ಫೆ.16: ಅಲೋಶಿಯಸ್ ಕಾಲೇಜಿನ ನವೀಕೃತ ವಸ್ತು ಸಂಗ್ರಹಾಲಯ ಉದ್ಘಾಟನೆ
ಮಂಗಳೂರು, ಫೆ.14: ಸಂತ ಅಲೋಶಿಯಸ್ ಕಾಲೇಜಿನ ನವೀಕರಿಸಲಾದ ಮತ್ತು ಸ್ಥಳಾಂತರಗೊಂಡ ವಸ್ತು ಸಂಗ್ರಹಾಲಯದ ಉದ್ಘಾಟನಾ ಕಾರ್ಯಕ್ರಮವು ಫೆ.16ರಂದು ಸಂಜೆ 5 ಗಂಟೆಗೆ ನೆರವೇರಲಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂತ ಅಲೋಶಿಯಸ್ ಕಾಲೇಜಿನ ರೆ.ಡಾ.ಡೈನಿಶಿಯಸ್ ವಾಝ್, ಇಟಲಿಯ ಜೆಸ್ವಿಟ್ ಫಾ.ಚಿಯಾಪಿ 1913ರಲ್ಲಿ ಈ ಮ್ಯೂಸಿಯಂನ್ನು ಆರಂಭಿಸಿದ್ದರು. ಖನಿಜಗಳು, ಗಿಡಮೂಲಿಕೆಗಳು ಮತ್ತು ರೋಮನ್ ನಾಣ್ಯಗಳ ಸಂಗ್ರಹ ಮತ್ತು ಕೊಲೆಜಿಒ ವಿಏಟ ಇಟಲಿಯ ಉಡುಗೊರೆಗಳಿಂದ ಮ್ಯೂಸಿಯಂ ಆರಂಭಗೊಂಡಿತ್ತು. ಇದೀಗ ಮ್ಯೂಸಿಯಂ ಕೆಂಪುಕಟ್ಟಡದಿಂದ ಚಾಪೆಲ್‌ನ ಸಮೀಪ ಇರುವ ಸ್ಥಳಕ್ಕೆ ಸ್ಥಳಾಂತರಗೊಳ್ಳುತ್ತಿದೆ. ಇದರಿಂದ ಚಾಪೆಲ್‌ಗೆ ಭೇಟಿ ನೀಡುವ ಸಂದರ್ಶಕರಿಗೆ ಅನುಕೂಲವಾಗಲಿದೆ ಎಂದು ವಿವರಿಸಿದರು.
ಐದು ಅಡ್ಡ ಸಭಾಂಗಣದಿಂದ ಈ ವಸ್ತು ಸಂಗ್ರಹಾಲಯದಲ್ಲಿ ಒಂದು ಮುಖ್ಯ ಸಭಾಂಗಣವಿದೆ. ಈ ಸಭಾಂಗಣ ನವಶಿಲಾಯುಗದ ಕಲ್ಲಿನಿಂದ ಮಾಡಿದ ಕೊಡಲಿ, ಬರ್ಲಿನ್ ಗೋಡೆಯ ತುಣುಕುಗಳು, ಹೋಲಿ ಲ್ಯಾಂಡಿನಿಂದ ತಂದ ವಸ್ತುಗಳು, ಉತ್ತರ ಧ್ರುವದ ಅತ್ಯಂತ ಶೀತಪ್ರದೇಶದಿಂದ ತಂದ ಬಂಡೆಯ ಚೂರು, ಮೊದಲಾದ ವಸ್ತುಗಳಿವೆ ಎಂದರು.
ಹಿತ್ತಾಳೆ ಮತ್ತು ಕಂಚಿನಿಂದ ತಯಾರಿಸಲಾದ ಅನೇಕ ವಸ್ತುಗಳು, ದೀಪಗಳ ಸಂಗ್ರಹ, ಆಫ್ರಿಕದ ಕಲಾಕೃತಿಗಳು, ಪುರಾತನ ಪಿಂಗಾಣಿ ಹೂದಾನಿಗಳು, ಹಳೆ ಕಾಲದ ಸರಳ ತಂತ್ರಜ್ಞಾನದ ಕ್ಯಾಮೆರಾದಿಂದ ಹಿಡಿದು ಆಧುನಿಕ ವಿದ್ಯುನ್ಮಾನ ಯುಗದ ಹೊಸ ಕ್ಯಾಮೆರಾಗಳ ಸಂಗ್ರಹವಿದೆ. ಸುಮಾರು 2,000ದಷ್ಟು ಖನಿಜಗಳ ಮಾದರಿಗಳು ಮತ್ತು ಪಳೆಯುಳಿಕೆಗಳಿವೆ. ಜೊತೆಗೆ ಅಂಚೆಚೀಟಿಗಳು ಮತ್ತು ವಿಭಿನ್ನ ರಾಷ್ಟ್ರಗಳ ಕರೆನ್ಸಿ ನೋಟುಗಳಿವೆ ಎಂದು ಅವರು ವಿವರಿಸಿದರು.
ಮಂಗಳೂರಿನ ವಿದ್ಯುತ್ ಸರಬರಾಜು ಆಗುವ ಮೊದಲು ಕಂಪ್ಯೂಟರ್ ಇದೆ. ಸಾಕಷ್ಟು ಸಂಖ್ಯೆಯಲ್ಲಿ ರೇಡಿಯೊ ಸೆಟ್‌ಗಳಿವೆ. ಗ್ರಾಮಫೋನ್ ಮತ್ತು ಟಿವಿಗಳಿವೆ. ಅಡ್ಡಗೋಡೆಗಳಲ್ಲಿ ಅಸ್ಥಿಪಂಜರಗಳನ್ನು ನೇತಾಡಿಸಲಾಗಿದೆ. ಕಲ್ಲಿಕೋಟೆಯ ಹತ್ತಿರದ ಬಿಲಯಪಟಮ್‌ನಿಂದ ತಂದ ತಿಮಿಂಗಿಲವೊಂದರ ಅಸ್ಥಿಪಂಜರವೂ ಇಲ್ಲಿದೆ. ಮುಖ್ಯ ಸಭಾಂಗಣದ ಇನ್ನೊಂದು ಬದಿಯಲ್ಲಿ ಮಂಗಳೂರಿಗೆ ಬಂದ ಮೊದಲ ಕಾರು ಇದೆ. ಹಿಂದಿನ ಕಾಲದಲ್ಲಿ ಗಾಡಿಗಳು ಮತ್ತು ಕುದುರೆಯ ಮೇಲೆ ಕುಳಿತು ಪ್ರಯಾಣ ಮಾಡಲಾಗುತ್ತಿತ್ತು. ಹಾಗೆಯೆ ಕುದುರೆಗಳನ್ನು ಹೈಸ್ಕೂಲ್ ಕಟ್ಟಡದ ಮುಂದೆ ಕಟ್ಟಲಾಗುತ್ತಿತ್ತು. ಅಂಥ ಒಂದು ಕಲ್ಲು ಈ ಮ್ಯೂಸಿಯಂನಲ್ಲಿದೆ ಎಂದು ತಿಳಿಸಿದರು.
ಅಪರೂಪದ ಪುಸ್ತಕಗಳು ಮತ್ತು ಹಸ್ತಪ್ರತಿಗಳು, ತಾಳೆಗರಿಯಲ್ಲಿನ ಹಸ್ತಪ್ರತಿಗಳು, ರೋಮನ್ ಕ್ಯಾಥೋಲಿಕ್ ಪ್ರಾರ್ಥನೆ ಮತ್ತು ವ್ರತಪುಸ್ತಕಗಳು, ಕ್ರೈಸ್ತ ವಿಧಿ ಆಚರಣೆಗಳ ಸಂದರ್ಭಗಳಲ್ಲಿ ತೊಡಲಾಗುವ ಉಡುಪುಗಳು, ಹಿಬ್ರೂ ಶಾಸನಗಳ ಕರಡುಪ್ರತಿ ಹಾಗೆಯೇ ಹವಾನಿಯಂತ್ರಿತ ವಾತಾವರಣದಲ್ಲಿ ಇಡಬೇಕಾದ ಇನ್ನಿತರ ಅನೇಕ ವಸ್ತುಗಳನ್ನು ಈ ವಸ್ತು ಸಂಗ್ರಹಾಲಯದಲ್ಲಿ ಇರಿಸಲಾಗಿದೆ ಎಂದರು.
19ನೇ ಶತಮಾನದಲ್ಲಿ ಈ ಭಾಗದಲ್ಲಿ ಬಳಸಲಾಗುತ್ತಿದ್ದ ಗೃಹೋಪಕರಣಗಳು, ಅಡುಗೆ ಪಾತ್ರೆಗಳು, ಕೃಷಿ ಸಂಬಂಧಿತ ಉಪಕರಣಗಳ ಸಂಗ್ರಹವಿದೆ. ಅಡ್ಡಗೋಡೆಗಳ ಮೇಲೆ 1902ರ ಪೂರ್ವದ ಗತಕಾಲದ ಅನೇಕ ಛಾಯಾಚಿತ್ರಗಳು ಮತ್ತು ಸಂತ ಅಲೋಶಿಯಸ್ ಕಾಲೇಜಿನಲ್ಲಿ ಆಚರಿಸಲಾದ ಮೊದಲ ಸ್ವಾತಂತ್ರೋತ್ಸವ ದಿನದ ಆಚರಣೆಯ ಚಿತ್ರವೂ ಇದೆ. ಅಬಿಸ್ಸಿನಿಯದಿಂದ ಬಂದ ಟಿಪ್ಪು ಸುಲ್ತಾನ್ ಕಾಲದ ಬಾಣಗಳು, ಈಟಿ-ಬರ್ಚಿಗಳನ್ನು ಇಲ್ಲಿ ಕಾಣಬಹುದು ಎಂದರು.
ಈ ವಸ್ತು ಸಂಗ್ರಹಾಲಯದ ಎಲ್ಲ ವಸ್ತುಗಳಿಗೆ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಹೆಸರು ಬರೆಯಲಾಗಿದೆ. ಪ್ರತಿ ಕಲಾಕೃತಿಗಳಿಗೆ ಸಂಬಂಧಿಸಿದ ಮಾಹಿತಿಗಳನ್ನು ಕೊಡುವಂತಹ ದೃಶ್ಯ-ಶ್ರವಣ ಮಾರ್ಗದರ್ಶಿ ಸಾಧನವೊಂದನ್ನು ಈ ವಸ್ತು ಸಂಗ್ರಹಾಲಯದಲ್ಲಿ ಅಳವಡಿಸುವ ಯೋಜನೆಯೂ ಇದೆ. ಕಾಲೇಜು ಕಳೆದ 130 ವರ್ಷಗಳಿಂದ ಸಂಗ್ರಹಿಸಿದ ಸ್ಥಳೀಯ ಮತ್ತು ಅಂತರರಾಷ್ಟ್ರೀಯ ವಸ್ತುಗಳ ಬಗ್ಗೆ ಸರಿಯಾದ ಶಿಕ್ಷಣ ನೀಡಿ ಸಂದರ್ಶಕರಿಗೆ ಸಂತಸ ಸಿಗುವ ತಾಣವಾಗಿ ಈ ವಸ್ತು ಸಂಗ್ರಹಾಲಯ ರೂಪುಗೊಳ್ಳಬೇಕು ಎನ್ನುವುದು ಸಂಸ್ಥೆಯ ಯೋಜನೆಯಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಫಾ.ಲಿಯೊ ಡಿಸೋಜ, ಫಾ.ಪ್ರದೀಪ್ ಉಪಸ್ಥಿತರಿದ್ದರು.