ಉಡುಪಿ ಜಿಲ್ಲೆಯಲ್ಲಿ ಸ್ವೀಪ್ ಚಟುವಟಿಕೆ ಆರಂಭ: ಸಿಂಧೂ ಬಿ.ರೂಪೇಶ್

Update: 2019-02-14 15:55 GMT

ಉಡುಪಿ, ಫೆ.14: ಜಿಲ್ಲೆಯಲ್ಲಿ 2019ರ ಲೋಕಸಭಾ ಚುನಾವಣೆಯಲ್ಲಿ ಮತದಾನದ ಪ್ರಮಾಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಜಿಲ್ಲಾ ಸ್ವೀಪ್ (ವ್ಯವಸ್ಥಿತ ಮತದಾರರ ಶಿಕ್ಷಣ ಮತ್ತು ಭಾಗವಹಿಸುವಿಕೆ ಕಾರ್ಯಕ್ರಮ) ಸಮಿತಿ ವತಿಯಿಂದ ಪರಿಣಾಮಕಾರಿ ಕಾರ್ಯಕ್ರಮಗಳನ್ನು ಆಯೋಜಿಸಿ, ಆ ಮೂಲಕ ಮತದಾನದ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುವುದು ಎಂದು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ಉಡುಪಿ ಜಿಪಂನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸಿಂಧೂ ಬಿ. ರೂಪೇಶ್ ತಿಳಿಸಿದ್ದಾರೆ.

ಮಣಿಪಾಲದಲ್ಲಿರುವ ಜಿಪಂನಲ್ಲಿ ಗುರುವಾರ, ಲೋಕಸಭಾ ಚುನಾವಣೆ- 2019ಕ್ಕೆ ಸಂಬಂಧಿಸಿದಂತೆ ಸ್ವೀಪ್ ಕಾರ್ಯಕ್ರಮದ ಅನುಷ್ಠಾನ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.

ಕಳೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲಾ ಸ್ವೀಪ್ ಸಮಿತಿ ಉತ್ತಮ ವಾಗಿ ಕಾರ್ಯ ನಿರ್ವಹಿಸಿದ್ದು, ಈ ಬಾರಿಯೂ ಸಹ ಅತ್ಯಂತ ಪರಿಣಾಮಕಾರಿ ಯಾಗಿ ಕಾರ್ಯ ನಿರ್ವಹಿಸಲು ಸಮಿತಿಯ ಎಲ್ಲಾ ಸದಸ್ಯರು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸುವಂತೆ ತಿಳಿಸಿದ ಸಿಂಧೂ ಬಿ ರೂಪೇಶ್, ಈ ಬಾರಿಯ ಸ್ವೀಪ್ ಕಾರ್ಯಕ್ರಮದಲ್ಲಿ ವಿವಿ ಪ್ಯಾಟ್ ಯಂತ್ರದ ಬಗ್ಗೆ ಮತ್ತು ಇವಿಎಂಗಳ ಕಾರ್ಯ ನಿರ್ವಹಣೆ ಬಗ್ಗೆ ಹೆಚ್ಚಿನ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ತಿಳಿಸಿದರು.

ಇವಿಎಂ ಮತ ಯಂತ್ರಗಳಿಗೆ ಕನೆಕ್ಟಿವಿಟಿ ಇಲ್ಲದಿರುವುದರಿಂದ ಯಾರೂ ಈ ಯಂತ್ರವನ್ನು ಹ್ಯಾಕ್ ಮಾಡಿ ನಿಯಂತ್ರಿಸಲು ಸಾಧ್ಯವಿಲ್ಲ. ಆದ್ದರಿಂದ ಈ ಯಂತ್ರದ ಮೂಲಕ ಪಾರದರ್ಶಕವಾಗಿ ಮತದಾನ ನಡೆಯುತ್ತದೆ. ಪ್ರತಿಯೊಬ್ಬರ ಮತವೂ ಸುರಕ್ಷಿತವಾಗಿರುತ್ತದೆ. ಇದುವರೆಗೆ ಇವಿಎಂ ಮತ ಯಂತ್ರದ ಬಗ್ಗೆ ದಾಖಲಾದ ದೂರುಗಳಲ್ಲಿ ಯಾವುದೇ ಯಂತ್ರಗಳು ದುರ್ಬಳಕೆಯಾದ ಬಗ್ಗೆ ಸಾಬೀತು ಆಗಿಲ್ಲ. ಅಲ್ಲದೇ ವಿವಿ ಪ್ಯಾಟ್ ಮೂಲಕ ಈಗ ತಾವು ಮತ ಹಾಕಿದ ಕುರಿತು ಸ್ವಯಂ ದೃಢಪಡಿಸಿಕೊಳ್ಳಲು ಸಹ ಸಾಧ್ಯವಿದೆ. ಆದ್ದರಿಂದ ಮತದಾರರು ಯಾವುದೇ ಗೊಂದಲಗಳಿಗೆ ಕಿವಿಗೊಡದೆ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ಸಿಇಓ ತಿಳಿಸಿದರು.

ಎಲ್ಲರನ್ನೂ ಒಳಗೊಳ್ಳುವ, ಸುಗಮ, ನೈತಿಕ ಚುನಾವಣೆ ಚುನಾವಣಾ ಆಯೋಗದ ಉದ್ದೇಶವಾಗಿದ್ದು, ಸಮಾಜದಲ್ಲಿನ ಲಿಂಗತ್ವ ಅಲ್ಪಸಂಖ್ಯಾತರು, ವಿಕಲ ಚೇತನರು ಸೇರಿದಂತೆ ಎಲ್ಲಾ ವರ್ಗದ ಜನರು ಮತಗಟ್ಟೆಗೆ ಬಂದು ಮತ ಚಲಾಯಿಸಲು ಅನುಕೂಲವಾಗುವಂತೆ ಎಲ್ಲಾ ರೀತಿಯ ಅಗತ್ಯ ಕಾರ್ಯಕ್ರಮಗಳನ್ನು ರೂಪಿಸುವಂತೆ ಸೂಚಿಸಿದ ಸಿಇಓ, ಯಾವುದೇ ಮತದಾರರು ಮತದಾನದಿಂದ ವಿಮುಖರಾಗದಂತೆಯೋಜನೆಗಳನ್ನು ರೂಪಿಸಿ, ಎಲ್ಲರನ್ನೂ ತಲುಪುವಂತಹ ವಿನೂತನ ಕಾರ್ಯಕ್ರಮಗಳನ್ನು ಏರ್ಪಡಿಸಿ, ಪ್ರಮುಖವಾಗಿ ಯುವ ಮತದಾರರಿಗೆ ಹೆಚ್ಚಿನ ಅರಿವು ಮೂಡಿಸಿ, ಸಾಮಾಜಿಕ ಜಾಲತಾಣಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಿ ಎಂದು ಹೇಳಿದರು.

ಜಿಲ್ಲೆಗೆ 2 ದಿನದಲ್ಲಿ ವಿವಿ ಪ್ಯಾಟ್‌ಯಂತ್ರಗಳು ಬರಲಿದ್ದು, ಅವುಗಳನ್ನು ಬಳಸಿಕೊಂಡು ಜಿಲ್ಲೆಯಾದ್ಯಂತ ಮತದಾರರಿಗೆ ಪ್ರಾತ್ಯಕ್ಷಿಕೆ ನೀಡಲು ಯೋಜನೆ ರೂಪಿಸಿ, ಎಲ್ಲಾ ಇಲಾಖೆಗಳು ತಮ್ಮ ಇಲಾಖೆ ವತಿಯಿಂದ ಹಮ್ಮಿಕೊಳ್ಳುವ ಕಾರ್ಯಕ್ರಮಗಳಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸಿ ಎಂದರು.
ಸಭೆಯಲ್ಲಿ ಜಿಪಂ ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News