2 ದಶಕಗಳಲ್ಲೇ ಅತ್ಯಂತ ಭೀಕರ ಭಯೋತ್ಪಾದಕ ದಾಳಿ: 40 ಸೈನಿಕರು ಹುತಾತ್ಮ

Update: 2019-02-14 16:04 GMT

ಹೊಸದಿಲ್ಲಿ, ಫೆ.14: ಜಮ್ಮು-ಶ್ರೀನಗರ ಹೆದ್ದಾರಿಯಲ್ಲಿ ಇಂದು ನಡೆದ ಭಯೋತ್ಪಾದಕ ದಾಳಿ 2 ದಶಕಗಳಲ್ಲೇ ಅತ್ಯಂತ ಭೀಕರ ಭಯೋತ್ಪಾದಕ ದಾಳಿಯಾಗಿದ್ದು, ಹುತಾತ್ಮರಾದ ಸೈನಿಕರ ಸಂಖ್ಯೆ 40ಕ್ಕೇರಿದೆ.

 ಸುಮಾರು 350 ಕೆ.ಜಿ. ತೂಕದ ಸ್ಫೋಟಕಗಳನ್ನು ಹೊಂದಿದ್ದ ಸ್ಕಾರ್ಪಿಯೋ ಕಾರು ಸಿಆರ್ ಪಿಎಫ್ ಸಿಬ್ಬಂದಿಯಿದ್ದ ಬಸ್ ಗೆ ಢಿಕ್ಕಿ ಹೊಡೆದು ಸ್ಫೋಟಗೊಂಡಿತ್ತು. ಈ ಭೀಕರ ದಾಳಿಯ ಬಗ್ಗೆ ಪ್ರತಿಕ್ರಿಯಿಸಿರುವ ನ್ಯಾಶನಲ್ ಕಾನ್ಫರೆನ್ಸ್ ನಾಯಕ ಒಮರ್ ಅಬ್ದುಲ್ಲಾ, “ಭಯಾನಕ ಸುದ್ದಿ ಕೇಳಿ ಬರುತ್ತಿದೆ. ಐಇಡಿ ಸ್ಫೋಟದಲ್ಲಿ ಹಲವು ಸಿಆರ್ ಪಿಎಫ್ ಸೈನಿಕರು ಮೃತಪಟ್ಟಿದ್ದಾರೆ ಮತ್ತು ಗಾಯಗೊಂಡಿದ್ದಾರೆ. ಈ ದಾಳಿಯನ್ನು ನಾನು ಖಂಡಿಸುತ್ತೇನೆ” ಎಂದು ಟ್ವೀಟ್ ಮಾಡಿದ್ದಾರೆ.

“ಸಿಆರ್ ಪಿಎಫ್ ವಾಹನದ ಮೇಲೆ ನಡೆದ ಹೇಯ ದಾಳಿಯಿಂದ ನಾನು ಆಘಾತಗೊಂಡಿದ್ದೇನೆ. ಹಲವು ಸಿಆರ್ ಪಿಎಫ್ ಸೈನಿಕರು ಹುತಾತ್ಮರಾಗಿದ್ದು, ಹಲವರು ಗಾಯಗೊಂಡಿದ್ದಾರೆ. ನಮ್ಮ ಹುತಾತ್ಮರ ಕುಟುಂಬಕ್ಕೆ ನನ್ನ ಸಂತಾಪಗಳು. ಗಾಯಗೊಂಡಿರುವವರು ಶೀಘ್ರವಾಗಿ ಚೇತರಿಸಲಿ” ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, “ಪುಲ್ವಾಮದಲ್ಲಿ ಇಂದು ಸಿಆರ್ ಪಿಎಫ್ ಸೈನಿಕರು ಹುತಾತ್ಮರಾಗಿರುವ ಸುದ್ದಿ ಕೇಳಿ ಬೇಸರವಾಗಿದೆ. ನಮ್ಮ ವೀರ ಸೈನಿಕರಿಗೆ ನಾವು ಸೆಲ್ಯೂಟ್ ಹೊಡೆಯುತ್ತೇವೆ ಹಾಗು ಅವರ ಕುಟುಂಬದ ಜೊತೆಗಿದ್ದೇವೆ” ಎಂದಿದ್ದಾರೆ.

“ಪುಲ್ವಾಮದಲ್ಲಿ ನಮ್ಮ ಸೈನಿಕರ ಮೇಲೆ ನಡೆದ ದಾಳಿಯಿಂದ ಅತೀವ ನೋವಾಗಿದೆ. ಕುಟುಂಬಸ್ಥರಿಗೆ ನಾನು ಸಂತಾಪಗಳನ್ನು ತಿಳಿಸುತ್ತೇನೆ. ನಮ್ಮ ಸೇನೆಯು ಇಂತಹ ಶಕ್ತಿಗಳ ವಿರುದ್ಧ ಹೋರಾಡಲಿದೆ ಮತ್ತು ಅವರನ್ನು ಸೋಲಿಸಲಿದೆ” ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News