂದೆಯನ್ನು ರೂಪಿಸುವಾಗಿ ಯಾವುದೇ ಲೋಪಗಳಿರದಂತೆ ಎಚ್ಚರಿಕೆ ವಹಿಸಲಾಗಿದೆ ಎಂದರು. ಮಸೂದೆಯನ್ನು ಮಂಗಳವಾರ ಸದನದಲ್ಲಿ ಮಂಡಿಸಲಾಗಿದ್ದು,ಬಜೆಟ್ ಅಧಿವೇಶನದ ಕೊನೆಯ ದಿನವಾಗಿದ್ದ ಇಂದು ಧ್ವನಿಮತದಿಂದ ಅಂಗೀಕಾರಗೊಂಡಿತು.

ಮಸೂದೆಯು ಅಕ್ರಮ ಠೇವಣಿ ಸ್ವೀಕಾರ ಚಟುವಟಿಕೆಗಳನ್ನು ಪರಿಣಾಮಕಾರಿಯಗಿ ಹತ್ತಿಕ್ಕಲಿದೆ ಮತ್ತು ಇಂತಹ ಯೋಜನೆಗಳು ಬಡ ಮತ್ತು ಅಮಾಯಕ ಜನರ ಕಠಿಣ ದುಡಿಮೆಯ ಹಣಕ್ಕೆ ಪಂಗನಾಮ ಹಾಕುವುದನ್ನು ತಡೆಯಲಿದೆ ಎಂದು ಸರಕಾರವು ನಿರೀಕ್ಷಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News