ಮಾ.11ರಿಂದ ಮರಳು ಸಮಸ್ಯೆ ವಿರುದ್ಧ ಅಹೋರಾತ್ರಿ ಧರಣಿ

Update: 2019-02-14 16:48 GMT

ಉಡುಪಿ, ಫೆ.14: ಉಡುಪಿ ಜಿಲ್ಲಾ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಭೆಯು ಫೆ.13ರಂದು ಉಡುಪಿಯ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಸಂಘದ ಕಚೇರಿಯಲ್ಲಿ ಯು.ದಾಸ ಭಂಡಾರಿ ಅಧ್ಯಕ್ಷತೆಯಲ್ಲಿ ಜರುಗಿತು.

ಮರಳು ಸಮಸ್ಯೆ ಪರಿಹಾರಕ್ಕಾಗಿ ನಿರಂತರವಾಗಿ ಪ್ರತಿಭಟಿಸುತ್ತಿದ್ದರೂ ಪರಹರಿಸಲು ಸರಕಾರ ಮನಸ್ಸು ಮಾಡದಿರುವುದು ಜನತೆಗೆ ಎಸಗಿದ ದ್ರೋಹ ಎಂದು ಅಭಿಪ್ರಾಯಪಟ್ಟ ಸಭೆಯು, ಮರಳು ಸಮಸ್ಯೆ ಕುರಿತು ಗಂಭೀರವಾಗಿ ಚರ್ಚಿಸಿ ಮಾ.11ರಿಂದ ಸಮನ್ವಯ ಸಮಿತಿ ನೇತೃತ್ವದಲ್ಲಿ ಉಡುಪಿ ಜಿಲ್ಲೆಯಾ ದ್ಯಂತ ತಾಲೂಕು ಕೇಂದ್ರಗಳಲ್ಲಿ ಅಹೋರಾತ್ರಿ ಧರಣಿ ನಡೆಸಿ ಉಗ್ರವಾಗಿ ಪ್ರತಿಭಟಿಸಲು ನಿರ್ಧರಿಸಲಾಯಿತು.

ಕೇಂದ್ರ ಸರಕಾರವು ಕಟ್ಟಡ ಕಾರ್ಮಿಕರ 1996 ಕಾನೂನು ರದ್ದುಗೊಳಿಸಿ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತ ಸಂಹಿತೆ ಜಾರಿ ಮಾಡಲು ಹೊರಟಿರುವುದನ್ನು ಸಭೆಯಲ್ಲಿ ತೀವ್ರವಾಗಿ ಖಂಡಿಸಲಾಯಿತು. ಅಲ್ಲದೇ ರಾಷ್ಟ್ರ ವ್ಯಾಪಿಯಾಗಿ ಕಟ್ಟಡ ಕಾರ್ಮಿಕರ ಸಂಘಟನೆಯು ಸಿಡಬ್ಲುಎಫ್‌ಐ ನೇತೃತ್ವದಲ್ಲಿ ಸಂಸದರ ಮನೆ ಮುಂದೆ ನಡೆಯುವ ಪ್ರತಿಭಟನೆ ಹಾಗೂ ಸಹಿ ಸಂಗ್ರಹದ ಮನವಿಯನ್ನು ಸಂಸದರಿಗೆ ಸಲ್ಲಿಸಿ ಸಂಸತ್ತಿನಲ್ಲಿ ಕಾರ್ಮಿಕ ಮಂಡಳಿ ಉಳಿಸಲು ಧ್ವನಿಯೆತ್ತುವಂತೆ ಒತ್ತಾಯಿಸುವ ಹೋರಾಟವನ್ನು ಉಡುಪಿ ಜಿಲ್ಲೆಯಲ್ಲೂ ಯಶಸ್ವಿಯಾಗಿ ನಡೆಸಲು ತೀರ್ಮಾನಿಸಲಾಯಿತು.

ಸಭೆಯಲ್ಲಿ ಜಿಲ್ಲಾ ಸಂಚಾಲಕ ಸುರೇಶ್ ಕಲ್ಲಾಗರ, ಶೇಖರ ಬಂಗೇರ ಉಡುಪಿ, ಬಾಲಕೃಷ್ಣ ಶೆಟ್ಟಿ, ರಾಜೀವ ಪಡುಕೋಣೆ, ವೆಂಕಟೇಶ ಕೋಣಿ, ಗಣೇಶ ನಾಯ್ಕ್, ಅರುಣ್ ಕುಮಾರ್ ಗಂಗೊಳ್ಳಿ, ಚಿಕ್ಕ ಮೊಗವೀರ, ಗಣೇಶ ಮೊಗವೀರ ಬೈಂದೂರು, ವಾಮನ ಪೂಜಾರಿ ಮೊದಲಾದವರು ಉಪಸ್ಥತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News