ಅಸ್ಥಿಪಂಜರ ವೆಂಕಟ್ರಮಣ ಭಟ್ ಅವರದಲ್ಲ: ವಿಧಿವಿಜ್ಞಾನ ವರದಿ

Update: 2019-02-13 16:57 GMT

ಪುತ್ತೂರು, ಫೆ. 13: ಕಕ್ಕೂರು ಕೊಲೆ ಪ್ರಕರಣಕ್ಕೆ ಸಂಬಂಧಿಸಿಂತೆ ಸಿಕ್ಕಿರುವ ಅಸ್ಥಿಪಂಜರ ಮನೆಯ ಮಾಲಿಕ ವೆಂಕಟ್ರಮಣ ಭಟ್ ಅವರದಲ್ಲ ಎಂದು ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಬಂದಿದ್ದು, ಇದರಿಂದ ಕಳೆದ 7 ವರ್ಷಗಳ ಹಿಂದೆ ನಡೆದ ಕುಟುಂಬವೊಂದರ ಸಾಮೂಹಿಕ ಕೊಲೆ ಪ್ರಕರಣ ಹಾಗೂ ನಾಪತ್ತೆಯಾಗಿದ್ದ ಮನೆ ಮಾಲಿಕರ ಪತ್ತೆ ಪ್ರಕರಣದ ನಿಗೂಢತೆ ಮುಂದುವರಿದಿದೆ.

2012 ಜೂ. 12 ರಂದು ಪುತ್ತೂರು ತಾಲೂಕಿನ ರೆಂಜ ಗ್ರಾಮದ ಕಕ್ಕೂರು ನಿವಾಸಿ ವೆಂಕಟ್ರಣ ಭಟ್ ಎಂಬವರ ಮನೆಯಲ್ಲಿ ಸಾಮೂಹಿಕ ಕೊಲೆಯಾಗಿತ್ತು. ಮನೆಯ ಯಜಮಾನನನ್ನು ಹೊರತುಪಡಿಸಿ ಉಳಿದವರ ಮೃತದೇಹ ಕೊಲೆಯದ ಎರಡು ದಿನದ ಬಳಿಕ ಮನೆಯೊಳಗೆ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಮನೆಗೆ ಬಂದಿದ್ದ ವಿದ್ಯುತ್ ಮೀಟರ್ ರೀಡರ್ ಮನೆಯಲ್ಲಿ ಶವವಾಗಿ ಬಿದ್ದಿದ್ದ ಮನೆ ಮಂದಿಯನ್ನು ನೋಡಿ ಇತರರಿಗೆ ಮಾಹಿತಿ ನೀಡಿದ್ದರು. ವೆಂಕಟ್ರಮಣ ಭಟ್ ಅವರ ಪತ್ನಿ  ಸುಳ್ಯ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿದ್ದ ಸಂದ್ಯಾ, ಮಕ್ಕಳಾದ ವೇದ್ಯಾ, ಹರಿಗೋವಿಂದ ಮತ್ತು ವಿನುತಾ ಅವರನ್ನು ಹರಿತವಾದ ಆಯುಧದಿಂದ ಕತ್ತು ಸೀಳಿ ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಹಿರಿಯ ಮಗಳು ವೇದ್ಯಾ ಮಲಗಿದ್ದ ಮಂಚದಲ್ಲೇ ಶವವಾಗಿದ್ದರೆ, ಪುತ್ರ ಹರಿಗೋವಿಂದ, ಸಂದ್ಯಾ, ಮತ್ತು ಕಿರಿಮಗಳು ವಿನುತಾ ಮನೆಯ ಒಳಗಿನ ಚಾವಡಿಯಲ್ಲಿ ಶವವಾಗಿದ್ದರು.

ಆದರೆ ಮನೆಯ ಯಜಮಾನ ವೆಂಕಟ್ರಮಣ ಭಟ್ ಮನೆಯಿಂದ ನಾಪತ್ತೆಯಾಗಿದ್ದರು. ಪ್ರಾರಂಭದಲ್ಲಿ ಅವರೇ ಪತ್ನಿ ಮಕ್ಕಳನ್ನು ಕೊಲೆ ಮಾಡಿ ಪರಾರಿಯಾಗಿ ದ್ದಾರೆ ಎಂದು ಹೇಳಲಾಗಿತ್ತು. ಘಟನೆಯ ಬಗ್ಗೆ ಉನ್ನತ ಮಟ್ಟದ ತನಿಖೆಯೂ ನಡೆದಿತ್ತು. ಕಾಣೆಯಾದ ಮನೆ ಮಾಲಕ ವೆಂಟಕ್ರಮಣ ಭಟ್‍ಗಾಗಿ ಎಲ್ಲೆಡೆ ಹುಡುಕಾಟವೂ ನಡೆದಿತ್ತು. ಆದರೆ ಎಲ್ಲೂ ಅವರ ಪತ್ತೆಯಾಗಲಿಲ್ಲ. ಘಟನೆ ನಡೆದು ಆರು ತಿಂಗಳ ಬಳಿಕ ವೆಂಕಟ್ರಮಣ ಭಟ್ ಅವರ ಮನೆ ಸಮೀಪದ ಮರದಲ್ಲಿ ಪುರುಷರೊಬ್ಬರ ಅಸ್ಥಿ ಪಂಜರ ಪತ್ತೆಯಾಗಿತ್ತು. ಇದು ವೆಂಕಟ್ರಮಣ ಭಟ್ ಅವರದ್ದೇ ಎಂದು ನಂಬಲಾಗಿತ್ತು. ಅಸ್ಥಿ ಪಂಜರವನ್ನು ವಿಧಿ ವಿಜ್ಞಾನ ಇಲಾಖೆಗೆ ಕಳುಹಿಸಿ ಡಿಎನ್‍ಎ ಪರೀಕ್ಷೆಯನ್ನು ನಡೆಸಲಾಗಿತ್ತು. ಇದಕ್ಕಾಗಿ ಭಟ್ ಅವರ ಸಹೋದರನ ರಕ್ತದ ಮಾದರಿಯನ್ನು ಪರೀಕ್ಷೆಗೊಳಪಡಿಸಲಾಗಿತ್ತು. ಇದೀಗ ವಿಧಿ ವಿಜ್ಞಾನದ ವರದಿ ಪೊಲೀಸರ ಕೈ ಸೇರಿದೆ . ಮರದಲ್ಲಿ ಪತ್ತೆಯಾದ ಅಸ್ಥಿ ಪಂಜರ ಭಟ್ ಅವರದ್ದಲ್ಲ ಎಂದು ವರದಿ ತಿಳಿಸಿದೆ.

ಬೆಟ್ಟಂಪಾಡಿ ಗ್ರಾಮದ ಕಕ್ಕೂರು ನಿವಾಸಿ ವೆಂಕಟ್ರಮಣ ಭಟ್ ಅವರ ಮನೆಯಲ್ಲಿ ಬರ್ಬರ ಕೊಲೆ ನಡೆದು ಏಳು ವರ್ಷ ಸಂದರೂ ಕೊಲೆ ಪ್ರಕರಣ ಹಾಗೂ ಭಟ್ ನಾಪತ್ತೆ ಪ್ರಕರಣ ಇನ್ನೂ ನಿಗೂಢವಾಗಿಯೇ ಇದ್ದು , ಕೊಲೆಯಾದ ಕೆಲವು ತಿಂಗಳ ಬಳಿಕ ಭಟ್ ಅವರ ಮನೆಯ ಬಳಿ ಮರದಲ್ಲಿ ನೇತಾಡುತ್ತಿದ್ದ ಅಸ್ಥಿಪಂಜರದ ವಿಧಿವಿಜ್ಞಾನ ವರದಿ ಪೊಲೀಸ್ ಇಲಾಖೆಯ ಕೈ ಸೇರಿದೆ. ಈ ನಡುವೆ ಪ್ರಕರಣ ಇನ್ನೂ ನಿಗೂಢವಾಗಿದ್ದು, ಭಟ್ ಅವರ ಮನೆಯ ಪಕ್ಕದಲ್ಲಿಯೇ ಸಿಕ್ಕಿರುವ ಅಸ್ಥಿಪಂಜರ ಯಾರದ್ದು? ನಾಪತ್ತೆಯಾಗಿರುವ ವೆಂಕಟ್ರಮಣ ಭಟ್ ಎಲ್ಲಿ ಹೋದರು. ಮನೆಯೊಳಗೆ ನಾಲ್ವರನ್ನು ಬರ್ಬರವಾಗಿ ಕೊಲೆ ನಡೆಸಿದವರು ಯಾರು ? ಎಂಬ ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ.

ಸಾಮೂಹಿಕ ಕೊಲೆ ನಡೆಯುವ ಮೊದಲು ಅಂದರೆ 2012 ಜೂನ್ 4ರಂದು ಇದೇ ಮನೆಯಲ್ಲಿ ದರೋಡೆ ನಡೆದಿತ್ತು. 7 ಪವನ್ ಚಿನ್ನ, 50 ಸಾವಿರ ರೂ. ನಗದು ದೋಚಲಾಗಿತ್ತು. ಸಂಪ್ಯ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿತ್ತು. ಇದಾಗಿ ವಾರದಲ್ಲೇ ಸಾಮೂಹಿಕ ಭೀಕರ ಕೊಲೆ ನಡೆದಿತ್ತು. ಆದ್ದರಿಂದ ಸಹಜವಾಗಿ ದರೋಡೆಗೂ ಕೊಲೆಗೂ ಸಂಬಂಧ ಇದ್ದಿರಬಹುದೆಂಬ ಶಂಕೆ ವ್ಯಕ್ತವಾಗಿತ್ತು. ಆದರೆ ಕೆಲ ಸಮಯದ ನಂತರ ಅಂತಾರಾಜ್ಯ ದರೋಡೆಕೋರರ ತಂಡವನ್ನು ಪೊಲೀಸರು ಬಂಧಿಸಿದ್ದರು. ದರೋಡೆ ನಡೆಸಿದ್ದನ್ನು ತಂಡ ಒಪ್ಪಿಕೊಂಡಿದೆ. ಆದರೆ ಈ ತಂಡ ಕೊಲೆ ನಡೆಸಿಲ್ಲ ಎಂದು ಪೊಲೀಸ್ ಇಲಾಖೆಯೇ ತಿಳಿಸಿತ್ತು.

ಕಕ್ಕೂರು ಕೊಲೆ ಪ್ರಕರಣ ರಾಜ್ಯಾದ್ಯಂಥ ದೊಡ್ಡ ಸುದ್ದಿಯಾಗಿತ್ತು. ಘಟನೆಯ ಕುರಿತು ಉನ್ನತ ತನಿಖೆ ನಡೆಸಬೇಕು ಎಂಬ ಆಗ್ರಹ ಎಲ್ಲೆಡೆ ವ್ಯಕ್ತವಾಗಿತ್ತು. ಅಂದಿನ ಶಾಸಕಿಯಾಗಿದ್ದ ಶಕುಂತಳಾ ಶೆಟ್ಟಿಯವರು ಘಟನೆಯ ಕುರಿತು ಉನ್ನತ ತನಿಖೆ ನಡೆಸುವಂತೆ ಸರಕಾರವನ್ನು ಆಗ್ರಹಿಸಿದ್ದರು. ಕೆಡಿಪಿ, ತಾಪಂ ಸೇರಿದಂತೆ ವಿವಿಧ ಸಭೆಗಳಲ್ಲಿ ತನಿಖೆಯ ಕುರಿತು ಆಗ್ರಹವೂ ವ್ಯಕ್ತವಾಗಿತ್ತು.

ಕೊಲೆಯಾಗಿ ಏಳು ವರ್ಷ ಸಂದಿದೆ . ಮನೆ ಮಾಲಕ ವೆಂಕಟ್ರಮಣ ಭಟ್ ಇನ್ನೂ ಜೀವಂತವಾಗಿದ್ದಾರೆ ಎಂಬ ಮಾತುಗಳು ಈಗ ಗಟ್ಟಿಯಾಗತೊಡಗಿದೆ. ಭಟ್ ಅವರೇ ಈ ಕೃತ್ಯವನ್ನು ನಡೆಸಿರಬಹುದು ಎಂಬ ಜನರು ಮತ್ತೆ ಮಾತನಾಡತೊಡಗಿದ್ದಾರೆ. ಮರದಲ್ಲಿ ಯಾರದ್ದೋ ಅಸ್ಥಿ ಪಂಜರವನ್ನು ತೂಗು ಹಾಕಿದರ ಹಿಂದೆ ನಿಗೂಢತೆ ಮುಂದುವರಿದಿದೆ. ಪ್ರಕರಣದ ದಿಕ್ಕು ತಪ್ಪಿಸಲೆಂದು ಈ ಕೃತ್ಯವನ್ನು ಮಾಡಿಸಿರಬಹುದು ಎಂಬ ಮಾತೂ ಕೇಳಿ ಬರುತ್ತಿದೆ.  

ಒಟ್ಟಿನಲ್ಲಿ ಕಳೆದ 7 ವರ್ಷಗಳಿಂದ ನಿಗೂಢವಾಗಿರುವ ಈ ಪ್ರಕರಣದ ತನಿಖೆ ನಡೆದು ನೈಜ ಆರೋಪಿಗಳ ಪತ್ತೆಯಾಗಬೇಕು ಎಂಬುದು ಕಕ್ಕೂರು ಗ್ರಾಮಸ್ಥರ ಹಾಗೂ ಕುಟುಂಬಸ್ಥರ ಆಗ್ರಹವಾಗಿದೆ.

ವಿವಿಜ್ಞಾನ ಪ್ರಯೋಗಾಲಯದಿಂದ ವರದಿ ಬಂದಿದೆ. ಇದರ ಪ್ರಕಾರ, ಕಕ್ಕೂರಿನ ವೆಂಕಟರಮಣ ಭಟ್ ಅವರಿಗೂ ಕಕ್ಕೂರಿನ ಕಾಡಿನ ತುದಿಯಲ್ಲಿ ಸಿಕ್ಕಿದ ಮೃತದೇಹಕ್ಕೂ ಸಾಮ್ಯತೆ ಇಲ್ಲ. ಆದ್ದರಿಂದ ಪ್ರಕರಣ ಇನ್ನೂ ಕೂಡ ಗೌಪ್ಯವಾಗಿಯೇ ಉಳಿದುಕೊಂಡಿದೆ.
-ದಿನಕರ ಶೆಟ್ಟಿ, ಡಿವೈಎಸ್ಪಿ, ಪುತ್ತೂರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News