×
Ad

ಉ.ಕನ್ನಡ ಜಿಲ್ಲೆಗೂ ವ್ಯಾಪಿಸಿದ ಮಂಗನ ಕಾಯಿಲೆ: ಕುಮಟ, ಹೊನ್ನಾವರದ ಮೂವರಲ್ಲಿ ಕೆಎಫ್‌ಡಿ ವೈರಸ್ ಪತ್ತೆ

Update: 2019-02-14 21:28 IST

ಉಡುಪಿ, ಫೆ.14: ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಕ್ಯಾಸನೂರು ಅರಣ್ಯಗಳಲ್ಲಿ ಮೊದಲ ಬಾರಿ ಕಾಣಿಸಿಕೊಂಡು ಸಾಗರ ತಾಲೂಕಿನಾದ್ಯಂತ ಅಧಿಕ ಪ್ರಮಾಣದಲ್ಲಿದ್ದ ಮಂಗನ ಕಾಯಿಲೆ, ಈಗ ಅಕ್ಕಪಕ್ಕದ ಜಿಲ್ಲೆಗಳಲ್ಲೂ ಕಾಣಿಸಿಕೊಳ್ಳುತಿದ್ದು, ಇದೀಗ ಉತ್ತರ ಕನ್ನಡ ಜಿಲ್ಲೆಯಲ್ಲೂ ಮೂವರು ಮಂಗನ ಕಾಯಿಲೆಯಿಂದ ನರಳುತ್ತಿರುವುದು ಪತ್ತೆಯಾಗಿದೆ.

ಈಗಾಗಲೇ ಉತ್ತರ ಕನ್ನಡ ಜಿಲ್ಲೆಗೆ ಪ್ರವಾಸಕ್ಕೆ ಬಂದ ಫ್ರಾನ್ಸ್‌ನ ಮಹಿಳೆ ಯೊಬ್ಬರು ಯಾಣದಲ್ಲಿ ಮಂಗನಕಾಯಿಲೆಗೆ ತುತ್ತಾಗಿ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಗುಣಮುಖರಾಗಿ ತೆರಳಿದ್ದು, ಈಗ ಕುಮಟಾ ಮತ್ತು ಹೊನ್ನಾವರಗಳಿಂದ ಚಿಕಿತ್ಸೆಗಾಗಿ ಕೆಎಂಸಿಗೆ ದಾಖಲಾದ ರೋಗಿಗಳಲ್ಲಿ ಕೆಎಫ್‌ಡಿ ವೈರಸ್ ಇರುವುದು ಪತ್ತೆಯಾಗಿದೆ ಎಂದು ಆಸ್ಪತ್ರೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಕುಮಟ ತಾಲೂಕಿನ ಇಬ್ಬರು ಹಾಗೂ ಹೊನ್ನಾವರ ತಾಲೂಕಿನ ಒಬ್ಬರಲ್ಲಿ ಮಂಗನಕಾಯಿಲೆ ವೈರಸ್ ಪತ್ತೆಯಾಗಿದೆ. ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನಿಂದ ಈವರೆಗೆ 191 ಮಂದಿ ಶಂಕಿತ ಮಂಗನಕಾಯಿಲೆಗಾಗಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಅಲ್ಲದೇ ಜ್ವರ ಮರುಕಳಿಸಿದ್ದರಿಂದ 9 ಮಂದಿ ಮರು ಸೇರ್ಪಡೆಗೊಂಡು ಚಿಕಿತ್ಸೆ ಪಡೆಯುತಿದ್ದಾರೆ. ಇವರಲ್ಲಿ ಒಟ್ಟು 73 ಮಂದಿಯಲ್ಲಿ ಮಂಗನಕಾಯಿಲೆ ಸೋಂಕು ಪತ್ತೆಯಾಗಿದೆ. ಈಗಾಗಲೇ 168 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾದರೆ, 25 ಮಂದಿ ಇನ್ನೂ ಚಿಕಿತ್ಸೆ ಪಡೆಯುತಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ದಿನದಲ್ಲಿ 6 ಮಂಗಗಳ ಕಳೇಬರ: ಉಡುಪಿ ಜಿಲ್ಲೆಯಲ್ಲಿ ಇಂದು ಇನ್ನೂ ಆರು ಮಂಗಗಳ ಕಳೇಬರ ಪತ್ತೆಯಾಗಿವೆ. ಸೋಮೇಶ್ವರ, ನಂದಳಿಕೆ, ಹಿರ್ಗಾನ, ಬೈಲೂರು, ಸಿದ್ಧಾಪುರ ಹೊಸಂಗಡಿ ಹಾಗೂ ಕಿರಿಮಂಜೇಶ್ವರಗಳಲ್ಲಿ ಈ ಸತ್ತ ಮಂಗಗಳ ಶವ ಪತ್ತೆಯಾಗಿವೆ. ಇವುಗಳಲ್ಲಿ ಒಂದರ ಅಟಾಪ್ಸಿ ಮಾತ್ರ ನಡೆಸಲಾಗಿದೆ ಎಂದು ಜಿಲ್ಲಾ ನೋಡೆಲ್ ಅಧಿಕಾರಿ ಡಾ.ಪ್ರಶಾಂತ್ ಭಟ್ ತಿಳಿಸಿದ್ದಾರೆ.

ಜಿಲ್ಲೆಯ 33 ಮಂದಿಯ ರಕ್ತವನ್ನು ಶಂಕಿತ ಮಂಗನಕಾಯಿಲೆ ಸೋಂಕಿಗಾಗಿ ಪರೀಕ್ಷೆಗೊಳಪಡಿಸಿದ್ದು, ಯಾವುದರಲ್ಲೂ ಸೋಂಕು ಪತ್ತೆಯಾಗಿಲ್ಲ. ಕುಂದಾಪುರ ತಾಲೂಕಿನಾದ್ಯಂತ ಖಾಸಗಿ ಸಂಘಸಂಸ್ಥೆಗಳ ಸಹಕಾರದಿಂದ ಜನರಿಗೆ ಇಎಂಪಿ ತೈಲವನ್ನು ಹಂಚಲಾಗುತ್ತಿದೆ. ಕಮಲಶಿಲೆ ದೇವಸ್ಥಾನದ ವತಿಯಿಂದ ವಿವಿಧ ಪಿಎಚ್‌ಸಿಗಳಿಗೆ 25,000ರೂ. ಮೌಲ್ಯದ ಡಿಎಂಪಿ ತೈಲವನ್ನು ನೀಡಲಾಗಿದೆ. ಅದೇ ರೀತಿ ಸಿದ್ಧಾಪುರದ ವಿಎಸ್‌ಎಸ್‌ಎನ್ ಬ್ಯಾಂಕ್‌ನ ವತಿಯಿಂದಲೂ 25,000ರೂ. ಮೌಲ್ಯದ ತೈಲವನ್ನು ಸಿದ್ದಾಪುರ ಪಿಎಚ್‌ಸಿಗೆ ನೀಡಲಾಗಿದೆ ಎಂದು ಡಾ.ಭಟ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News