×
Ad

ಉಡುಪಿ: ವಿವಿಧ ಮತಗಟ್ಟೆಗಳಿಗೆ ಜಿಲ್ಲಾಧಿಕಾರಿ ಭೇಟಿ, ಪರಿಶೀಲನೆ

Update: 2019-02-13 20:48 IST

ಉಡುಪಿ, ಫೆ.13: ಜಿಲ್ಲೆಯ ಕಾಪು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ಮತಗಟ್ಟೆಗಳಿಗೆ ಇಂದು ಭೇಟಿ ನೀಡಿದ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಅವರು ಅಲ್ಲಿರುವ ಸೌಲಭ್ಯಗಳನ್ನು ಪರಿಶೀಲಿಸಿದರಲ್ಲದೇ, ಇನ್ನಷ್ಟು ಸೌಲಭ್ಯಗಳನ್ನು ಒದಗಿಸಲು ಸಲಹೆ ಸೂಚನೆಗಳನ್ನು ನೀಡಿದರು.

ಉಡುಪಿ ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್, ಸೆಕ್ಟರ್ ಅಧಿಕಾರಿಗಳು, ಕಂದಾಯ ನಿರೀಕ್ಷಕರು, ಗ್ರಾಮ ಕರಣಿಕರು ಹಾಗೂ ಬಿಎಲ್‌ಓಗಳೊಂದಿಗೆ ಕ್ಷೇತ್ರದ ಹತ್ತಾರು ಮತಗಟ್ಟೆಗಳಿಗೆ ಜಿಲ್ಲಾಧಿಕಾರಿಗಳು ಇಂದು ಭೇಟಿ ನೀಡಿದರು.

ನಡ್ಸಾಲು ಮತ್ತು ಹೆಜಮಾಡಿ ಗ್ರಾಮದ ಮತಗಟ್ಟೆಗಳಲ್ಲಿ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ವಿದ್ಯುತ್, ಶೌಚಾಲಯ, ರಾಂಪ್ ಹಾಗೂ ಕಟ್ಟಡದ ಸ್ಥಿತಿ-ಗತಿಯನ್ನು ಪರಿಶೀಲಿಸಿದರು. ಹೆಜಮಾಡಿ ಗ್ರಾಮದ ಕುಕ್ರಾಣಿ ಎಂಬಲ್ಲಿ ಸ್ಥಳೀಯ ನಿವಾಸಿಗಳಿಗೆ ಹೊಸದಾಗಿ ರಸ್ತೆ ಸಂಪರ್ಕ ನಿರ್ಮಾಣ ಗೊಳ್ಳುತಿದ್ದು, ಅಲ್ಲಿನ ಮನೆಗಳಿಂದ ಮತಗಟ್ಟೆಗಳಿಗೆ ಇರುವ ದೂರ ವನ್ನು ಹಾಗೂ ಗ್ರಾಮದ ಸ್ಥಳೀಯ ಮತದಾರರು ಗುರುತು ಚೀಟಿಯನ್ನು ಹೊಂದಿ ದ್ದಾರೆಯೇ ಎಂಬುದನ್ನು ಕೆಲವು ಮನೆಗಳಿಗೆ ಭೇಟಿ ನೀಡಿ ವಿಚಾರಿಸಿದರು.

ಹೊಸ ಮತದಾರರಿಗೆ ಗುರುತು ಚೀಟಿ ನೀಡಿರುವ ಕುರಿತಂತೆಯೂ ಅವರು ಮತಗಟ್ಟೆ ಮಟ್ಟದ ಅಧಿಕಾರಿಗಳ ಬಳಿ ಕೇಳಿ ತಿಳಿದುಕೊಂಡರು. ಪಡುಬಿದ್ರಿಯ ಕಂಚಿನಡ್ಕ ಮತಗಟ್ಟೆಯಲ್ಲಿ ರಾಂಪ್ ವ್ಯವಸ್ಥೆಯನ್ನು ದುರಸ್ಥಿ ಪಡಿಸುವಂತೆ ತಿಳಿಸಿದರು.

ಮತಗಟ್ಟೆ ಬಿಎಲ್‌ಓಗಳು ತಾಲೂಕು ಕಚೇರಿಯಿಂದ ಪಡೆದ ಗುರುತಿನ ಚೀಟಿ ಯನ್ನು ಕಡ್ಡಾಯವಾಗಿ ಸಂಬಂಧಪಟ್ಟ ಮತದಾರರಿಗೆ ನೀಡುವಂತೆ ಹಾಗೂ ಎಲ್ಲಾ ವಿಕಲಚೇತನರ ಮಾಹಿತಿಯನ್ನು- ಅವರ ಗುರುತು ಚೀಟಿ ನಂ., ಮೊಬೈಲ್ ನಂಬರ್- ಸಂಗ್ರಹಿಸಿಟ್ಟುಕೊಂಡು ಮತಗಟ್ಟೆಗಳಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಸೂಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News