ಭೀಮಾ ಕೊರೆಗಾಂವ್ ಪ್ರಕರಣದ ಎಫ್‌ಐಆರ್ ಸಲ್ಲಿಕೆ: ಬಾಂಬೆ ಹೈಕೋರ್ಟ್ ಆದೇಶ ತಳ್ಳಿಹಾಕಿದ ಸುಪ್ರೀಂ

Update: 2019-02-13 15:17 GMT

ಹೊಸದಿಲ್ಲಿ, ಫೆ.13: ಭೀಮಾ-ಕೊರೆಗಾಂವ್ ಹಿಂಸಾಚಾರ ಪ್ರಕರಣದಲ್ಲಿ ಆರೋಪಪಟ್ಟಿ ಸಲ್ಲಿಸಲು ಮಹಾರಾಷ್ಟ್ರ ಪೊಲೀಸರಿಗೆ 90 ದಿನ ಹೆಚ್ಚುವರಿ ಸಮಯಾವಕಾಶ ನಿರಾಕರಿಸಿದ್ದ ಬಾಂಬೆ ಹೈಕೋರ್ಟ್‌ನ ಆದೇಶವನ್ನು ಸುಪ್ರೀಂಕೋರ್ಟ್ ತಳ್ಳಿಹಾಕಿದೆ.

ಆರೋಪಪಟ್ಟಿ ಸಲ್ಲಿಸಲು ಹೆಚ್ಚುವರಿ ಅವಕಾಶ ನೀಡಿ ವಿಚಾರಣಾ ನ್ಯಾಯಾಲಯ ಹೊರಡಿಸಿದ್ದ ಆದೇಶವನ್ನು ಬಾಂಬೆ ಹೈಕೋರ್ಟ್ ರದ್ದುಗೊಳಿಸಿತ್ತು. ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಾಗಿತ್ತು. ಮಹಾರಾಷ್ಟ್ರ ಪೊಲೀಸರು ನಿಗದಿತ 90 ದಿನದೊಳಗೆ ಆರೋಪಪಟ್ಟಿ ದಾಖಲಿಸದಿದ್ದರೆ ತಾವು ‘ಕರ್ತವ್ಯಲೋಪದ ಕಾರಣ ಜಾಮೀನು’ ಪಡೆಯಲು ಅರ್ಹರಾಗುತ್ತೇವೆ ಎಂದು ಬಂಧಿತ ಮಾನವಹಕ್ಕು ಕಾರ್ಯಕರ್ತರು ಸುಪ್ರೀಂಗೆ ಸಲ್ಲಿಸಿದ್ದ ಅರ್ಜಿಯಲ್ಲಿ ತಿಳಿಸಿದ್ದರು.

 ಆದರೆ ಮಹಾರಾಷ್ಟ್ರ ಪೊಲೀಸರು ಈಗಾಗಲೇ ಆರೋಪಪಟ್ಟಿ ದಾಖಲಿಸಿರುವ ಕಾರಣ ಐವರು ಮಾನವಹಕ್ಕು ಕಾರ್ಯಕರ್ತರು ಈ ಪ್ರಕರಣದಲ್ಲಿ ಸ್ಥಾಯಿ(ನಿಯಮಿತ) ಜಾಮೀನು ಕೋರಬಹುದಾಗಿದೆ ಎಂದು ಸರ್ವೋಚ್ಛ ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಮಾವೋವಾದಿ ನಕ್ಸಲರೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂಬ ಆರೋಪದಲ್ಲಿ ಪುಣೆ ಪೊಲೀಸರು ವಕೀಲ ಸುರೇಂದ್ರ ಗಾಡ್ಲಿಂಗ್, ನಾಗ್‌ಪುರ ವಿವಿ ಪ್ರೊಫೆಸರ್ ಶೋಮಾ ಸೇನ್, ದಲಿತ ಕಾರ್ಯಕರ್ತ ಸುಧೀರ್ ಧಾವ್ಲೆ, ಮಾನವ ಹಕ್ಕು ಕಾರ್ಯಕರ್ತ ಮಹೇಶ್ ರಾವತ್ ಮತ್ತು ಕೇರಳದ ಪ್ರಜೆ ರೋನಾ ವಿಲ್ಸನ್‌ರನ್ನು ಅಕ್ರಮ ಚಟುವಟಿಕೆ ತಡೆ(ಉಪ್ಪಾ) ಕಾಯ್ದೆಯಡಿ ಬಂಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News