ಪ್ರಚಾರಕ್ಕಾಗಿ 3,044 ಕೋ.ರೂ.ವೆಚ್ಚ ಮಾಡಿದ ಕೇಂದ್ರ ಸರಕಾರ !

Update: 2019-02-14 15:05 GMT

ಹೊಸದಿಲ್ಲಿ,ಫೆ.14: ಕೇಂದ್ರ ಸರಕಾರವು ಕಳೆದ ಐದು ವರ್ಷಗಳಲ್ಲಿ ತನ್ನ ಪ್ರಚಾರಕ್ಕಾಗಿ 3,044 ಕೋ.ರೂ.ಗಳನ್ನು ವೆಚ್ಚ ಮಾಡಿದ್ದು,ಈ ಪೈಕಿ 2,374 ಕೋ.ರೂ.ಗಳನ್ನು ವಿದ್ಯುನ್ಮಾನ ಮಾಧ್ಯಮಗಳು ಮತ್ತು 670 ಕೋ.ರೂ.ಗಳನ್ನು ಹೊರಾಂಗಣ ಪ್ರಚಾರಕ್ಕಾಗಿ ವ್ಯಯಿಸಲಾಗಿದೆ ಎಂದು ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಅಧೀನದ ಬ್ಯೂರೊ ಆಫ್ ಔಟ್‌ರೀಚ್ ಆ್ಯಂಡ ಕಮ್ಯುನಿಕೇಷನ್(ಬಿಒಸಿ) ಆರ್‌ಟಿಐ ಉತ್ತರದಲ್ಲಿ ತಿಳಿಸಿದೆ.

ಬಿಒಸಿಯ ಮೂಲಕ ವಿವಿಧ ಸಚಿವಾಲಯಗಳು,ಇಲಾಖೆಗಳು,ಸರಕಾರಿ ಸ್ವಾಮ್ಯದ ಉದ್ಯಮಗಳ ಪರವಾಗಿ ನೇಮಕಾತಿ ನೋಟಿಸ್‌ಗಳು, ಟೆಂಡರ್‌ಗಳು, ಇತರ ನೋಟಿಸ್‌ಗಳು ಮತ್ತು ವಿವಿಧ ಯೋಜನೆಗಳ ಜಾಹೀರಾತುಗಳಂತಹ ವಿವಿಧ ವರ್ಗಗಳಲ್ಲಿ ಪ್ರಚಾರಕ್ಕಾಗಿ ಆಕಾಶವಾಣಿ, ದೂರದರ್ಶನ, ಅಂತರ್ಜಾಲ, ರೇಡಿಯೊ, ಎಸ್‌ಎಂಎಸ್, ಥಿಯೇಟರ್, ಟಿವಿ ಇತ್ಯಾದಿ ವಿದ್ಯುನ್ಮಾನ ಮಾಧ್ಯಮಗಳಿಗಾಗಿ 2014 ಎಪ್ರಿಲ್‌ನಿಂದ ಡಿಸೆಂಬರ್ 2018ರ ನಡುವಿನ ಅವಧಿಯಲ್ಲಿ 2,374.46 ಕೋ.ರೂ.ಗಳನ್ನು ವ್ಯಯಿಸಲಾಗಿದೆ ಎಂದು ಉತ್ತರದಲ್ಲಿ ತಿಳಿಸಲಾಗಿದೆ.

ಸುಮಾರು 670 ಕೋ.ರೂ.ಗಳನ್ನು 2014 ಮತ್ತು ನ.26,2018ರ ನಡುವಿನ ಅವಧಿಯಲ್ಲಿ ಹೊರಾಂಗಣ ಪ್ರಚಾರಕ್ಕಾಗಿ ವ್ಯಯಿಸಲಾಗಿದೆ ಎಂದು ಅದು ತಿಳಿಸಿದೆಯಾದರೂ,ಹೊರಾಂಗಣ ಪ್ರಚಾರವು ಏನೇನೆಲ್ಲವನ್ನು ಒಳಗೊಂಡಿತ್ತು ಎಂಬ ವಿವರಗಳನ್ನು ನೀಡಿಲ್ಲ.

ಮುದ್ರಣ,ವಿದ್ಯುನ್ಮಾನ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಮಾಡಿರುವ ವೆಚ್ಚ ಸೇರಿದಂತೆ 2014,ಜೂ.1ರಿಂದ ಕೇಂದ್ರ ಸರಕಾರದ ಪ್ರಚಾರಕ್ಕೆ ಸಂಬಂಧಿಸಿದಂತೆ ಎಲ್ಲ ಜಾಹೀರಾತುಗಳಿಗಾಗಿ ವ್ಯಯಿಸಲಾಗಿರುವ ಹಣದ ವಿವರಗಳನ್ನು ನೀಡುವಂತೆ ಆರ್‌ ಟಿಐ ಅರ್ಜಿದಾರರಾದ ಅಧಿಕಾರಿ ಸಂಜೀವ ಚತುರ್ವೇದಿ ಅವರು ಕೋರಿದ್ದರು.

ವಿದ್ಯುನ್ಮಾನ ಮಾಧ್ಯಮಗಳಲ್ಲಿ ಮತ್ತು ಹೊರಾಂಗಣ ಪ್ರಚಾರಕ್ಕಾಗಿ ವ್ಯಯಿಸಲಾಗಿರುವ ಮೊತ್ತದ ವಿವರಗಳನ್ನು ಬಿಒಸಿ ಒದಗಿಸಿದೆಯಾದರೂ,2014ರಿಂದ ವೃತ್ತಪತ್ರಿಕೆಗಳಿಗೆ ಪಾವತಿಸಿರುವ ಮೊತ್ತವನ್ನು ಒಳಗೊಂಡ ಸಿಡಿಯನ್ನು ಮಾತ್ರ ನೀಡಿದೆ. ವರ್ಷವಾರು ಅಥವಾ ಕಳೆದ ಐದು ವರ್ಷಗಳ ನಿಖರವಾದ ಒಟ್ಟು ಮೊತ್ತಗಳನ್ನು ಅದು ಉಲ್ಲೇಖಿಸಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News