ಮೆಕ್ಸಿಕೋ: ಮಿಸ್ಸೆಸ್ ಯುನಿವರ್ಸಲ್ ಸ್ಪರ್ಧೆಯಲ್ಲಿ ಉಡುಪಿಯ ಪದ್ಮ ಗಡಿಯಾರ್

Update: 2019-02-14 14:34 GMT

ಉಡುಪಿ, ಫೆ.14: ಆಸ್ಟ್ರೇಲಿಯಾದ ಬ್ರಿಸ್ಬೇನ್‌ನಲ್ಲಿ ಕಳೆದ ಅಕ್ಟೋಬರ್ ತಿಂಗಳಲ್ಲಿ ನಡೆದ ಮಿಸ್ಸೆಸ್ ಸೌತ್ ಇಂಡಿಯಾ ಯುನಿವರ್ಸಲ್ ಸೌಂದರ್ಯ ಸ್ಪರ್ಧೆಯಲ್ಲಿ ಉಡುಪಿಯ ಮೂಲದ ದಂತ ವೈದ್ಯೆ ಡಾ.ಪದ್ಮ ಗಡಿಯಾರ್(34) ವಿಜೇತರಾಗುವ ಮೂಲಕ ಆಗಸ್ಟ್‌ನಲ್ಲಿ ಮೆಕ್ಸಿಕೋದಲ್ಲಿ ನಡೆಯುವ ಮಿಸ್ಸೆಸ್ ಯುನಿವರ್ಸಲ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.

ಮೂಲತಃ ಇಂದ್ರಾಳಿ ಹಾಗೂ ಪ್ರಸ್ತುತ ತೆಂಕಪೇಟೆ ನಿವಾಸಿಯಾಗಿರುವ ಉದ್ಯಮಿ ಅರುಣ್ ಶೆಣೈ ಹಾಗೂ ಅರ್ಚನಾ ಶೆಣೈ ದಂಪತಿಯ ಇಬ್ಬರು ಹೆಣ್ಣು ಮಕ್ಕಳಲ್ಲಿ ಹಿರಿಯರಾಗಿರುವ ಪದ್ಮ ಗಡಿಯಾರ್, ಕಳೆದ 11 ವರ್ಷಗಳಿಂದ ಆಸ್ಟ್ರೇಲಿಯಾದ ಬ್ರಿಸ್ಬೇನ್‌ನಲ್ಲಿ ಪತಿ, ಮೂಲತಃ ಮುಂಬೈಯ ಸನಯ್ ಗಡಿ ಯಾರ್ ಹಾಗೂ ಮಕ್ಕಳಾದ ಸಮ(7) ಮತ್ತು ಶರೂನ್(4) ಅವರೊಂದಿಗೆ ವಾಸವಾಗಿದ್ದಾರೆ.

ಇಂದ್ರಾಳಿಯಲ್ಲಿ ಪ್ರಾಥಮಿಕ, ಉಡುಪಿ ಸೈಂಟ್ ಮೇರಿಸ್‌ನಲ್ಲಿ ಪ್ರೌಢ ಹಾಗೂ ಎಂಜಿಎಂನಲ್ಲಿ ಪಿಯುಸಿ ಶಿಕ್ಷಣ ಮುಗಿಸಿದ ಅವರು ಮಂಗಳೂರಿನ ಯೆನಪೋಯ ಕಾಲೇಜಿನಲ್ಲಿ ದಂತ ವೈದ್ಯಕೀಯ ಶಿಕ್ಷಣ ಪೂರೈಸಿದ್ದರು. ಬ್ರಿಸ್ಪೇನ್ ನಲ್ಲಿ ಸನಯ್ ಗಡಿಯಾರ್ ವೈದ್ಯರಾಗಿ ಹಾಗೂ ಪದ್ಮ ದಂತವೈದ್ಯೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪದ್ಮ ಅವರ ಸಹೋದರಿ ಸಂಧ್ಯಾ ಕೂಡ ಪತಿ ಜೊತೆ ಆಸ್ಟ್ರೇಲಿಯಾದಲ್ಲಿ ವಾಸವಾಗಿದ್ದಾರೆ.

2018ರ ಅಕ್ಟೋಬರ್‌ನಲ್ಲಿ ಬ್ರಿಸ್ಬೇನ್‌ನಲ್ಲಿ ನಡೆದ ಮಿಸ್ಸೆಸ್ ಸೌತ್ ಇಂಡಿಯಾ ಯುನಿವರ್ಸೆಲ್ ಸ್ಪರ್ಧೆಯಲ್ಲಿ ದಕ್ಷಿಣ ಭಾರತದ ಪದ್ಮ ಸಹಿತ ಕರ್ನಾಟಕ ಇಬ್ಬರು, ಕೇರಳ, ಆಂಧ್ರ, ತಮಿಳುನಾಡಿನ ಒಟ್ಟು 8-10 ಸ್ಪರ್ಧಿಗಳು ಭಾಗ ವಹಿಸಿದ್ದರು. ಇದರಲ್ಲಿ ಕಿರೀಟವನ್ನು ತನ್ನ ಮುಡಿಗೇರಿಸಿಕೊಂಡಿರುವ ಪದ್ಮ, 2019ರ ಆ.20ರಂದು ಮೆಕ್ಸಿಕೋದಲ್ಲಿ ನಡೆಯುವ ಮಿಸ್ಸೆಸ್ ಯುನಿವರ್ಸಲ್ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ಈ ಸ್ಪರ್ಧೆಯಲ್ಲಿ ಜಗತ್ತಿನ ಸುಮಾರು 25 ದೇಶಗಳ ಸ್ಪರ್ಧಿಗಳು ಭಾಗವಹಿ ಸುವ ನಿರೀಕ್ಷೆ ಇದ್ದು, ಭಾರತವನ್ನು ಇವರೊಬ್ಬರೇ ಪ್ರತಿನಿಧಿಸಲಿದ್ದಾರೆ. ಬಾಲ್ಯದಲ್ಲೇ ಮಾಡೆಲ್ ಆಗುವ ಕನಸು ಕಂಡಿರುವ ಪದ್ಮ, ಮಿಸ್ಸೆಸ್ ಯುನಿ ವರ್ಸಲ್‌ನಲ್ಲಿ ಜಯಶಾಲಿಯಾಗಲು ಈಗಾಗಲೇ ಎಲ್ಲ ರೀತಿಯ ಸಿದ್ಧತೆಗಳನ್ನು ಆರಂಭಿಸಿದ್ದಾರೆ. ಇವರು ದಂತ ವೈದ್ಯಕೀಯಕ್ಕೆ ಸಂಬಂಧಿಸಿ ಬರೆದ ‘ಬೈ ಬಿಲ್ಡ್ ಸೆಲ್’ ಪುಸ್ತಕವು ಮಾರ್ಚ್ ತಿಂಗಳಲ್ಲಿ ಬಿಡುಗಡೆಯಾಗಲಿದೆ.

ಇದೊಂದು ಸ್ಪರ್ಧೆಗಿಂತ ಒಳ್ಳೆಯ ಅನುಭವವಾಗಿದೆ. ಬಾಲ್ಯದಲ್ಲಿಯೇ ಮಾಡೆಲಿಂಗ್ ಆಗುವ ಕನಸು ಕಂಡಿದ್ದೆ. ಈಗ ಈ ಸ್ಪರ್ಧೆಯಲ್ಲಿ ವಿಜೇತೆಯಾದ ಬಳಿಕ ಹಲವು ಜಾಹಿರಾತು ಏಜೆನ್ಸಿಗಳು ನನ್ನನ್ನು ಸಂಪರ್ಕಿಸಿವೆ. ನನ್ನ ಎಲ್ಲ ಪ್ರಯತ್ನಗಳಿಗೂ ಪತಿ ಸಂಪೂರ್ಣ ಬೆಂಬಲವಾಗಿ ನಿಂತಿದ್ದಾರೆ. ಓದುವುದು ಮತ್ತು ಕ್ರೀಡೆ ನನ್ನ ಪ್ರಮುಖ ಹವ್ಯಾಸ.

-ಪದ್ಮ ಗಡಿಯಾರ್, ಮಿಸ್ಸೆಸ್ ಸೌತ್ ಇಂಡಿಯಾ ವಿಜೇತೆ

ಮಗಳ ಈ ಸಾಧನೆ ನೋಡಿ ಬಹಳ ಖುಷಿಯಾಗುತ್ತಿದೆ. ತಂದೆ ತಾಯಿ ಮಕ್ಕಳ ಖುಷಿಯನ್ನೇ ಇಷ್ಟ ಪಡುತ್ತಾರೆ. ಆದುದರಿಂದ ಅವರ ಎಲ್ಲ ರೀತಿಯ ಖುಷಿಗೆ ನಾವು ಪ್ರೋತ್ಸಾಹವಾಗಿ ನಿಲ್ಲುತ್ತೇವೆ. ಮುಂದಿನ ಸ್ಪರ್ಧೆಯಲ್ಲಿ ವಿಜೇತರಾಗಿ ಬರಲಿ ಎಂಬುದೇ ನಮ್ಮ ಹಾರೈಕೆಯಾಗಿದೆ.

-ಅರ್ಚನಾ ಶೆಣೈ, ಪದ್ಮ ಅವರ ತಾಯಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News