ಕೋಟ ಜೋಡಿ ಕೊಲೆ ಪ್ರಕರಣ: ರೆಡ್ಡಿ ಸಹೋದರ ಸಹಿತ ಇಬ್ಬರ ಬಂಧನ
ಉಡುಪಿ, ಫೆ.14: ಕೋಟ ಮಣೂರು ಗ್ರಾಮದ ಚಿಕ್ಕನಕೆರೆ ಯುವಕರ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಚಂದ್ರ ಶೇಖರ್ ರೆಡ್ಡಿ(48) ಸಹಿತ ಇಬ್ಬರನ್ನು ಪೊಲೀಸರು ಬಂಧಿಸಿದ್ದು, ಈ ಮೂಲಕ ಪ್ರಕರಣದ ಬಂಧಿತ ಆರೋಪಿಗಳ ಸಂಖ್ಯೆ 15ಕ್ಕೆ ಏರಿದೆ.
ಕೊಲೆ ಕೃತ್ಯದಲ್ಲಿ ನೇರವಾಗಿ ಭಾಗಿಯಾಗಿದ್ದ ಮಣೂರು ಚಿಕ್ಕನಕೆರೆಯ ಚಂದ್ರಶೇಖರ್ ರೆಡ್ಡಿಯನ್ನು ಫೆ.14ರಂದು ಬಂಧಿಸಿದ್ದರೆ, ಇನ್ನೋರ್ವ ಆರೋಪಿ ಉಡುಪಿ ಬ್ರಹ್ಮಗಿರಿಯ ರತೀಶ್ ಎಂ.ಕರ್ಕೇರ(34) ಎಂಬಾತನನ್ನು ಫೆ.12 ರಂದು ಉಡುಪಿ ಸಿಟಿ ಆಸ್ಪತ್ರೆಯ ಬಳಿ ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ್ ನಿಂಬರ್ಗಿ ತಿಳಿಸಿದ್ದಾರೆ.
ಪಿಕ್‌ಅಪ್ ವಾಹನ ಹೊಂದಿರುವ ಚಂದ್ರಶೇಖರ್ ರೆಡ್ಡಿ ಚಾಲಕ ವೃತ್ತಿ ಮಾಡುತ್ತಿದ್ದನು. ಈತ ರೆಡ್ಡಿ ಸಹೋದರರಲ್ಲಿ ಹಿರಿಯವನಾಗಿದ್ದಾನೆ. ಈಗಾಗಲೇ ಈ ಪ್ರಕರಣದ ಪ್ರಮುಖ ಆರೋಪಿಗಳಾದ ಈತನ ತಮ್ಮಂದಿರಾದ ರಾಜ ಶೇಖರ ರೆಡ್ಡಿ(44) ಹಾಗೂ ಹರೀಶ್ ರೆಡ್ಡಿ(40)ಯನ್ನು ಪೊಲೀಸರು ಬಂಧಿಸಿದ್ದಾರೆ.
ರತೀಶ್ ಕರ್ಕೇರ ವ್ಯವಹಾರ ಮಾಡಿಕೊಂಡಿದ್ದು, ಕೊಲೆ ನಡೆದ ಬಳಿಕ ಪ್ರಮುಖ ಆರೋಪಿಗಳು ತಲೆಮರೆಸಿಕೊಳ್ಳಲು ಸಹಕಾರ ನೀಡಿದ ಆರೋಪ ಎದುರಿಸುತ್ತಿದ್ದಾನೆ. ಈತನನ್ನು ಪೊಲೀಸರು ಈಗಾಗಲೇ ಕುಂದಾಪುರ ನ್ಯಾಯಾ ಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಮಣೂರು ಗ್ರಾಮದ ಚಿಕ್ಕನಕೆರೆಯಲ್ಲಿ ಶೌಚಾಲಯ ಹೊಂಡದ ವಿವಾದಕ್ಕೆ ಸಂಬಂಧಿಸಿ ಭರತ್ ಕುಮಾರ್ ಮತ್ತು ಯತೀಶ್ ಎಂಬವರನ್ನು ಜ.26ರಂದು ಕೊಲೆಗೈದ ಪ್ರಕರಣದಲ್ಲಿ ಪೊಲೀಸರು ಈವರೆಗೆ ರಾಜಶೇಖರ ರೆಡ್ಡಿ, ಮೆಡಿಕಲ್ ರವಿ, ಉಡುಪಿ ಜಿಪಂ ಬಿಜೆಪಿ ಸದಸ್ಯ ರಾಘವೇಂದ್ರ ಕಾಂಚನ್, ಹರೀಶ್ ರೆಡ್ಡಿ, ಮಹೇಶ್ ಗಾಣಿಗ, ರವಿಚಂದ್ರ ಪೂಜಾರಿ, ಪೊಲೀಸ್ ಸಿಬ್ಬಂದಿಯಾದ ಪವನ್ ಅಮೀನ್ ಮತ್ತು ವೀರೇಂದ್ರ ಆಚಾರ್ಯ, ಅಭಿಷೇಕ್ ಪಾಲನ್, ಸಂತೋಷ್ ಕುಂದರ್, ರೊಟ್ಟಿ ನಾಗರಾಜ, ವಿದ್ಯಾರ್ಥಿ ಪ್ರಣವ್ ರಾವ್, ಶಂಕರ ಮೊಗವೀರ ಎಂಬವರನ್ನು ಬಂಧಿಸಿದ್ದರು.
ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಕಲಂ 143, 147, 148, 447, 120(ಬಿ), 323, 307, 302, 112, 201, 212 ಜೊತೆಗೆ 149 ಐಪಿಸಿ ಪ್ರಕರಣವನ್ನು ದಾಖಲಿಸಲಾಗಿದೆ.
ನಾಳೆ ಎಲ್ಲ ಆರೋಪಿಗಳು ಕೋರ್ಟ್‌ಗೆ ಹಾಜರು
ಮಣೂರು ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸ್ ಕಸ್ಟಡಿ ಹಾಗೂ ನ್ಯಾಯಾಂಗ ಬಂಧನದಲ್ಲಿರುವ ಎಲ್ಲ ಆರೋಪಿಗಳನ್ನು ಪೊಲೀಸರು ಫೆ.15ರಂದು ಬಿಗಿ ಭದ್ರತೆಯಲ್ಲಿ ಕುಂದಾಪುರ ಹೆಚ್ಚುವರಿ ಜೆಎಂಎಫ್‌ಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಿದ್ದಾರೆ.
ರಾಜಶೇಖರ ರೆಡ್ಡಿ, ಮೆಡಿಕಲ್ ರವಿ, ರಾಘವೇಂದ್ರ ಕಾಂಚನ್, ಹರೀಶ್ ರೆಡ್ಡಿ, ಮಹೇಶ್ ಗಾಣಿಗ, ರವಿಚಂದ್ರ ಪೂಜಾರಿ ಎಂಬವರ ಪೊಲೀಸ್ ಕಸ್ಟಡಿ ಹಾಗೂ ಪವನ್ ಅಮೀನ್, ವೀರೇಂದ್ರ ಆಚಾರ್ಯ, ಅಭಿಷೇಕ್ ಪಾಲನ್, ಸಂತೋಷ್ ಕುಂದರ್, ರೊಟ್ಟಿ ನಾಗರಾಜ, ಪ್ರಣವ್ ರಾವ್, ಶಂಕರ ಮೊಗವೀರ, ರತೀಶ್ ಕರ್ಕೇರ ಎಂಬವರ ನ್ಯಾಯಾಂಗ ಬಂಧನದ ಅವಧಿಯು ಫೆ.15ಕ್ಕೆ ಮುಗಿಯಲಿರುವುದರಿಂದ ಪೊಲೀಸರು ಎಲ್ಲರನ್ನು ನಾಳೆ ನ್ಯಾಯಾಲಯದ ಮುಂದೆ ಹಾಜರುಪಡಿಸಲಿದ್ದಾರೆ. ಇವರೆಲ್ಲರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಇಂದು ಬಂಧಿಸಲ್ಪಟ್ಟು ಇದೀಗ ಪೊಲೀಸರ ವಶದಲ್ಲಿರುವ ಚಂದ್ರಶೇಖರ್ ರೆಡ್ಡಿಯನ್ನು ಕೂಡ ಪೊಲೀಸರು ನಾಳೆಯೇ ನ್ಯಾಯಾಲಯಕ್ಕೆ ಹಾಜರುಪಡಿಸ ಲಿದ್ದಾರೆ. ಪ್ರಕರಣದ ಪ್ರಮುಖ ಆರೋಪಿಯಾಗಿರುವ ಈತನನ್ನು ಪೊಲೀಸ್ ಕಸ್ಟಡಿಗೆ ಪಡೆದುಕೊಳ್ಳಬೇಕೆ ಅಥವಾ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಬೇಕೆ ಎಂಬುದರ ಬಗ್ಗೆ ಇನ್ನಷ್ಟೆ ನಿರ್ಧಾರವಾಗಬೇಕಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.