ಪಂಚ ಮಹಾ ವೈಭವ: ಚಕ್ರರತ್ನ ಉದಯ, ದಿಗ್ವಿಜಯ ಮೆರವಣಿಗೆ

Update: 2019-02-13 17:24 GMT

ಬೆಳ್ತಂಗಡಿ, ಫೆ. 13: ಧರ್ಮಸ್ಥಳದಲ್ಲಿ ನಡೆಯುತ್ತಿರುವ ಭಗವಾನ್ ಬಾಹುಬಲಿ ಮಹಾಮಸ್ತಕಾಭಿಷೇಕದ ಅಂಗವಾಗಿ ಬುಧವಾರ ಪಂಚ ಮಹಾವೈಭವ ಮಂಟಪದಲ್ಲಿ ಭರತನ ಆಸ್ಥಾನ ವೈಭವ, ಆಯುಧಾಗಾರದಲ್ಲಿ ಚಕ್ರರತ್ನ ಉದಯ ಹಾಗೂ ಧರ್ಮಸ್ಥಳದಿಂದ ಶಾಂತಿವನದ ವರೆಗೆ ದಿಗ್ವಿಜಯ ಮೆರವಣಿಗೆಯ ರೂಪಕ ಪ್ರದರ್ಶನ ಅತ್ಯಂತ ಆಕರ್ಷಕವಾಗಿ ಮೂಡಿ ಬಂತು.

ಭರತನ ವೈಭವದ ದಿಗ್ವಿಜಯ: ಸಂಜೆ ನೇತ್ರಾವತಿಯಿಂದ ಧರ್ಮಸ್ಥಳದ ವರೆಗೆ ನಡೆದ ಭರತಚಕ್ರವರ್ತಿಯ ಅಯೋದ್ಯೆಗಿನ ಪುರಪ್ರವೇಶದ ಭವ್ಯ ಮೆರವಣಿಗೆ ನೋಡುಗರ ಕಣ್ಮನ ತಣಿಸುವಂತಿತ್ತು. ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಜನರು ರಸ್ತೆಯ ಇಕ್ಕೆಲಗಳಲ್ಲಿ ನಿಂತು ಭವ್ಯ ಮೆರವಣಿಗೆಯನ್ನು ವೀಕ್ಷಿಸಿದರು.

ಪುರಪ್ರವೇಶಕ್ಕೂ ಮೊದಲೇ ವಿಘ್ನ: ಜಗತ್ತನ್ನು ಗೆದ್ದು ಪುರಪ್ರವೇಶಕ್ಕೆ ಬರುತ್ತಿದ್ದ ಭವ್ಯ ಮೆರವಣಿಗೆಗೆ ಅಯೋಧ್ಯೆಯ ಮಹಾಧ್ವಾರದಲ್ಲಿಯೇ ತಡೆಯಾಯಿತು. ಭರತಚಕ್ರವರ್ತಿಯ ಮಹಾ ಸೇನೆಯನ್ನು ಮುನ್ನಡೆಸುತ್ತಿದ್ದ ಚಕ್ರರತ್ನವು ಮಹಾದ್ವಾರದ ಎದುರು ಸ್ಥಗಿತಗೊಂಡಿತ್ತು. ಭರತ ಚಕ್ರವರ್ತಿಯು ಇದಕ್ಕೆ ಕಾರಣಬವೇನೆಂದು ಕೇಳುವಲ್ಲಿಗೆ ಇಂದಿನ ಪಂಚಮಹಾ ವೈಭವದ ಕಾರ್ಯಕ್ರಮಗಳು ಮುಕ್ತಾಯಗೊಂಡವು.  ಭರತ ಚಕ್ರವರ್ತಿಯು ಬಾಹುಬಲಿಗೆ ಶರಣಾಗುವಂತೆ ಸಂದೇಶ ಕಳುಹಿಸುವುದು ಹಾಗೂ ಬಾಹುಬಲಿ ಶರಣಾಗಲು ನಿರಾಕರಿಸುವುದು ಹಾಗೂ ಬಳಿಕ ಇಬ್ಬರ ನಡುವಿನ ಯುದ್ದದ ಸಿದ್ದತೆ ಹಾಗೂ ಬಳಿಕ ಭರತ ಬಾಹುಬಲಿಯ ನಡುವಿನ ಯುದ್ದದ ದೃಶ್ಯಗಳು ನಡೆಯಲಿದೆ.   

ಮೆರವಣಿಗೆಯಲ್ಲಿ 44 ತಂಡಗಳಲ್ಲಿ ಸುಮಾರು ಒಂದುಸಾವಿರಕ್ಕೂ ಹೆಚ್ಚು ಮಂದಿ ಕಲಾವಿದರು ಭಾಗವಹಿಸಿದ್ದರು. ಕೊಂಬು, ಕಹಳೆ, ಬಿರುದಾವಳಿಗಳು, ಮಹಾಶಕ್ತಿಶಾಲಿ ವೀರ ಭಟರು, ನೂರಾರು ಮಂದಿ ವಿವಿಧ ವೇಷ ಭೂಷಣಗಳ ಸೈನಿಕರು, ಪೂಜಾಕುಣಿತ, ರಾಜಾಸ್ತಾನಿ ತಂಡ, ನಗಾರಿ ಧ್ವನಿ, ಜಟ್ಟಿಗಳು, ಗುಜರಾತಿ ತಂಡ, ನಾಗಾಲ್ಯಾಂಡ್ ತಂಡ, ಡೊಳ್ಳು ಕುಣಿತ, ಕಾಡು ಮನುಷ್ಯರು, ಜಪಾನ್ ದೇಶದ ತಂಡ, ಈಜಿಪ್ತ್ ದೇಶದ ತಂಡ, ಚೀನಾ ತಂಡ, ಚೆಂಡಗಳು ಮಂಗಳವಾಧ್ಯ, ಕತ್ತಿ ಗುರಾಣಿ ಹಿಡಿದ ಯೋಧರು, ಪಂಜಾಬ್ ದೇಶದ ಪ್ರತಿನಿಧಿಗಳು, ಬಂಗಾಲದ ರಾಜ ಹಾಗೂ ಪ್ರತಿನಿಧಿಗಳು, ಬೆಂದಾರ ನೃತ್ಯ, ಮರಾಠ ವೀರರು, ನಾಸಿಕ್ ಬಾಂಡ್, ಕೊಡಗು ದೇಶದ ವೀರರು, ಶ್ರೀಲಂಕಾ ದೇಶದ ವೀರರು, ಮಣಿಪುರ ದೇಶದ ರಾಜರು, ವೀರಭದ್ರ ಕುಣಿತ, ಭೂತಾನ್ ದೇಶದ ತಂಡ, ಶಂಖ ವಾಧ್ಯ, ಕರ್ನಾಟಕ ದೇಶದ ತಂಡ, ವಿವಿಧ ಬಣ್ಣದ ಕೊಡೆಗಳು, ದೇವರ ಸ್ಥಬ್ದ ಚಿತ್ರಗಳು, ಕೇರಳದ ಚೆಂಡೆ, ಕೇರಳದ ದೇಶದವರು, ವಿಜಯಸಂಕೇತವಾದ ದ್ವಜಗಳು, ಚಕ್ರವರ್ತಿಯ ಅಂಗರಕ್ಷಕರು, ಹಾಗೂ ಭವ್ಯವಾದ ಚಿನ್ನದ ರಥದಲ್ಲಿ. ಭರತ ಚಕ್ರವರ್ತಿ ಆಗಮಿಸಿದರು.
ಮಹಾ ಮೆರವಣಿಗೆಯನ್ನು ಧರ್ಮಸ್ಥಳದ ಧಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರು ಹಾಗೂ ಕುಟುಂಬಸ್ಥರು ಮುನಿಮಹಾರಾಜರುಗಳು , ಭಟ್ಟಾರಕರುಗಳು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News