×
Ad

ಎನ್‌ಎಸ್‌ಯುಐ ‘ಬೆಹತರ್ ಭಾರತ್’ ಅಭಿಯಾನಕ್ಕೆ ಚಾಲನೆ

Update: 2019-02-13 23:11 IST

ಮಂಗಳೂರು, ಫೆ.13: ವಿದ್ಯಾರ್ಥಿ ಸಮುದಾಯವನ್ನು ಒಗ್ಗೂಡಿಸುವ ಸಲುವಾಗಿ ‘ಬೆಹತರ್ ಭಾರತ್’ (ಉತ್ತಮ ಭಾರತ) ಎಂಬ ಅಭಿಯಾನವನ್ನು ಎನ್‌ಎಸ್‌ಯುಐ ಹಮ್ಮಿಕೊಂಡಿದ್ದು, ಅದರ ಭಾಗವಾಗಿ ದ.ಕ. ಜಿಲ್ಲೆಯಲ್ಲಿ ಎನ್‌ಎಸ್‌ಯುಐನಿಂದ ಪೋಸ್ಟರ್ ಬಿಡುಗಡೆಗೊಳಿಸಲಾಯಿತು.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ವಿದ್ಯಾರ್ಥಿ ಸಮುದಾಯಕ್ಕೆ ಅಗತ್ಯವಿರುವ ವಿಚಾರಗಳನ್ನು ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ಅಳವಡಿಸುವ ನಿಟ್ಟಿನಲ್ಲಿ ವಿದ್ಯಾರ್ಥಿ ಸಮುದಾಯದಿಂದ ‘ಬೆಹತರ್ ಭಾರತ್’ ಮೂಲಕ ಅಭಿಪ್ರಾಯ ಸಂಗ್ರಹ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಎನ್‌ಎಸ್‌ಯುಐ ಜಿಲ್ಲಾಧ್ಯಕ್ಷ ಅಬ್ದುಲ್ಲಾ ಬಿನ್ನು ಮಾತನಾಡಿ, ‘ಬೆಹತರ್ ಭಾರತ್’ ಕಲ್ಪನೆಯು ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರ ಕನಸಾಗಿದ್ದು, ‘ವಿದ್ಯಾರ್ಥಿಗಳೇ ನಿಜವಾದ ರಾಷ್ಟ್ರ ನಿರ್ಮಾತೃಗಳಾಗಿದ್ದಾರೆ. ವಿಜ್ಞಾನ, ತಂತ್ರಜ್ಞಾನ, ಕಲೆ ಹಾಗೂ ಸಂಸ್ಕೃತಿ ಕ್ಷೇತ್ರದಲ್ಲಿ ದೇಶ ಮುನ್ನಡೆಯ ಬೇಕೇ ಹೊರತು, ಯುದ್ಧದ ಕಡೆಯಲ್ಲ ಎಂದರು.

ವಿಚಾರವಾದ ಹಾಗೂ ನ್ಯಾಯವನ್ನು ಅಪ್ಪಿಕೊಳ್ಳುವ ಮೂಲಕ ಸಮಾಜಗಳು ಮುಂದುವರಿಯುತ್ತವೆ. ಭಾರತದಲ್ಲಿನ ವಿದ್ಯಾರ್ಥಿಗಳು ಈ ಪ್ರಗತಿಪರ ಮುನ್ನಡೆಯ ಮುಂಚೂಣಿಯಲ್ಲಿದ್ದು, ಈ ಪ್ರಯುಕ್ತ ‘ಬೆಹತರ್ ಭಾರತ್’ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ಎನ್‌ಎಸ್‌ಯುಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸವಾದ್ ಸುಳ್ಯ ಮಾತನಾಡಿ, ದುಬಾರಿ ಶುಲ್ಕ ಹಾಗೂ ಸೀಮಿತ ಸೀಟುಗಳಿಗೆ ಕಠಿಣ ಸ್ಪರ್ಧೆಯ ಕುರಿತಾದ ಕಳವಳಗಳ ಬಗ್ಗೆ, ಮುಂಬರುವ ಲೋಕಸಭಾ ಚುನಾವಣೆಗೆ ವಿದ್ಯಾರ್ಥಿಗಳ ಸಮಸ್ಯೆಗಳ ಬಗ್ಗೆ ಚುನಾವಣಾ ಪ್ರಣಾಳಿಕ ಯಾವ ರೀತಿಯಲ್ಲಿ ಆದ್ಯತೆ ನೀಡಬೇಕು ಎಂಬ ಕುರಿತು ವಿದ್ಯಾರ್ಥಿಗಳು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲು ವೇದಿಕೆ ಕಲ್ಪಿಸುವುದಕ್ಕಾಗಿ ಕಾಂಗ್ರೆಸ್ ಪಕ್ಷ ‘ಬೆಹತರ್ ಭಾರತ್’ ಅಭಿಯಾನ ಪ್ರಾರಂಭಿಸಿದೆ. ವಿದ್ಯಾರ್ಥಿಗಳು ತಮ್ಮ ಕಳವಳ, ಆದ್ಯತೆಗಳನ್ನು ಈ ಮೂಲಕ ತಿಳಸುವುದರಿಂದ ಅದಕ್ಕೆ ಪೂರಕವಾಗಿ ಪ್ರಣಾಳಿಕೆ ರಚಿಸಲು ಸಾಧ್ಯವಾಗಲಿದೆ ಎಂದರು.

ಎನ್‌ಎಸ್‌ಯುಐ ಜಿಲ್ಲಾ ಉಪಾಧ್ಯಕ್ಷ ಶವದ್ ಗೂನಡ್ಕ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಹ್ಮಾನ್ ಔಫ್ ಹಾಗೂ ಸೂರಜ್, ಶ್ರೇಯಸ್ ಶೆಟ್ಟಿ, ನಿಖಿತ್ ರೈ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News