ಉಡುಪಿ: ಜಿಲ್ಲಾ ಮತದಾರರ ಸಹಾಯವಾಣಿ ಕೇಂದ್ರ
ಉಡುಪಿ, ಫೆ.13: ಚುನಾವಣಾ ಆಯೋಗದ ನಿರ್ದೇಶನದಂತೆ ಮುಂಬರುವ ಲೋಕಸಭಾ ಸಾರ್ವತ್ರಿಕ ಚುನಾವಣೆ 2019ಕ್ಕೆ ಸಂಬಂಧಿಸಿದಂತೆ ಮತದಾರರ ಪಟ್ಟಿ ಕುರಿತ ಮಾಹಿತಿಗಳನ್ನು ಸಾರ್ವಜನಿಕರು ಪಡೆಯುವ ಸಲುವಾಗಿ ಉಡುಪಿ ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಮತದಾರರ ಸಹಾಯವಾಣಿ ಕೇಂದ್ರವನ್ನು (ವೋಟರ್ ಹೆಲ್ಫ್‌ಲೈನ್) ಮಣಿಪಾಲದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಈಗಾಗಲೇ ತೆರೆಯಲಾಗಿದೆ.
ಸಾರ್ವಜನಿಕರು ಉಚಿತವಾಗಿ ಕರೆಗಳ ಮೂಲಕ ಯಾವುದೇ ಮಾಹಿತಿ ಗಳನ್ನು ಇಲ್ಲಿಂದ ಪಡೆಯಬಹುದು. ಇದಕ್ಕಾಗಿ ಟೋಲ್‌ಪ್ರೀ ನಂ.1950ನ್ನು ಸಂಪರ್ಕಿಸುವಂತೆ ತಿಳಿಸಲಾಗಿದೆ. ಈ ಕೇಂದ್ರ ವಾರದ ಎಲ್ಲಾ ದಿನಗಳಲ್ಲೂ ತೆರೆದಿರುತ್ತದೆ.
ಅಲ್ಲದೇ 2019ರ ಜ.1ಕ್ಕೆ 18 ವರ್ಷ ತುಂಬಿದ ಅರ್ಹ ಯುವ ಮತದಾರ ರಿಗೆ ಹಾಗೂ ವಿಕಲಚೇತನ ಮತದಾರರಿಗೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೊಳಿಸಲು ಸಹ ಅವಕಾಶ ಕಲ್ಪಿಸಲಾಗಿದೆ. ಆದ್ದರಿಂದ ಜಿಲ್ಲೆಯಲ್ಲಿ ಜ.1ಕ್ಕೆ 18 ವರ್ಷ ಭರ್ತಿಯಾದ ಯುವ ಮತದಾರರು ಹಾಗೂ ವಿಕಲಚೇತನ ಮತದಾರರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಸೇರ್ಪಡೆಗೊಳಿಸಲು ನಮೂನೆ-6ರಲ್ಲಿ ತಮ್ಮ ಕ್ಷೇತ್ರದ ಮತಗಟ್ಟೆ ಅಧಿಕಾರಿ (ಬಿಎಲ್‌ಒ) ಅವರಿಗೆ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು. ಈವರೆಗೆ ಮತದಾರರ ಪಟ್ಟಿಯಲ್ಲಿ ಹೆಸರು ನೊಂದಾಯಿಸಿಕೊಳ್ಳದ ಯುವ ಮತದಾರರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.