ವೆನೆಝುವೆಲದ ತೈಲ ಖರೀದಿಸಬೇಡಿ: ಭಾರತಕ್ಕೆ ಅಮೆರಿಕ ಎಚ್ಚರಿಕೆ

Update: 2019-02-13 16:44 GMT

ವಿಶ್ವಸಂಸ್ಥೆ, ಫೆ. 13: ವೆನೆಝುವೆಲದ ತೈಲವನ್ನು ಖರೀದಿಸದಂತೆ ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾನ್ ಬೋಲ್ಟನ್ ಭಾರತಕ್ಕೆ ಎಚ್ಚರಿಕೆ ನೀಡಿದ್ದಾರೆ ಹಾಗೂ ‘‘ಇದನ್ನು ನಾವೆಂದೂ ಮರೆಯುವುದಿಲ್ಲ’’ ಎಂದಿದ್ದಾರೆ. ಇದಕ್ಕೆ ಪ್ರತಿಭಟನೆ ಸಲ್ಲಿಸಿರುವ ವೆನೆಝುವೆಲದ ವಿದೇಶ ಸಚಿವ ಜಾರ್ಜ್ ಆಲ್ಬರ್ಟೊ ಅರಿಯಾಝ, ಇದು ಜಾಗತಿಕ ‘ಸರ್ವಾಧಿಕಾರ’ವನ್ನು ಹೇರುವ ಅಮೆರಿಕದ ಪ್ರಯತ್ನವಾಗಿದೆ ಎಂದು ಹೇಳಿದ್ದಾರೆ.

‘‘(ವೆನೆಝುವೆಲ ಅಧ್ಯಕ್ಷ ನಿಕೊಲಸ್) ಮಡುರೊ ಮಾಡುವ ವೆನೆಝುವೆಲದ ಸಂಪನ್ಮೂಲಗಳ ಕಳ್ಳತನವನ್ನು ಬೆಂಬಲಿಸುವ ದೇಶಗಳು ಮತ್ತು ಕಂಪೆನಿಗಳನ್ನು ನಾವು ಮರೆಯುವುದಿಲ್ಲ’’ ಎಂಬುದಾಗಿ ಬೋಲ್ಟನ್ ಮಂಗಳವಾರ ಟ್ವೀಟ್ ಮಾಡಿದ್ದಾರೆ ಹಾಗೂ ಹೆಚ್ಚಿನ ತೈಲವನ್ನು ಮಾರಾಟ ಮಾಡುವುದಕ್ಕಾಗಿ ವೆನೆಝುವೆಲದ ತೈಲ ಸಚಿವ ಮ್ಯಾನುಯಲ್ ಕ್ವೆವೇಡೊ ಭಾರತಕ್ಕೆ ಭೇಟಿ ನೀಡುವುದಕ್ಕೆ ಸಂಬಂಧಿಸಿದ ವರದಿಯೊಂದನ್ನು ಅದಕ್ಕೆ ಜೋಡಿಸಿದ್ದಾರೆ.

‘‘ವೆನೆಝುವೆಲದ ಜನರ ಸೊತ್ತುಗಳನ್ನು ಸಂರಕ್ಷಿಸಲು ಅಮೆರಿಕವು ತನ್ನೆಲ್ಲ ಶಕ್ತಿಯನ್ನು ಬಳಸುವುದನ್ನು ಮುಂದುವರಿಸಲಿದೆ ಹಾಗೂ ಇದನ್ನು ಸಾಧಿಸುವುದಕ್ಕಾಗಿ ಜೊತೆಯಾಗಿ ಕೆಲಸ ಮಾಡುವಂತೆ ನಾವು ಎಲ್ಲ ದೇಶಗಳನ್ನು ಬೆಂಬಲಿಸುತ್ತೇವೆ’’ ಎಂದು ಅವರು ತನ್ನ ಟ್ವೀಟ್‌ನಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News