×
Ad

ಶಿಕ್ಷಕರ ಬೇಡಿಕೆಗಳ ಈಡೇರಿಕೆಗೆ ಒತ್ತಾಯ: ಫೆ. 16ರಂದು ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಿಂದ ಪ್ರತಿಭಟನೆ

Update: 2019-02-13 22:07 IST

ಉಡುಪಿ, ಫೆ.13: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಡುಪಿ ಜಿಲ್ಲಾ ಘಟಕದ ವತಿಯಿಂದ ಶಿಕ್ಷಕರ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಫೆ.16ರ ಶನಿವಾರ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಯಲಿದ್ದು, ಬಳಿಕ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ಸಂಘದ ಅಧ್ಯಕ್ಷ ರವೀಂದ್ರ ಹೆಗ್ಡೆ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಲಿಸುತ್ತಿರುವ 2800 ಶಿಕ್ಷಕರಲ್ಲಿ 500ಕ್ಕೂ ಅಧಿಕ ಮಂದಿ ಅಂದಿನ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.

ಫೆ.16ರಂದು ಬೆಳಗ್ಗೆ 10 ಗಂಟೆಗೆ ಶಿಕ್ಷಕರ ಧರಣಿ ಪ್ರಾರಂಭಗೊಳ್ಳಲಿದ್ದು, 12 ಗಂಟೆಗೆ ಜಿಲ್ಲಾಧಿಕಾರಿಗಳಿಗೆ ಮನವಿ ಅರ್ಪಿಸಲಾಗುವುದು ಎಂದು ಹೆಗ್ಡೆ ತಿಳಿಸಿದರು.

ಬೇಡಿಕೆಗಳು: ಶಿಕ್ಷಕರ ವರ್ಗಾವಣೆಯನ್ನು ತಕ್ಷಣವೇ ಪ್ರಾರಂಭಿಸಬೇಕು. ಮುಂದಿನ ತಿಂಗಳು ಚುನಾವಣಾ ನೀತಿ ಸಂಹಿತೆ ಜಾರಿಗೊಳ್ಳುವ ಸಾಧ್ಯತೆ ಇರುವುದರಿಂದ ಈ ಕೂಡಲೇ ಶಿಕ್ಷಕರ ವರ್ಗಾವಣೆ ಪ್ರಾರಂಭಿಸಬೇಕು. ಪ್ರತಿ ವರ್ಷ ಮಾರ್ಚ್-ಎಪ್ರಿಲ್‌ನಲ್ಲಿ ವರ್ಗಾವಣೆ ನಡೆಯಬೇಕಾಗಿದೆ. ಆದರೆ ಚುನಾವಣೆ ಸೇರಿದಂತೆ ವಿವಿಧ ಕಾರಣಗಳಿಂದ ಕಳೆದ ಮೂರು ವರ್ಷಗಳಿಂದ ಶಿಕ್ಷಕರ ವರ್ಗಾವಣೆ ನಡೆದಿಲ್ಲ. ಆದ್ದರಿಂದ ಈ ವರ್ಷವಾದರೂ ಇದೇ ತಿಂಗಳು ವರ್ಗಾವಣೆ ಪ್ರಾರಂಭಿಸಬೇಕಾಗಿದೆ.

ಪದವೀಧಕರು ಹಾಗೂ ಇತರೆ ಶಿಕ್ಷಕರಿಗೆ ಭಡ್ತಿ ಪ್ರಕ್ರಿಯೆಯನ್ನು ಕೂಡಲೇ ಪ್ರಾರಂಭಿಸಬೇಕು. ನೂತನ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಬೇಕು. ಮುಖ್ಯ ಗುರುಗಳಿಗೆ, ಭಡ್ತಿ ಹೊಂದುವವರಿಗೆ 10, 15,20,25, 30 ವರ್ಷಗಳ ಆರ್ಥಿಕ ಸೌಲಭ್ಯ ನೀಡಬೇಕು. ಗ್ರಾಮೀಣ ಕೃಪಾಂಕ ಶಿಕ್ಷಕರ ಸಮಸ್ಯೆ ಗಳನ್ನು ಬೇಗನೇ ಇತ್ಯರ್ಥಗೊಳಿಸಬೇಕು. ದೇಶದ ಉಚ್ಚ ನ್ಯಾಯಾಲಯದ ಆದೇಶದಂತೆ ಶಿಕ್ಷಕರನ್ನು ಶಿಕ್ಷಣೇತರ ಕಾರ್ಯಗಳಿಂದ ಮುಕ್ತಗೊಳಿಸಬೇಕು ಎಂಬುದು ತಮ್ಮ ಬೇಡಿಕೆಯಾಗಿದೆ ಎಂದವರು ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಬಿ.ಬಿ., ದಿನಕರ ಶೆಟ್ಟಿ, ಮಂಗಳಾ ಶೆಟ್ಟಿ, ಕೃಷ್ಣ ಮೊಯ್ಲಿ ಬೈಲೂರು ವಿಶ್ವನಾಥ ಪೂಜಾರಿ, ಸದಾನಂದ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News