ಉಡುಪಿ ಜಿಪಂ: 503.24 ಕೋಟಿ ರೂ.ಕ್ರಿಯಾಯೋಜನೆಗೆ ಅನುಮೋದನೆ
ಉಡುಪಿ, ಫೆ.14: ಉಡುಪಿ ಜಿಪಂಗೆ 2018-19ನೇ ಸಾಲಿನಲ್ಲಿ ಹಂಚಿಕೆ ಯಾದ 503.24 ಕೋಟಿ ರೂ. ಮೊತ್ತದಲ್ಲಿ ವಿವಿಧ ಇಲಾಖೆಗಳಿಗೆ ಹಂಚಿಕೆ ಯಾದ ಮೊತ್ತಕ್ಕೆ ಸಿದ್ದಪಡಿಸಲಾಗಿರುವ ಕ್ರಿಯಾ ಯೋಜನೆಗೆ ಗುರುವಾರ ಮಣಿಪಾಲದಲ್ಲಿರುವ ಜಿಪಂ ಸಭಾಂಗಣದಲ್ಲಿ ಅಧ್ಯಕ್ಷ ದಿನಕರ ಬಾಬು ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅನುಮೋದನೆ ನೀಡಲಾಯಿತು.
ಜಿಪಂ ಕಾರ್ಯಕ್ರಮಗಳಿಗೆ 178.14 ಕೋಟಿ ರೂ., ತಾಪಂಗೆ 324.43 ಕೋಟಿ ರೂ. ಹಾಗೂ ಗ್ರಾಮಪಂಚಾಯತ್ ಕಾರ್ಯಕ್ರಮಗಳಿಗೆ 67ಲಕ್ಷ ರೂ. ಸೇರಿದಂತೆ ಒಟ್ಟು 503.24 ಕೋಟಿ ರೂ. ಮೊತ್ತದ ಕ್ರಿಯಾಯೋಜನೆಗೆ ಅನುೋದನೆ ನೀಡಲಾಯಿತು.
ಇವುಗಳಲ್ಲಿ ಜಿಲ್ಲೆಯ ಗ್ರಾಮೀಣ ರಸ್ತೆ ಅಭಿವೃದ್ದಿ ಯೋಜನೆಯಡಿ 850 ಲಕ್ಷ ರೂ.ಗಳಿಗೆ ಪಂಚಾಯತ್‌ರಾಜ್ ಇಂಜಿನಿಯರಿಂಗ್ ವಿಭಾಗದ ಮೂಲಕ, ಗ್ರಾಮೀಣ ರಸ್ತೆಗಳ ನಿರ್ವಹಣೆಗಾಗಿ 478 ಲಕ್ಷ ರೂ.ಗಳಿಗೆ, ಜಿಪಂ ಶಾಸನಬದ್ಧ ಅಭಿವೃಧ್ದಿ ಅನುದಾನವಾಗಿ 400 ಲಕ್ಷ ಹಾಗೂ ತಾಲೂಕು ಅಭಿವೃದ್ದಿ ಅನುದಾನವಾಗಿ ತಲಾ 100 ಲಕ್ಷ ರೂ.ಗಳಿಗೆ ಅನುಮೋದನೆ ದೊರೆಯಿತು.
ಅಲ್ಲದೇ ಶಿಕ್ಷಣ, ಕ್ರೀಡೆ ಮತ್ತು ಯುವ ಜನಸೇವೆಗಳು, ಆರೋಗ್ಯ, ಆಯುಷ್, ಸಮಾಜ ಕಲ್ಯಾಣ, ಐಟಿಡಿಪಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಕೃಷಿ, ತೋಟಗಾರಿಕೆ, ಪಶು ಸಂಗೋಪನೆ, ಮೀನುಗಾರಿಕೆ, ಸಾಮಾಜಿಕ ಅರಣ್ಯ, ಸಹಕಾರ, ಗ್ರಾಮಾಂತರ ಕೈಗಾರಿಕೆ, ರೇಷ್ಮೆ, ಕೈಮಗ್ಗ ಮತ್ತು ಜವಳಿ, ಕನ್ನಡ ಮತ್ತು ಸಂಸ್ಕೃತಿ, ಅಂಗವಿಕಲರ ಕಲ್ಯಾಣ, ಉದ್ಯೋಗ ಮತ್ತು ತರಬೇತಿ ಇಲಾಖೆಗಳ ಕಾರ್ಯಕ್ರಮಗಳಿಗೆ ಕ್ರಿಯಾಯೋಜನೆ ತಯಾರಿಸಿದ್ದು, ಇದಕ್ಕೂ ಸಭೆಯಲ್ಲಿ ಅನುಮೋದನೆ ನೀಡಲಾಯಿತು.
ಸರಕಾರ ತಳ ಹಂತದಿಂದ ಯೋಜನೆಗಳನ್ನು ರೂಪಿಸುವ ಚಿಂತನೆಯೊಂದಿಗೆ ‘ನಮ್ಮ ಗ್ರಾಮ ನಮ್ಮ ಯೋಜನೆ’ಯನ್ನು ರೂಪಿಸಿದ್ದು, ಈ ಯೋಜನೆಯಡಿ ಪ್ರತೀ ಗ್ರಾಪಂಗಳಲ್ಲಿ ಗ್ರಾಮಸಭೆಗಳನ್ನು ಕರೆದು, ಸ್ಥಳೀಯರ ಬೇಡಿಕೆಗಳಿಗೆ ಅನುಗುಣವಾಗಿ ನಮ್ಮ ಗ್ರಾಮ ನಮ್ಮ ಯೋಜನೆ(ಜಿಪಿಡಿಪಿ)ಯನ್ನು ರೂಪಿಸ ಬೇಕಾಗಿದೆ.
ಈ ವರ್ಷದಿಂದ ಎಲ್ಲಾ ಕ್ರಿಯಾ ಯೋಜನೆಗಳು ಜಿಪಿಡಿಪಿಯಲ್ಲಿ ಕಾರ್ಯ ನಿರ್ವಹಿಸುತ್ತವೆ. ಜಿಪಿಡಿಪಿಯನ್ನು ತಂತ್ರಾಂಶ ಆಧಾರಿತ ಯೋಜನೆಯನ್ನಾಗಿ ರೂಪಿಸಲಾಗಿದ್ದು, ವಿವಿಧ ಹಂತಗಳಲ್ಲಿ ಯೋಜನೆ ಕಾರ್ಯ ನಿರ್ವಹಿಸಲಿದೆ. ಇದರಿಂದ ಯಾವುದೇ ಯೋಜನೆ ಲೋಪವಿಲ್ಲದೇ ನೇರವಾಗಿ ಫಲಾನುಭವಿಗಳನ್ನು ತಲುಪುತ್ತದೆ. ವಿವಿಧ ಅಭಿವೃದ್ಧಿ ಯೋಜನೆಗಳ ಪ್ರಸ್ತಾವನೆ ಯನ್ನು ಕ್ರೋಡೀಕರಿಸಿ ತಂತ್ರಾಂಶದಲ್ಲಿ ಅಳವಡಿಸಲಾಗುತ್ತದೆ.
2019-20ನೇ ಸಾಲಿಗಾಗಿ 545.22 ಕೋಟಿ ರೂ.ಗಳ ವಾರ್ಷಿಕ ಕರಡು ಯೋಜನೆಯ ಬೇಡಿಕೆಯನ್ನು ಸರಕಾರಕ್ಕೆ ಸಲ್ಲಿಸಲು ನಿರ್ಧರಿಸಲಾಯಿತು.
ಸಭೆಯಲ್ಲಿ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಶಶಿಕಾಂತ್ ಪಡುಬಿದ್ರೆ, ಸಿಇಓ ಸಿಂಧೂ ಬಿ. ರೂಪೇಶ್, ಉಪಕಾರ್ಯದರ್ಶಿ ನಾಗೇಶ್ ರಾಯ್ಕರ್, ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್ ಉಪಸ್ಥಿತರಿದ್ದರು.