ಕರವೇಯಿಂದ ವಿಶಿಷ್ಟ ರೀತಿಯಲ್ಲಿ ಪ್ರೇಮಿಗಳ ದಿನಾಚರಣೆ

Update: 2019-02-14 14:45 GMT

ಉಡುಪಿ, ಫೆ.14: ಕರ್ನಾಟಕ ರಕ್ಷಣಾ ವೇದಿಕೆಯ (ಪ್ರವೀಣ್ ಶೆಟ್ಟಿ ಬಣ) ಉಡುಪಿ ಜಿಲ್ಲಾ ಘಟಕದ ವತಿಯಿಂದ ಪ್ರೇಮಿಗಳ ದಿನವನ್ನು ಗುರುವಾರ ಬೀಡಿನಗುಡ್ಡೆಯ ನಿರಾಶ್ರಿತರ ಕೇಂದ್ರದಲ್ಲಿ ನಿರ್ಗತಿಕರ ಆರೈಕೆ ಮಾಡಿ ಅವ ರೊಂದಿಗೆ ಊಟ ಮಾಡುವ ಮೂಲಕ ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು.

ರಸ್ತೆಬದಿ, ಬಸ್ ನಿಲ್ದಾಣಗಳಲ್ಲಿ ಅಲೆದಾಡುತ್ತಿದ್ದ ನಿರ್ಗತಿಕರು ಹಾಗೂ ಮಾನಸಿಕ ಅಸ್ವಸ್ಥರನ್ನು ನಿರಾಶ್ರಿತರ ಕೇಂದ್ರಕ್ಕೆ ಕರೆತಂದು ಅವರಿಗೆ ಸ್ನಾನ ಮಾಡಿ ಶುಚಿಗೊಳಿಸಿ ಹೊಸ ಬಟ್ಟೆಗಳನ್ನು ನೀಡಲಾಯಿತು. ಕರವೇ ಜಿಲ್ಲಾಧ್ಯಕ್ಷ ಅನ್ಸಾರ್ ಅಹ್ಮದ್ ಸ್ವತಃ ನಿರ್ಗತಿಕರ ತಲೆ ಕೂದಲನ್ನು ಕತ್ತರಿಸಿ, ಗಡ್ಡ ಸೇವಿಂಗ್ ಮಾಡಿ ಅವರಿಗೆ ಸ್ನಾನ ಮಾಡಿಸಿದರು.

ಪ್ರೇಮಿಗಳ ದಿನ ಎಂಬುವುದು ಪಾಶ್ಚಿಮಾತ್ಯ ಸಂಸ್ಕೃತಿಯಾದರೂ ಭಾರತದಲ್ಲಿ ಅದನ್ನು ನಿರ್ಗತಿಕರು ಹಾಗೂ ಅನಾಥರನ್ನು ಪ್ರೀತಿಸುವ ದಿನವನ್ನಾಗಿ ಆಚರಿಸಬೇಕು. ಅದಕ್ಕಾಗಿ ಈ ರೀತಿಯ ವಿಶಿಷ್ಟ ರೀತಿಯ ಕಾರ್ಯಕ್ರಮವನ್ನು ಹಮ್ಮಿ ಕೊಳ್ಳಲಾಯಿತು ಎಂದು ಅನ್ಸಾರ್ ಅಹ್ಮದ್ ತಿಳಿಸಿದರು.

ಈ ಸಂದರ್ಭದಲ್ಲಿ ಕರವೇ ಪದಾಧಿಕಾರಿಗಳಾದ ಸುಧೀರ್ ಪೂಜಾರಿ, ವಾಸೀಂ ಅಹ್ಮದ್ ಉಡುಪಿ, ಸಫನ್ ಉಡುಪಿ, ಪ್ರವೀಣ್ ಬಾರ್ಕೂರು ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News