×
Ad

ಮಂಗನಕಾಯಿಲೆ: ಉಡುಪಿ ಜಿಲ್ಲೆ ಆರೋಗ್ಯ ಇಲಾಖೆಯಿಂದ ಜನಜಾಗೃತಿ ಕಾರ್ಯಕ್ರಮ

Update: 2019-02-13 22:06 IST

ಉಡುಪಿ, ಫೆ.13: ಜಿಲ್ಲೆಯ ಆರೋಗ್ಯ ಇಲಾಖೆ ಮಂಗನ ಕಾಯಿಲೆ ಕುರಿತಂತೆ ಹಳ್ಳಿ ಹಳ್ಳಿಗಳಲ್ಲಿ ಜನಜಾಗೃತಿ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಿರುವ ನಡುವೆಯೇ ಇಂದು ಮತ್ತೆ ಐದು ಮಂಗಗಳ ಕಳೇಬರಗಳು ಜಿಲ್ಲೆಯ ಮೂರು ತಾಲೂಕುಗಳಲ್ಲಿ ಪತ್ತೆಯಾಗಿವೆ.

ಸಿದ್ಧಾಪುರ ಪಿಎಚ್‌ಸಿಯ ಹೊಸಂಗಡಿ, ಹೆಬ್ರಿಯ ಮಂಡಾಡಿಜೆಡ್ಡು ಚಾರ, ಬೈಲೂರಿನ ಕೌಡೂರು, ಕೊಳಲಗಿರಿಯ ಉಪ್ಪೂರು ಹಾಗೂ ಮಂದಾರ್ತಿಯ ಹೆಗ್ಗುಂಜೆಗಳಲ್ಲಿ ಇಂದು ತಲಾ ಒಂದೊಂದು ಮಂಗಗಳ ಸತ್ತಿರುವುದು ಪತ್ತೆಯಾಗಿವೆ. ಇವುಗಳಲ್ಲಿ ಚಾರ ಮತ್ತು ಬೈಲೂರಿನಲ್ಲಿ ಸಿಕ್ಕ ಮಂಗಗಳ ಪೋಸ್ಟ್ ಮಾರ್ಟಂ ನಡೆಸಿ ವಿಸೇರಾವನ್ನು ಪ್ರಯೋಗಾಲಯಗಳಿಗೆ ಕಳುಹಿಸಲಾಗಿದೆ.

ಈವರೆಗೆ ಒಟ್ಟು 59 ಸತ್ತ ಮಂಗಗಳ ಅಟಾಪ್ಸಿ ನಡೆಸಿ ಪ್ರಯೋಗಾಲಯ ಗಳಿಗೆ ಕಳುಹಿಸಲಾಗಿದ್ದು, ಇವುಗಳಲ್ಲಿ 52ರ ವರದಿ ಬಂದಿವೆ. 12ರಲ್ಲಿ ಮಾತ್ರ ಕೆಎಫ್‌ಡಿ ವೈರಸ್ ಪತ್ತೆಯಾದರೆ, 40ರಲ್ಲಿ ಸೋಂಕು ಕಂಡುಬಂದಿಲ್ಲ. ಇನ್ನು 7ರ ವರದಿ ಇನ್ನಷ್ಟೇ ಬರಬೇಕಿದೆ ಎಂದು ಜಿಲ್ಲಾ ನೋಡೆಲ್ ಅಧಿಕಾರಿ ಡಾ. ಪ್ರಶಾಂತ್ ಭಟ್ ತಿಳಿಸಿದ್ದಾರೆ.

ಇಂದು ಜಿಲ್ಲೆಯಲ್ಲಿ ಒಬ್ಬ ರೋಗಿಯ ರಕ್ತವನ್ನು ಶಂಕಿತ ಕೆಎಫ್‌ಡಿಗಾಗಿ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿಗಾಗಿ ಕಾಯಲಾಗುತ್ತಿದೆ. ಈವರೆಗೆ ರಕ್ತ ಪರೀಕ್ಷೆ ನಡೆಸಿರುವ 31 ಪ್ರಕರಣಗಳಲ್ಲಿ ಯಾರಲ್ಲೂ ಸೋಂಕು ಪತ್ತೆಯಾಗಿಲ್ಲ ಎಂದು ಡಾ.ಭಟ್ ತಿಳಿಸಿದರು.

ಈ ಮಧ್ಯೆ ಇಲಾಖೆ, ವೈರಸ್ ಮನುಷ್ಯನಿಗೆ ಹರಡದಂತೆ ಸಮರೋಪಾದಿ ಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಎಲ್ಲಾ ಪಿಎಚ್‌ಸಿ ಗಳಲ್ಲೂ ಅಗತ್ಯಕ್ಕೆ ತಕ್ಕಷ್ಟು ಡಿಎಂಪಿ ತೈಲ, ಮೆಡಿಸಿನ್ ಹಾಗೂ ಇತರ ವಸ್ತುಗಳನ್ನು ಇರಿಸಲಾಗಿದೆ ಎಂದವರು ನುಡಿದರು.

ಇಂದು ಬ್ರಹ್ಮಾವರದ ಚಾಂತಾರು ಗ್ರಾಮದ ಅಗ್ರಹಾರದಲ್ಲಿ ಮನೆ, ಅಂಗಡಿಗಳಿಗೆ ಜನರಿಗೆ ಮಂಗನ ಕಾಯಿಲೆ ಕುರಿತು ಜಾಗೃತಿಯನ್ನು ಮೂಡಿಸಿ ಕರಪತ್ರಗಳನ್ನು ಹಂಚಲಾಯಿತು. ಮೊಬೈಲ್ ಯುನಿಟ್ ಇಂದು ಕುಂದಾಪುರದ ಶಿರೂರು ಆಸುಪಾಸಿನ ಗ್ರಾಮಗಳಿಗೆ ತೆರಳಿ ಜಾಗೃತಿ ಮೂಡಿಸಿತು. ಕೊಕ್ಕರ್ಣೆಯ ನಾಲ್ಕೂರಿನಲ್ಲಿ ಇಂದು ಮಂಗನಕಾಯಿಲೆಗಾಗಿ ವಿಶೇಷ ಗ್ರಾಮ ಸಭೆ ನಡೆಯಿತು. ಇದರಲ್ಲಿ ಸ್ಥಳೀಯ ವೈದ್ಯಾಧಿಕಾರಿಗಳು ಕಾಯಿಲೆ ಕುರಿತು ತೆಗೆದುಕೊಳ್ಳಬೇಕಾದ ಎಚ್ಚರಿಕೆ ಕುರಿತು ಜನರಿಗೆ ಮಾಹಿತಿ ನೀಡಿದರು.

ಹೊನ್ನಾವರದ ಒಬ್ಬರಲ್ಲಿ ಕಾಯಿಲೆ ಪತ್ತೆ

ಶಂಕಿತ ಮಂಗನಕಾಯಿಲೆಗಾಗಿ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಾದವರಲ್ಲಿ ಇಂದು ಹೊನ್ನಾವರದ ಒಬ್ಬ ರೋಗಿಯಲ್ಲಿ ಮಂಗನ ಕಾಯಿಲೆ ವೈರಸ್ ಪತ್ತೆಯಾಗಿದೆ ಎಂದು ಕೆಎಂಸಿ ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.

ಈವರೆಗೆ ಶಂಕಿತ ರೋಗಕ್ಕಾಗಿ ಒಟ್ಟು 188 ಮಂದಿ ಆಸ್ಪತ್ರೆಗೆ ದಾಖಲಾಗಿದ್ದು, ಅಲ್ಲದೇ ಜ್ವರ ಮರುಕಳಿಸಿದ್ದರಿಂದ 9 ಮಂದಿ ಮತ್ತೆ ಚಿಕಿತ್ಸೆಗೆ ದಾಖಲಾಗಿದ್ದಾರೆ. ಇವರಲ್ಲಿ 71 ಮಂದಿಯಲ್ಲಿ ಕೆಎಫ್‌ಡಿ ವೈರಸ್ ಪತ್ತೆಯಾಗಿದೆ. 124 ಮಂದಿಯಲ್ಲಿ ಸೋಂಕು ಕಂಡುಬಂದಿಲ್ಲ. ಈಗಾಗಲೇ 163 ಮಂದಿ ಚಿಕಿತ್ಸೆ ಪಡೆದು ಗುಣಮುಖರಾಗಿ ಆಸ್ಪತ್ರೆಗೆ ಬಿಡುಗಡೆ ಹೊಂದಿದ್ದಾರೆ. 30 ಮಂದಿ ಇನ್ನೂ ಚಿಕಿತ್ಸೆ ಪಡೆಯುತಿದ್ದಾರೆ ಎಂದು ಕೆಎಂಸಿ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News