ಅಕ್ರಮ ಅಡಿಕೆ ಆಮದು ನಿರ್ಬಂಧ: ತುರ್ತು ಕ್ರಮಕ್ಕಾಗಿ ಕೇಂದ್ರಕ್ಕೆ ಕ್ಯಾಂಪ್ಕೊ ನಿಯೋಗದ ಮನವಿ
ಮಂಗಳೂರು, ಫೆ.13: ದೇಶದೊಳಕ್ಕೆ ತೆರಿಗೆ ತಪ್ಪಿಸಿ ಅಕ್ರಮವಾಗಿ ಅಡಿಕೆ ಆಮದಾಗುತ್ತಿರುವುದು ಅವ್ಯಾಹತವಾಗಿ ಮುಂದುವರಿದಿದ್ದು, ಮುಖ್ಯವಾಗಿ ಕಳಪೆ ಗುಣಮಟ್ಟದ ಮ್ಯಾನ್ಮಾರ್ (ಮೊದಲಿನ ಬರ್ಮಾ) ಅಡಿಕೆ ಇದೀಗ ಮಂಗಳೂರು ಮಾರುಕಟ್ಟೆಗೂ ನುಸುಳಿದ್ದು, ತುರ್ತು ಕ್ರಮಕ್ಕಾಗಿ ಕೇಂದ್ರ ಸರಕಾರಕ್ಕೆ ಕ್ಯಾಂಪ್ಕೊ ನಿಯೋಗ ಮನವಿ ಸಲ್ಲಿಸಿತು.
ಅಡಿಕೆ ಮಾರುಕಟ್ಟೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಬಲ್ಲ ಈ ವಂಚನೆಯ ವ್ಯವಹಾರವನ್ನು ಸಮರ್ಪಕವಾಗಿ ತಡೆಯುವುದು ಅತ್ಯವಶ್ಯವಾಗಿದೆ. ಇತ್ತೀಚೆಗೆ ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಹಾಗೂ ಸಾಂಖ್ಯಿಕ ಸಚಿವ ಡಿ.ವಿ. ಸದಾನಂದ ಗೌಡರ ನೇತೃತ್ವದ ಕ್ಯಾಂಪ್ಕೋ ನಿಯೋಗ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಿ, ವಿಷಯದ ಗಂಭೀರತೆಯನ್ನು ಮನವರಿಕೆ ಮಾಡಲಾಗಿದೆ.
‘ಅಕ್ರಮ ತಡೆಗೆ ಗಡಿಭದ್ರತೆ’: ಅಕ್ರಮ ಅಡಿಕೆ ನುಸುಳುವಿಕೆಯನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು, ದೇಶದ ಗಡಿಪ್ರದೇಶದಲ್ಲಿ ತಕ್ಷಣ ವ್ಯವಸ್ಥೆಯನ್ನು ಬಿಗಿಗೊಳಿಸುವುದಲ್ಲದೇ, ಈ ಅಕ್ರಮ ಹಾಗೂ ಕಳಪೆ ಗುಣಮಟ್ಟದ ಅಡಿಕೆ ವ್ಯವಹಾರದಲ್ಲಿ ತೊಡಗಿರುವ ವ್ಯಾಪಾರಸ್ಥರ ಮೇಲೆ ಸೂಕ್ತಕ್ರಮ ಕೈಗೊಳ್ಳು ವುದಾಗಿ ಕೇಂದ್ರ ಸಚಿವರು ಭರವಸೆ ನೀಡಿದ್ದಾರೆ.
ಈ ರೀತಿಯ ಗಡಿಭದ್ರತೆ ಹಾಗೂ ಕಟ್ಟುನಿಟ್ಟಿನ ಕ್ರಮ ಜರುಗಿಸುವುದರಿಂದ ದೇಶೀಯ ಮಾರುಕಟ್ಟೆಗೆ ಭದ್ರತೆ ಒದಗಿ ಬೆಲೆಯ ಸ್ಥಿರತೆಯೊಂದಿಗೆ ಬೆಳೆಗಾರರ ಹಿತರಕ್ಷಣೆಯಾಗುವುದೆಂದು ಕ್ಯಾಂಪ್ಕೊ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ತಿಳಿಸಿದ್ದಾರೆ.
ಸಮಸ್ತ ಬೆಳೆಗಾರರ ಪರವಾಗಿ, ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್, ವಾಣಿಜ್ಯ ಸಚಿವ ಸುರೇಶ್ ಪ್ರಭು ಮತ್ತು ಹಣಕಾಸು ಸಚಿವ ಪಿಯೂಷ್ ಗೋಯೆಲ್ ಅವರನ್ನು ಭೇಟಿ ಮಾಡಿದ ನಿಯೋಗದಲ್ಲಿ ಸಂಸದರಾದ ನಳಿನ್ ಕುಮಾರ್ ಕಟೀಲ್, ಶೋಭಾ ಕರಂದ್ಲಾಜೆ, ರಾಘವೇಂದ್ರ ಹಾಗೂ ಸಹಕಾರಿ ಸಂಸ್ಥೆಗಳ ಮುಖ್ಯಸ್ಥರು ಪಾಲ್ಗೊಂಡಿದ್ದರು.
ಕ್ಯಾಂಪ್ಕೊ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ, ಕ್ರಾಂಪ್ಸ್‌ನ ಅಧ್ಯಕ್ಷ ಎಚ್.ಎಸ್. ಮಂಜಪ್ಪ, ಮ್ಯಾಮ್ಕೋಸ್‌ನ ಉಪಾಧ್ಯಕ್ಷ ವೈ.ಸುಬ್ರಹ್ಮಣ್ಯ, ತುಮ್ಕೋಸ್ ಅಧ್ಯಕ್ಷ ಎಚ್.ಎಸ್. ಶಿವಕುಮಾರ್ ಹಾಗೂ ಟಿಎಸ್‌ಎಸ್‌ನ ವ್ಯವಸ್ಥಾಪಕ ನಿರ್ದೇಶಕ ರಮೇಶ್ ಹೆಗ್ಡೆ ನಿಯೋಗದ ಸದಸ್ಯರಾಗಿ ಸಹಕರಿಸಿದರು.